ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ: ಚಂಪಾಷಷ್ಠಿ ಉತ್ಸವ ಆರಂಭ

ಒಲೆಗಳ ಮೇಲೆ ಕೊಪ್ಪರಿಗೆ ಏರಿಸುವ ಮೂಲಕ ಚಾಲನೆ
Last Updated 2 ಡಿಸೆಂಬರ್ 2021, 4:44 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಕಾರ್ತಿಕ ಬಹುಳ ದ್ವಾದಶಿಯಾದ ಬುಧವಾರ ಕೊಪ್ಪರಿಗೆ ಏರಿಸುವ ಮೂಲಕ ಕುಕ್ಕೆ ದೇಗುಲದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಆರಂಭವಾಯಿತು.

ಎಲ್ಲಾ ಕ್ಷೇತ್ರಗಳಲ್ಲಿ ಕೊಡಿ ಏರುವುದರ ಮೂಲಕ ಜಾತ್ರೆಗೆ ಚಾಲನೆ ಲಭಿಸಿದರೆ, ಕುಕ್ಕೆ ಕ್ಷೇತ್ರದಲ್ಲಿ ಮಾತ್ರ ಕೊಪ್ಪರಿಗೆ ಏರಿಸುವುದರೊಂದಿಗೆ ಜಾತ್ರೋತ್ಸವ ಪ್ರಾರಂಭಗೊಳ್ಳುವುದು ವಿಶೇಷ. ಸಂಪ್ರದಾಯದಂತೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ವಿದಿ ವಿಧಾನಗಳನ್ನು ನೆರವೇರಿಸಿದರು.

ಪ್ರಧಾನ ಅರ್ಚಕರು ‘ರಾಮಲಕ್ಷ್ಮಣ’ ಹೆಸರಿನ ಜೋಡಿ ಅನ್ನದ ಕೊಪ್ಪರಿಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಳದ ಒಳಾಂಗಣದಲ್ಲಿರುವ ದೊಡ್ಡದಾದ ಎರಡು ಒಲೆಗಳ ಮೇಲೆ ಅನ್ನದಾನದ ಸಂಕೇತವಾದ ಕೊಪ್ಪರಿಗೆಗಳನ್ನು ಏರಿಸಲಾಯಿತು. ಕೊಪ್ಪರಿಗೆಗಳಲ್ಲಿ ಅನ್ನ ಬೆಂದ ಬಳಿಕ ಅದಕ್ಕೆ ಪೂಜೆ ಸಲ್ಲಿಸಲಾಯಿತು. ಭಕ್ತರು ಭಕ್ತಿಯಿಂದ ಕೊಪ್ಪರಿಗೆ ಅನ್ನ ಊಟ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯೆ ವನಜಾ.ವಿ.ಭಟ್, ಪ್ರಸನ್ನ ದರ್ಬೆ, ಪಿಜಿಎಸ್ಎನ್ ಪ್ರಸಾದ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ಲೋಕೇಶ್ ಮುಂಡುಕಜೆ, ಎಇಒ ಪುಷ್ಪಲತಾ ರಾವ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಮನೋಜ್ ಸುಬ್ರಹ್ಮಣ್ಯ, ಕಿಶೋರ್ ಕುಮಾರ್ ಕೂಜುಗೋಡು, ಚಂದ್ರಶೇಖರ ಮರ್ಧಾಳ, ಚಂದ್ರಶೇಖರ ನಲ್ಲೂರಾಯ ಇದ್ದರು. ಕೂಜುಗೋಡು ಮನೆತನದವರಿಂದ ದೇವಳಕ್ಕೆ ಹಸಿರು ಕಾಣಿಕೆ ಸಮರ್ಪಣೆ ನಡೆಯಿತು. ಬಳಿಕ ಅವರು ಕೊಪ್ಪರಿಗೆಗೆ ಬಲಿವಾಡು ಅಕ್ಕಿ ಅರ್ಪಿಸಿದರು.

ಪೂಕರೆ ಉತ್ಸವ

ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಳದಲ್ಲಿ ಮಂಗಳವಾರ ರಾತ್ರಿ ಪೂಕರೆ ಉತ್ಸವ ಕುಂಟಾರು ರವೀಶ್ ತಂತ್ರಿ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ದೇವಳದ ಪಶ್ಚಿಮ ದ್ವಾರದಿಂದ ದೇವರ ಪೇಟೆ ಸವಾರಿ ನಡೆಯಿತು. ಎತ್ತಿನ ಮುಖವಾಡ ಧರಿಸಿದ ಎರುಕುಳ ದೈವದ ಜತೆಗೆ ನೆಲ್ಲಿಕಟ್ಟೆಯಲ್ಲಿರುವ ಪೂಕರೆ ಕಟ್ಟೆಗೆ ತೆರಳಿದ ದೇವರು ಅಲ್ಲಿ ದೇವಳದ ಗದ್ದೆಯನ್ನು ನೋಡಿದ ಬಳಿಕ ಪೂಕರೆಕಟ್ಟೆಯಲ್ಲಿ ಕುಳಿತು ಆರತಿ ಸ್ವೀಕರಿಸಿದರು. ಕುಂಟಾರು ರವೀಶ ತಂತ್ರಿ ಮತ್ತು ಪ್ರಧಾನ ಅರ್ಚಕ ವಿ.ಎಸ್ ಭಟ್ ಅವರು ಮೂಲ ನಾಗ ಸನ್ನಿಧಿಗೆ ತೆರಳಿದರು.

ತಂತ್ರಿಗಳು ಮೂಲ ನಾಗಸನ್ನಿಧಿ ಮತ್ತು ಪೂಕರೆ ಗದ್ದೆಗೆ ತಂತ್ರ ತೂಗಿದ ಬಳಿಕ ಪ್ರಧಾನ ಅರ್ಚಕ ವಿ.ಎಸ್ ಭಟ್ ಅವರು ನಾಗ ತಂಬಿಲ ನೆರವೇರಿಸಿದರು. ಪೂಕರೆ ಸಿದ್ಧ ಪಡಿಸಿದ ಸ್ಥಳದಲ್ಲಿ ಹಿರಿಯರಾದ ಕಿಟ್ಟಣ್ಣ ಗೌಡ ಬಪ್ಪಳಿಗೆ ಅವರು ನುಡಿಗಟ್ಟಿನೊಂದಿಗೆ ಪ್ರಾರ್ಥಿಸಿದರು. ಪೂಕರೆ ಉತ್ಸವಕ್ಕೆ ಸಂಬಂಧಿಸಿದವರು ದೇವರಮಾರು ಗದ್ದೆ ಮತ್ತು ಬಾಕಿತಮಾರು ಗದ್ದೆಯಲ್ಲಿ ಪೂಕರೆ ಇಟ್ಟು ಪ್ರಾರ್ಥನೆ ಸಲ್ಲಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಕಾರ್ಯ ನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ, ರಾಮಚಂದ್ರ ಕಾಮತ್, ಶೇಖರ್ ನಾರಾವಿ, ಡಾ. ಸುಧಾ ಎಸ್. ರಾವ್, ರಾಮ್‌ದಾಸ್‌ ಗೌಡ, ವೀಣಾ ಬಿ.ಕೆ, ರವೀಂದ್ರನಾಥ ರೈ ಬಳ್ಳಮಜಲು, ಬಿ.ಐತ್ತಪ್ಪ ನಾಯ್ಕ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಚಿದಾನಂದ ಬೈಲಾಡಿ, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ದೇವಪ್ಪನೋಂಡ, ರಾಜೇಶ್ ಬನ್ನೂರು, ರತ್ನಾಕರ ನಾಕ್, ಪ್ರಸಾದ್ ಶೆಟ್ಟಿ, ಶ್ರೀಧರ್ ಪಟ್ಲ, ಯು.ಲೋಕೇಶ್ ಹೆಗ್ಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT