ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೈತ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆ ವಾಪಸ್‌

ಎಂಟು ತಿಂಗಳ ಯಾತನೆಯ ಬಳಿಕ ತವರಿಗೆ ಮರಳಿದ ರೇಷ್ಮಾ ಸುವರ್ಣ
Last Updated 22 ಸೆಪ್ಟೆಂಬರ್ 2019, 19:38 IST
ಅಕ್ಷರ ಗಾತ್ರ

ಮಂಗಳೂರು: ಉದ್ಯೋಗಕ್ಕೆಂದು ಕುವೈತ್‌ಗೆ ತೆರಳಿ ಎಂಟು ತಿಂಗಳಿನಿಂದ ನರಕಯಾತನೆ ಅನುಭವಿಸುತ್ತಿದ್ದ ನಗರದ ಬೆಂಗರೆ ಸ್ಯಾಂಡ್‌ ಪಿಟ್‌ ನಿವಾಸಿ ರೇಷ್ಮಾ ಸುವರ್ಣ ಶನಿವಾರ ಕುಟುಂಬವನ್ನು ಸೇರಿಕೊಂಡಿದ್ದಾರೆ.

ಮೂಡುಬಿದಿರೆಯ ಜಬ್ಬಾರ್‌ ಮತ್ತು ಕೇರಳದ ಅನ್ವರ್‌ ಎಂಬ ಏಜೆಂಟರ ಮೂಲಕ ಜನವರಿಯಲ್ಲಿ ರೇಷ್ಮಾ ಕುವೈತ್‌ಗೆ ತೆರಳಿದ್ದರು. ಅಲ್ಲಿ ಆತ ಮನೆಗೆಲಸಕ್ಕೆ ಸೇರಿಸಿದ್ದ. ಪತಿಯ ಶವ ಸಂಸ್ಕಾರಕ್ಕೂ ತವರಿಗೆ ಬರಲು ಮನೆಯ ಮಾಲೀಕರು ಅವಕಾಶ ನೀಡಿರಲಿಲ್ಲ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಅಳಲು ತೋಡಿಕೊಂಡಿದ್ದರು.

ಕುವೈತ್‌ನಲ್ಲಿ ಉದ್ಯಮಿಗಳಾಗಿರುವ ಮೋಹನ್‌ ದಾಸ್‌ ಕಾಮತ್‌, ರಾಜ್‌ ಭಂಡಾರಿ, ಮಾಧವ ನಾಯಕ್‌ ಮತ್ತು ದಿನೇಶ್‌ ಸುವರ್ಣ, ವಿಜಯ್‌ ಫರ್ನಾಂಡಿಸ್‌ ಮತ್ತು ಪ್ರಶಾಂತ್‌ ಮೊಗವೀರ ಮಹಿಳೆಯ ನೆರವಿಗೆ ಧಾವಿಸಿದ್ದರು. ಜುಲೈ ತಿಂಗಳಿನಲ್ಲಿ ಘನ ತ್ಯಾಜ್ಯ ಎಸೆಯಲು ಬಂದಾಗ ಮಾಲೀಕರ ಕಣ್ಣುತಪ್ಪಿಸಿ ಈ ತಂಡದ ನೆರವಿನೊಂದಿಗೆ ರೇಷ್ಮಾ ಅವರು ಕುವೈತ್‌ನ ಭಾರತೀಯ ರಾಯಭಾರ ಕಚೇರಿಗೆ ಬಂದಿದ್ದರು.

ಎರಡು ತಿಂಗಳ ಕಾಲ ರಾಯಭಾರ ಕಚೇರಿಯ ಪುನರ್ವಸತಿ ಕೇಂದ್ರದಲ್ಲಿ ರೇಷ್ಮಾ ಇದ್ದರು. ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ರಾಯಭಾರ ಕಚೇರಿ ಅಧಿಕಾರಿಗಳು, ಇವರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದರು. ಶುಕ್ರವಾರ ಮುಂಬೈಗೆ ಬಂದಿಳಿದ ರೇಷ್ಮಾ, ಶನಿವಾರ ಮಂಗಳೂರು ತಲುಪಿದ್ದಾರೆ.

‘ಕೆಲಸಕ್ಕಿದ್ದ ಮನೆಯಲ್ಲಿ 18 ಗಂಟೆಗೂ ಹೆಚ್ಚು ದುಡಿಸಿಕೊಳ್ಳುತ್ತಿದ್ದರು. ಕುಟುಂಬದ ಸಂಪರ್ಕಕ್ಕೆ ಅವಕಾಶ ನೀಡುತ್ತಿರಲಿಲ್ಲ. ದೈಹಿಕ ಹಿಂಸೆ ನೀಡುತ್ತಿದ್ದರು. ಊಟ, ತಿಂಡಿಗೂ ಪರದಾಡಬೇಕಾದ ಪರಿಸ್ಥಿತಿ ಇತ್ತು’ ಎಂದು ರೇಷ್ಮಾ ಪ್ರತಿಕ್ರಿಯಿಸಿದರು.

‘ರಾಯಭಾರ ಕಚೇರಿ ತಲುಪಿದ ನಂತರ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ಅಲ್ಲಿಯೂ ವ್ಯವಸ್ಥೆ ಉತ್ತಮವಾಗಿರಲಿಲ್ಲ. ಊಟ, ಬಟ್ಟೆ, ಸೋಪು, ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗಾಗಿ ಪರದಾಡಬೇಕಾಯಿತು. ವಾರವಿಡೀ ಒಂದೇ ಜೊತೆ ಬಟ್ಟೆ ಧರಿಸಬೇಕಿತ್ತು’ ಎಂದು ಕರಾಳ ದಿನಗಳನ್ನು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT