ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಂಜಲಿ ತೈಲ ಘಟಕ ಮುಚ್ಚಲು ಶಿಫಾರಸು

ಸ್ಥಳೀಯ ನದಿಗೆ ತ್ಯಾಜ್ಯವನ್ನು ಶುದ್ಧೀಕರಿಸದೆಯೇ ಹರಿಯ ಬಿಟ್ಟ ಘಟಕ
Published 3 ಜೂನ್ 2023, 20:15 IST
Last Updated 3 ಜೂನ್ 2023, 20:15 IST
ಅಕ್ಷರ ಗಾತ್ರ

ಮಂಗಳೂರು: ಗುರುಪುರ (ಫಲ್ಗುಣಿ) ನದಿಯನ್ನು ಸೇರುವ ನೈಸರ್ಗಿಕ ನಾಲೆಗೆ ಕೈಗಾರಿಕಾ ಘಟಕದ ಕಲುಷಿತ ನೀರನ್ನು ಶುದ್ಧೀಕರಿಸದೆಯೇ ಬಿಟ್ಟ ಬೈಕಂಪಾಡಿಯ ಮೆ. ಪತಂಜಲಿ ಫುಡ್ಸ್‌ ಲಿಮಿಟೆಡ್‌ (ಹಿಂದಿನ ಹೆಸರು ರುಚಿ ಸೋಯಾ ಇಂಡಸ್ಟ್ರೀಸ್‌) ಕಂಪನಿಯ ಖಾದ್ಯ ತೈಲ ತಯಾರಿಕಾ ಘಟಕವನ್ನು ಮುಚ್ಚಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಪ್ರಾದೇಶಿಕ ಕಚೇರಿಯು ಮಂಡಳಿಯ ಸದಸ್ಯ ಕಾರ್ಯದರ್ಶಿಗೆ ಶಿಫಾರಸು ಮಾಡಿದೆ. 

ಖಾದ್ಯ ತೈಲ ಉತ್ಪಾದಿಸುವ ಈ ಕಂಪನಿಯು 1974ರ ಜಲ ಕಾಯ್ದೆಯನ್ನು ಉಲ್ಲಂಘಿಸಿದ್ದು, ಅದರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಕ್ಕೆ ಆಡಳಿತಾತ್ಮಕ ಅನುಮತಿ ನೀಡುವಂತೆ ಕೆಎಸ್‌ಪಿಸಿಬಿಯ ಇಲ್ಲಿನ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಯು, ಮಂಡಳಿಯ ಸದಸ್ಯ ಕಾರ್ಯದರ್ಶಿಗೆ ಮೇ 31ರಂದು ಬರೆದ ಪತ್ರದಲ್ಲಿ ಕೋರಿದ್ದಾರೆ.

‘ಪತಂಜಲಿ ಫುಡ್ಸ್‌ ಘಟಕದಿಂದ ಸ್ಥಳೀಯ ನಾಲೆಗೆ ಹರಿಯಬಿಟ್ಟಿದ್ದ ನೀರಿನಲ್ಲಿ ಮಿತಿಗಿಂತ ಜಾಸ್ತಿ ಪ್ರಮಾಣದಲ್ಲಿ ಕೈಗಾರಿಕಾ ತ್ಯಾಜ್ಯ ಇರುವುದು ಏಪ್ರಿಲ್‌ 6ರಂದು ಸ್ಥಳ ಪರಿಶೀಲನೆ ನಡೆಸಿದಾಗ ಕಂಡು ಬಂದಿತ್ತು. ಘಟಕಕ್ಕೆ ನೋಟಿಸ್‌ ನೀಡಿದ್ದೆವು. ಮೇ 31ರಂದು ಮತ್ತೆ ಮಾದರಿ ಸಂಗ್ರಹಿಸಿದಾಗ, ನಾಲೆಯ ನೀರು ಕಲುಷಿತಗೊಂಡು ಕಪ್ಪು ಬಣ್ಣಕ್ಕೆ ತಿರುಗಿತ್ತು. ನಾಲೆಯ ನೀರಿನಲ್ಲಿ ಜಿಡ್ಡಿನ ದಪ್ಪನೆಯ ಪದರ ಭಾರಿ ಪ್ರಮಾಣದಲ್ಲಿ ಕಂಡುಬಂದಿದೆ. ಈ ಕೈಗಾರಿಕೆಯಿಂದಲೇ ತೈಲಾಂಶವು ಸೋರಿಕೆಯಾದ ಕುರುಹು ಇದು’ ಎಂದು ಕೆಎಸ್‌ಪಿಸಿಬಿ ಹೇಳಿದೆ.

‘ಕಂಪನಿಯ ಟ್ಯಾಂಕರ್‌ ಏಪ್ರಿಲ್‌ 28ರಂದು ಅಪಘಾತಕ್ಕೀಡಾಗಿದ್ದು, ಅದರಿಂದ ಸುಮಾರು 10 ಟನ್‌ಗಳಷ್ಟು ತಾಳೆ ಎಣ್ಣೆಯ ಘನ ಪದಾರ್ಥ ನಾಲೆಯನ್ನು ಸೇರಿದೆ ಎಂದು ಕಂಪನಿಯ ಪ್ರತಿನಿಧಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ದುರ್ಘಟನೆ ನಡೆದ ಬಳಿಕವೂ ಅವರು ಮಂಡಳಿಗೆ ಮಾಹಿತಿ ನೀಡಿಲ್ಲ’ ಎಂದು ಪ್ರಾದೇಶಿಕ ಅಧಿಕಾರಿಯು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪತಂಜಲಿ ಫುಡ್ಸ್‌ ಲಿಮಿಟೆಡ್‌ ಸಂಸ್ಥೆಯವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ತಾಳೆ ಎಣ್ಣೆಯ ಘನ ಪದಾರ್ಥವನ್ನು ನೈಸರ್ಗಿಕ ನಾಲೆಗೆ ಹರಿಯಬಿಟ್ಟಿದ್ದಕ್ಕೆ ಪತಂಜಲಿ ಫುಡ್ಸ್‌ ಘಟಕವನ್ನು ಮುಚ್ಚುವಂತೆ ಶಿಫಾರಸು ಮಾಡಿದ್ದೇವೆ.
ವಿಜಯಾ ಹೆಗಡೆ ಹಿರಿಯ ಪರಿಸರ ಅಧಿಕಾರಿ ಕೆಎಸ್‌ಪಿಸಿಬಿ ಮಂಗಳೂರು
ಪತಂಜಲಿ ಘಟಕ ಮುಚ್ಚಲು ಒತ್ತಾಯ
ಜಲ ಮಾಲಿನ್ಯಕ್ಕೆ ಕಾರಣವಾಗಿರುವ ಮೆ. ಪತಂಜಲಿ ಫುಡ್ಸ್‌ ಲಿಮಿಟೆಡ್‌ ಕಂಪನಿಯ ಖಾದ್ಯ ತೈಲ ತಯಾರಿಕಾ ಘಟಕವನ್ನು ಮುಚ್ಚುವಂತೆ ಒತ್ತಾಯಿಸಿ ಸ್ಥಳೀಯರು ಘಟಕದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು. ‘ಕಂಪನಿಯು ಜಲ ಮಾಲಿನ್ಯ ಉಂಟುಮಾಡಿರುವ ಬಗ್ಗೆ ಕೆಎಸ್‌ಪಿಸಿಬಿಗೆ ಸಾಕ್ಷ್ಯಗಳು ಸಿಕ್ಕಿವೆ. ಜಿಲ್ಲಾಮಟ್ಟದ ಅಧಿಕಾರಿಗಳು ಶಿಫಾರಸು ಮಾಡಿದ ಮೇಲೂ ಪತಂಜಲಿಯ ಘಟಕವನ್ನು ಮುಚ್ಚಲು ಎಷ್ಟು ಸಮಯ ಬೇಕು’ ಎಂದು ನಾಗರಿಕ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT