ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಬಾಳಿಗೆ ನೆರವಾದ ಕುದ್ರೋಳಿ ಕ್ಷೇತ್ರ

300 ಕ್ವಿಂಟಲ್ ಅಕ್ಕಿ ವಿತರಣೆ; ನಿತ್ಯ ಸಾವಿರ ಮಂದಿಗೆ ಅನ್ನದಾನ
Last Updated 1 ಮೇ 2020, 15:59 IST
ಅಕ್ಷರ ಗಾತ್ರ

ಮಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ದಕ್ಷಿಣ ಕನ್ನಡ ಜಿಲ್ಲೆಯ ದಿನಗೂಲಿ ಕಾರ್ಮಿಕರು, ಬಡವರು, ಜನಸಾಮಾನ್ಯರಿಗೆ ಜೀವನ ಸಾಗಿಸಲು ಅನುಕೂಲವಾಗುವಂತೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಿಂದ 300ಕ್ವಿಂಟಲ್ ಅಕ್ಕಿ ವಿತರಣೆ ಮಾಡಲಾಗುತ್ತಿದ್ದು, ನಿತ್ಯ 1 ಸಾವಿರ ಮಂದಿಗೆ ದೇವಸ್ಥಾನದಿಂದಲೇ ಅನ್ನದಾನ ವಿತರಣೆ ಮಾಡಲಾಗುತ್ತಿದೆ.

ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿಯವರ ಸಲಹೆಯಂತೆ ಈ ಅಕ್ಕಿ ವಿತರಣೆ ಕಾರ್ಯ ಆರಂಭಗೊಂಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಾರಂಭದಲ್ಲಿ 100 ಕ್ವಿಂಟಲ್ ಅಕ್ಕಿ ನೀಡುವ ಉದ್ದೇಶ ಹೊಂದಲಾಗಿತ್ತು. ಬಳಿಕ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈವರೆಗೆ 2,268 ಕ್ವಿಂಟಲ್ ಅಕ್ಕಿ ವಿತರಣೆ ಮಾಡಲಾಗಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.

ಕುದ್ರೋಳಿ ಕ್ಷೇತ್ರದಿಂದ ನೀಡಲಾಗುವ ಬಡವರ ನೆರವಿಗೆ ಕ್ಷೇತ್ರದ ಭಕ್ತರು ಮಾತ್ರವಲ್ಲದೇ ದಾನಿಗಳೂ ಉತ್ತಮ ಸಹಕಾರ ನೀಡುತ್ತಿದ್ದಾರೆ. ಲಾಕ್‌ಡೌನ್ ಕಾರಣದಿಂದ ದೇವಾಲಯದಲ್ಲಿ ಅಕ್ಕಿ ವಿತರಣೆ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬೇಡಿಕೆಯಿರುವ ಪ್ರದೇಶದಲ್ಲಿರುವ ಸ್ಥಳೀಯ ಅಂಗಡಿಯಿಂದಲೇ ಅಕ್ಕಿ ಪೂರೈಸುವ ಕಾರ್ಯ ಮಾಡಲಾಗುತ್ತಿದೆ. ಇದನ್ನು ಜಿಲ್ಲೆಯ ನಾನಾ ಊರಿನ ಸಂಘ ಸಂಸ್ಥೆಗಳ ಮೂಲಕ ವಿತರಿಸಲು ಉದ್ದೇಶಿಸಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆಯಿಂದ ಅಕ್ಕಿಗೆ ಬೇಡಿಕೆ ಬಂದಿದ್ದು, ಯಾರನ್ನೂ ನಿರಾಸೆಗೊಳಿಸದೆ ಅಕ್ಕಿ ವಿತರಣೆ ಮಾಡಲಾಗಿದೆ. ಟೈಲರ್ ಅಸೋಸಿಯೇಶನ್, ಫೋಟೋಗ್ರಾಫರ್ ಅಸೋಸಿಯೇಶನ್ ಕೂಡಾ ಅಕ್ಕಿ ಬೇಡಿಕೆ ಸಲ್ಲಿಸಿದ್ದು, ಅವರಿಗೂ ವಿತರಿಸಲಾಗಿದೆ ಎಂದು ಹೇಳಿದ್ದಾರೆ.

1ಸಾವಿರ ಮಂದಿಗೆ ನಿತ್ಯ ಅನ್ನದಾನ: ಕುದ್ರೋಳಿ ದೇವಸ್ಥಾನವು ‘ಕಲ್ಪ ಟ್ರಸ್ಟ್’ ಸಹಕಾರದಿಂದ ಹೊರ ರಾಜ್ಯದ, ಹೊರ ಜಿಲ್ಲೆಯ ಕೂಲಿ ಕಾರ್ಮಿಕರು, ನಿರಾಶ್ರಿತರು, ಕೆಲಸವಿಲ್ಲದೆ ಅನ್ನಕ್ಕೆ ಪರದಾಡುತ್ತಿರುವ ಸುಮಾರು 1ಸಾವಿರ ಮಂದಿಗೆ ನಿತ್ಯ ಅನ್ನದಾನ ಮಾಡುತ್ತಿದೆ. ಈ ಮೂಲಕ ಮಾರ್ಚ್ 26 ರಿಂದ ಬಡವರ ಹೊಟ್ಟೆ ತಣಿಸುವ ಕೆಲಸವನ್ನು ಕ್ಷೇತ್ರದಿಂದ ಮಾಡಲಾಗುತ್ತಿದೆ.

ಲಾಕ್‌ಡೌನ್ ಜಾರಿಯಾದ ಬಳಿಕ ಬಹಳಷ್ಟು ಜನ ಹೊರ ರಾಜ್ಯದ, ಹೊರ ಜಿಲ್ಲೆಯ ಕಾರ್ಮಿಕರು ಮಾಡಲು ಕೆಲಸವಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಅವರಿಗೆ ನೆರವಾಗುವ ದೃಷ್ಟಿಯಿಂದ ಈ ಅನ್ನದಾನ ಮಾಡುವ ಕಾರ್ಯಕ್ಕೆ ದೇವಳ ಕೈ ಹಾಕಿದೆ. ನಿತ್ಯ ದೇವಾಲಯದ ವತಿಯಿಂದಲೇ ಎಲ್ಲ ಆಹಾರ ಸಾಮಗ್ರಿಗಳನ್ನು ಭರಿಸಿ ಬಡವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT