ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಕುಸಿದ ನೆಲ: ಕಸಿದ ಬದುಕು

ಅಪಾಯ ಸೃಷ್ಟಿಸುವ ಭೂ ಅಗೆತ ನಿಲ್ಲಿಸಿದರೆ ಹಿತ
Published 8 ಜುಲೈ 2024, 7:20 IST
Last Updated 8 ಜುಲೈ 2024, 7:20 IST
ಅಕ್ಷರ ಗಾತ್ರ

ಮಂಗಳೂರು: ಉಳ್ಳಾಲ ತಾಲ್ಲೂಕಿನ ಕುತ್ತಾರು ಮದನಿ ನಗರದಲ್ಲಿ ಪಕ್ಕದ ಮನೆಯ ಗೋಡೆ ಕುಸಿದು ನಿದ್ದೆಯಲ್ಲಿದ್ದ ನಾಲ್ವರು ಮೃತಪಟ್ಟ ದುಃಸ್ವಪ್ನ ಮರೆಯಾಗುವ ಮುನ್ನವೇ ಮಂಗಳೂರು ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದ ಧರೆ ಕುಸಿದು ಕಾರ್ಮಿಕರೊಬ್ಬರು ಜೀವ ಕಳೆದುಕೊಂಡರು. ಪ್ರತಿ ಮಳೆಗಾಲದಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಇಂತಹ ಹತ್ತಾರು ದುರ್ಘಟನೆಗಳಿಗೆ ಸಾಕ್ಷಿಯಾಗುತ್ತಿದ್ದು, ಮಾನವ ಹಸ್ತಕ್ಷೇಪದಿಂದ ಆಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗಂಭೀರವಾಗಿ ಯೋಚಿಸಬೇಕಾದ ಕಾಲ ಎದುರಾಗಿದೆ.

ಜಿಲ್ಲೆಯಲ್ಲಿ ಇಂತಹ ಘಟನೆಗಳು ಇದೇ ಮೊದಲಲ್ಲ, ಹಿಂದಿರುಗಿ ನೋಡಿದರೆ ಪ್ರತಿ ಮಳೆಗಾಲದಲ್ಲೂ ಇವು ಸಂಭವಿಸುತ್ತಲೇ ಇವೆ.

2023 ಮಾರ್ಚ್ ತಿಂಗಳ ಕೊನೆಯಲ್ಲಿ ಸುಳ್ಯ ಪಟ್ಟಣದ ಗುರುಂಪು ಎಂಬಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದು, ಮಹಿಳೆ ಸೇರಿ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ಜುಲೈನಲ್ಲಿ ಬಂಟ್ವಾಳ ತಾಲ್ಲೂಕು ಸಜಿಪಮುನ್ನೂರಿನಲ್ಲಿ ಮನೆ ಸಮೀಪದ ಗುಡ್ಡ ಜರಿದು ಮಣ್ಣಿನಡಿ ಸಿಲುಕಿ ಮಹಿಳೆಯೊಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ಇದೇ ವಾರದಲ್ಲಿ ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಗುಡ್ಡ ಕುಸಿದು ಶೆಡ್‌ನಲ್ಲಿ ವಾಸವಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು. 2022 ಆಗಸ್ಟ್‌ನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪರ್ವತಮುಖಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಬಾಲಕಿಯರು ಮಣ್ಣಿನಡಿ ಸಿಲುಕಿ ಜೀವ ಕಳೆದುಕೊಂಡಿದ್ದರು. 2020 ಫೆಬ್ರುವರಿಯಲ್ಲಿ ಮಂಗಳೂರು ನಗರದ ಕರಂಗಲ್ಪಾಡಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಪಕ್ಕದ ಧರೆ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು, ಗುರುಪುರ ಕೈಕಂಬದ ಬಂಗ್ಲೆಗುಡ್ಡೆಯಲ್ಲಿ ಗುಡ್ಡ ಕುಸಿದು ಇಬ್ಬರು ಅಮಾಯಕ ಮಕ್ಕಳು ಪ್ರಾಣ ಕಳೆದುಕೊಂಡಿದ್ದರು...

ಇಂತಹ ಅನೇಕ ಘಟನೆಗಳು ವರ್ಷಗಳಿಂದ ಸಂಭವಿಸುತ್ತಲೇ ಇದ್ದು, ಇವುಗಳಲ್ಲಿ ಪ್ರಕೃತಿ ಮುನಿಸಿಕೊಂಡು ಅವಘಡ ಸೃಷ್ಟಿಸಿದ್ದಕ್ಕಿಂತ ಮನುಷ್ಯ ಸೃಷ್ಟಿಯಿಂದ ಉಂಟಾಗಿರುವ ಅನಾಹುತಗಳೇ ಅಧಿಕವಾಗಿವೆ ಎಂಬುದು ಗಮನಿಸಬೇಕಾದ ಸಂಗತಿ. 2019ರಲ್ಲಿ ವರುಣನ ಆರ್ಭಟಕ್ಕೆ ಜಿಲ್ಲೆ ಅಕ್ಷರಶಃ ತತ್ತರಿಸಿತ್ತು. ಅನೇಕ ಆಸ್ತಿ–ಪಾಸ್ತಿಗಳು ಹಾನಿಯಾಗಿದ್ದವು. ನಂತರದ ವರ್ಷಗಳಲ್ಲಿ ಪ್ರಾಕೃತಿಕವಾಗಿ ಸಂಭವಿಸಿದ್ದು ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳು ಮಾತ್ರ. ಮಾನವ ನಿರ್ಮಿತ ಸಮಸ್ಯೆಗಳಿಗೆ ಆಡಳಿತ, ಜನಪ್ರತಿನಿಧಿಗಳು ಪರಿಹಾರ ಕಂಡುಕೊಳ್ಳಬಹುದಾದ ಮಾರ್ಗಗಳ ಬಗ್ಗೆ ಯೋಚಿಸಬೇಕಾಗಿದ್ದರೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡುವುದೂ ಅಷ್ಟೇ ಮುಖ್ಯವಾಗಿದೆ ಎನ್ನುತ್ತಾರೆ ಪರಿಸರ ತಜ್ಞರು.

ಮಳೆಗಾಲದಲ್ಲಿ ಭೂ ಅಗೆತ, ನಿರ್ಮಾಣ ಕಾಮಗಾರಿ ನಿಯಂತ್ರಿಸಿ ಸಂಭವನೀಯ ಅನಾಹುತಗಳನ್ನು ತಪ್ಪಿಸುವ, ಜೊತೆಗೆ ಈ ಹಿಂದೆ ಅನಾವೃಷ್ಟಿಯಿಂದ ಆಗಿರುವ ಹಾನಿಗೆ ಶಾಶ್ವತ ಪರಿಹಾರ ಒದಗಿಸುವ ಹೊಣೆ ಆಡಳಿತದ್ದು. ಹಿಂದೆ ಅನಾವೃಷ್ಟಿಯಿಂದ ಆಗಿರುವ ಹಾನಿಯ ಪರಿಣಾಮವನ್ನು ಈಗಲೂ ಅನುಭವಿಸುತ್ತಿದ್ದಾರೆ ಗ್ರಾಮೀಣ ಜನರು. ಮುರಿದು ಬಿದ್ದ ಸೇತುವೆ ಪುನರ್‌ ನಿರ್ಮಾಣ, ರಸ್ತೆ, ತಡೆಗೋಡೆ ನಿರ್ಮಾಣ ನನೆಗುದಿಗೆ ಬಿದ್ದಿವೆ. ಅಪಾಯ ಸಂಭವಿಸಿದ ಸ್ಥಳಗಳಲ್ಲಿ ಶಾಶ್ವತ ಕಾರ್ಯ ಆಗದ ಪರಿಣಾಮ ಈ ಮಳೆಗಾಲದಲ್ಲೂ ಈ ಸ್ಥಳಗಳು ಅಭದ್ರವಾಗಿವೆ ಎನ್ನುತ್ತಾರೆ ಸುಳ್ಯ ತಾಲ್ಲೂಕಿನ ವಿವಿಧ ಭಾಗಗಳ ಗ್ರಾಮಸ್ಥರು.

ಸಂಪರ್ಕ ಸೇತುವೆಯ ದುಃಸ್ಥಿತಿ: ಸುಳ್ಯ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸನಿಹದಲ್ಲಿರುವ ಹರಿಹರ ಪಲ್ಲತ್ತಡ್ಕ ಹಾಗೂ ಕೊಲ್ಲಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಕೆಲ ವರ್ಷಗಳಿಂದ ಮಳೆಗಾಲದಲ್ಲಿ ಭೂ ಕುಸಿತ, ಪ್ರವಾಹಕ್ಕೆ ನಲುಗುತ್ತಿವೆ. ನೆರೆಹಾನಿ ಸಂದರ್ಭದಲ್ಲಿ ಬಂದು ಅಹವಾಲು ಆಲಿಸುವ ಅಧಿಕಾರಿಗಳು, ಜನಪ್ರತಿನಿಧಿಗಳು ಬಳಿಕ ಅದರ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ಸ್ಥಳೀಯರದ್ದು.

ಕೊಲ್ಲಮೊಗ್ರು ಗ್ರಾಮದ ಮಿತ್ತೋಡಿ ಎಂಬಲ್ಲಿ ಐದು ವರ್ಷಗಳ ಹಿಂದೆ ಕಿರು ಸೇತುವೆ ನಿರ್ಮಿಸಲಾಗಿತ್ತು. ಎರಡು ವರ್ಷಗಳ ಹಿಂದೆ ಈ ಸೇತುವೆಯ ಒಂದು ಭಾಗಕ್ಕೆ ಹಾನಿಯಾಗಿತ್ತು. ಮಳೆಗಾಲ ನಂತರ ದುರಸ್ತಿಯ ಭಾಗವಾಗಿ ಸೇತುವೆ ಅಂಚಿನ ಮಣ್ಣು ತೆಗೆದು ಪಿಲ್ಲರ್ ನಿರ್ಮಾಣ ಕಾರ್ಯ ಆರಂಭವಾಯಿತು. ಅರೆಬರೆ ಕೆಲಸದಿಂದಾಗಿ ಇಂದಿಗೂ ಜನರಿಗೆ ಸಂಪರ್ಕ ವ್ಯವಸ್ಥೆ ಸುರಳಿತವಾಗಿಲ್ಲ. ಅರ್ಧ ಆಗಿರುವ ಕಾಮಗಾರಿಯಿಂದ ಅಡಿಕೆ ಮರದ ಪಾಲ ಹಾಕಿ ಹೋಗಬಹುದಾದ ಅವಕಾಶವನ್ನೂ ಇಲ್ಲದಂತೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಸೇತುವೆಯ ಒಂದು ಭಾಗದ ನಿರ್ಮಾಣ ಕಾಮಗಾರಿ ಈಗ ಪುನಃ ಆರಂಭವಾಗಿದೆ.

ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಎಂಬಲ್ಲಿ ಹೊಳೆಗೆ ನಿರ್ಮಿಸಿದ್ದ ಸೇತುವೆಯ ಒಂದು ಬದಿಯ ರಸ್ತೆ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಇಲ್ಲಿ ಶಾಶ್ವತ ಕೆಲಸ ಆಗದ ಕಾರಣ ಪ್ರತಿ ಮಳೆಗಾಲದಲ್ಲಿ ಸಂಪರ್ಕ ಕಡಿತದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಲ್ಮಕಾರು ಪೇಟೆಯಿಂದ ಗುಳಿಕಾನ ಭಾಗದ ಸೇತುವೆ ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ನೀರು ಪಾಲಾಗಿತ್ತು. ಆಗ ಮೋರಿ, ಮಣ್ಣು ಹಾಕಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದು, ಈಗಲೂ ಇದೇ ಸ್ಥಿತಿ ಇದೆ. ಅನೇಕ ಕಡೆಗಳಲ್ಲಿ ರಸ್ತೆ ಬದಿ ತಡೆಗೋಡೆ, ಸಂಪರ್ಕ ರಸ್ತೆ, ಸಂಪರ್ಕ ಸೇತುವೆಗೆ ಆಗಿರುವ ಹಾನಿ ಯಥಾಸ್ಥಿತಿಯಲ್ಲಿದೆ. ಶಾಶ್ವತ ಪರಿಹಾರ ಮರೀಚಿಕೆಯಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ಕುಸಿತದ ಭೀತಿಯಲ್ಲಿರುವ ಧರೆ: ಉಪ್ಪಿನಂಗಡಿ ಸಮೀಪದ ಪಾದಾಳ ಎಂಬಲ್ಲಿ ನೂಜಿ-ಅರ್ತಿಲ ರಸ್ತೆ ಬದಿಯ ಧರೆ ಕಳೆದ ಮಳೆಗಾಲದಲ್ಲಿ ಭಾಗಶಃ ಕುಸಿತಕ್ಕೊಳಗಾಗಿತ್ತು. ಧರೆಗೆ ತಾಗಿಕೊಂಡು ಸುರೇಶ್ ಶೆಟ್ಟಿ ಎಂಬುವವರ ಮನೆ ಇದ್ದು, ಧರೆ ಕುಸಿತದಿಂದಾಗಿ ಮನೆ ಅಪಾಯದಲ್ಲಿದೆ.

ಸುರೇಶ್ ಶೆಟ್ಟಿ ಮನೆ ಬದಿಯಲ್ಲಿರುವ ಧರೆ ಕುಸಿದು, ಬಂಡೆಗಳು ಮನೆಯಂಗಳ, ಪಂಪ್‌ಹೌಸ್ ಮೇಲೆ ಬಂದು ಬಿದ್ದಿದ್ದವು. ಧರೆಯ ಮೇಲ್ಭಾಗದಲ್ಲಿ ನೂಜಿ-ಅರ್ತಿಲ ಸಂಪರ್ಕ ರಸ್ತೆ ಇದ್ದು, ಇದರ ಅಂಚಿನ ತನಕ ಧರೆ ಕುಸಿದಿದೆ. ಧರೆ ಇನ್ನಷ್ಟು ಕುಸಿದರೆ ಕಾಂಕ್ರೀಟ್ ರಸ್ತೆ ಕೂಡ  ಕುಸಿದು ಬೀಳುವ ಸಂಭವವಿದೆ. ತಡೆಗೋಡೆ ನಿರ್ಮಿಸುವಂತೆ ಸುರೇಶ್ ಶೆಟ್ಟಿ ಶಾಸಕರಿಗೆ ಮನವಿ ಸಲ್ಲಿಸಿದ್ದರು. ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಆದರೆ, ಯಾವುದೇ ಪ್ರಗತಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ದುರಂತ ಸಂಭವಿಸುವ ಮುನ್ನ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಎ. ಕೃಷ್ಣರಾವ್ ಅರ್ತಿಲ ಆಗ್ರಹಿಸಿದ್ದಾರೆ.

ಗುಡ್ಡ ಕುಸಿಯುವ ಆತಂಕ: ಮುಡಿಪು ಸಮೀಪದ ಮಿತ್ತಕೋಡಿಯಿಂದ ಅರ್ಕಾಣ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡ ಕುಸಿದು ಬಿದ್ದು ರಸ್ತೆ ಬಂದ್ ಆಗಿತ್ತು. ಇಳಿಜಾರು ಪ್ರದೇಶ ಆಗಿರುವುದರಿಂದ ಪದೇ ಪದೇ  ಕುಸಿತ ಉಂಟಾಗುತ್ತಿದ್ದ ಕಾರಣ ರಸ್ತೆಯಲ್ಲಿ ಸುಮಾರು ಒಂದು ತಿಂಗಳು ವಾಹನ ಸಂಚಾರ‌ ಸ್ಥಗಿತಗೊಳಿಸಲಾಗಿತ್ತು. ಬಳಿಕ ರಸ್ತೆಯ ಮಣ್ಣನ್ನು ತೆಗೆಯಲಾಗಿದ್ದರೂ‌ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ಬಾರಿಯ ಮಳೆಗಾಲದಲ್ಲೂ ಇತ್ತೀಚೆಗೆ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದರಿಂದ  ಇದೇ ರಸ್ತೆಯಲ್ಲಿ ಕೆಲವು ದಿನ‌ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಅಪಾಯದಲ್ಲಿವೆ ಮನೆಗಳು:

ಉಳ್ಳಾಲ ತಾಲ್ಲೂಕು ಮುನ್ನೂರು ಗ್ರಾಮ ಪಂಚಾಯಿತಿ ಆರನೇ ವಾರ್ಡ್‌ ಸಂತೋಷನಗರ  ಅಜ್ಜನಕಟ್ಟೆಯ ಬಳಿಯ ಎರಡನೇ ಕ್ರಾಸ್‌ ಸಮೀಪದ  30 ವರ್ಷ ಹಳೆಯ ಕಾಂಪೌಂಡ್‌ ಮನೆ ಮೇಲೆ ಬಿದ್ದು ಮೂರು ಮನೆಗಳು ಅಪಾಯಕ್ಕೆ ಸಿಲುಕಿದ್ದವು. ಇದಾಗಿ ಒಂದು ವರ್ಷ ಕಳೆದಿದೆ. ಈವರೆಗೆ ಕಾಂಪೌಂಡ್‌ ನಿರ್ಮಾಣಕ್ಕೆ ಅನುದಾನ ಸಿಗದೆ, ಪ್ರಸ್ತುತ ಮಳೆಗಾಲದಲ್ಲಿಯೂ ಮನೆಗಳು ಅಪಾಯವನ್ನು ಎದುರಿಸುತ್ತಿವೆ.

ಮನೆ ಹಾನಿಯಾಗಿದ್ದ ರವಿಚಂದ್ರ ಎನ್ನುವವರಿಗೆ ಕಂದಾಯ ಇಲಾಖೆಯಿಂದ ₹5,000 ಪರಿಹಾರ ದೊರೆತಿತ್ತು. ಅವರು ₹6 ಲಕ್ಷ ವೆಚ್ಚ ಮಾಡಿ ತಾತ್ಕಾಲಿಕವಾಗಿ ಕಾಂಪೌಂಡ್ ದುರಸ್ತಿಗೊಳಿಸಿದ್ದರು. ಈಗ ಇಡೀ ಕಾಂಪೌಂಡ್ ಕುಸಿಯುವ ಭೀತಿಯಲ್ಲಿದ್ದು, ವಸತಿ ಪ್ರದೇಶವಾಗಿರುವ ಇಲ್ಲಿನ ನಿವಾಸಿಗಳು ಭಯದಲ್ಲೇ ಬದುಕುವಂತಾಗಿದೆ.

ಚರಂಡಿ ಸ್ವಚ್ಛ:

2018 ಮತ್ತು 2019ರಲ್ಲಿ ಸುಳ್ಯ ತಾಲ್ಲೂಕಿನ ಸಂಪಾಜೆಯಿಂದ ಮಡಿಕೇರಿವರೆಗೆ ಘಾಟ್ ಭಾಗದಲ್ಲಿ ಸುರಿದ ಭಾರಿ ಮಳೆಗೆ ರಸ್ತೆ ಬದಿ ಸಹಿತ ಗುಡ್ಡ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ, ಕಂಪನ ಆಯಿತು. ಪರಿಣಾಮ ಸುಮಾರು 20 ಕಿ.ಮೀ ವ್ಯಾಪ್ತಿಯಲ್ಲಿ ಹಲವು ಕಡೆ ಹೆದ್ದಾರಿ ಕುಸಿದು ಸುಮಾರು 20 ದಿನ ಸಂಪರ್ಕ ಕುಂಠಿತಗೊಂಡಿತ್ತು. ಇಲ್ಲಿ ಕಾಂಕ್ರೀಟ್ ತಡೆಗೋಡೆ, ಕೊಚ್ಚಿ ಹೋದ ರಸ್ತೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಈ ವರ್ಷ ಮುನ್ನೆಚ್ಚರಿಕೆಯಾಗಿ ಮಳೆಗಾಲದ ಪೂರ್ವದಲ್ಲಿ ಚರಂಡಿ ಸ್ವಚ್ಛಗೊಳಿಸಲಾಗಿದೆ.

ಪ್ರಸ್ತಾವ ಸಲ್ಲಿಕೆ:

ಜಿಲ್ಲೆಯ ಸಂಭಾವ್ಯ ಭೂ ಕುಸಿತ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಇಲ್ಲಿನ ಆಗಬಹುದಾದ ಅಪಾಯ, ತೀವ್ರತೆ, ಭೌಗೋಳಿಕ ಮತ್ತು ವೈಜ್ಞಾನಿಕ ಕಾರಣಗಳು, ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆ ಆಧರಿಸಿ ಭೂ ಕುಸಿತ ತಡೆಗೆ ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾಡಳಿತದಿಂದ ₹32.57 ಕೋಟಿ ಪ್ರಸ್ತಾವ ಸಿದ್ಧಪಡಿಸಿ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿಗೆ ಕಳೆದ ಆಗಸ್ಟ್‌ನಲ್ಲಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮಣ್ಣಿನ ಗುಣ ಅಧ್ಯಯನ ಅಗತ್ಯ’

ಇಳಿಜಾರುಗಳ ಸಮರ್ಪಕ ಶ್ರೇಣೀಕರಣವಿಲ್ಲದ ರಸ್ತೆಗಳು ಮತ್ತು ರಚನೆಗಳನ್ನು ನಿರ್ಮಿಸುವುದು ಒಳಚರಂಡಿಗಳ ಕಳಪೆ ನಿರ್ವಹಣೆ ಮತ್ತು ಹಳೆಯ ಭೂಕುಸಿತಗಳು ಸಂಭವಿಸಿದ ಜಾಗದಲ್ಲಿ ಮತ್ತೆ ಚಟುವಟಿಕೆ ಮಾಡುವುದರಿಂದ ಅಥವಾ ತೊಂದರೆಗೊಳಿಸುವುದರಿಂದ ಸಾಮಾನ್ಯವಾಗಿ ಮಣ್ಣು ಕುಸಿತ ಸಂಭವಿಸುತ್ತದೆ. ಯಾವುದೇ ನಿರ್ದಿಷ್ಟ ಭೂ ಕುಸಿತ ಅಥವಾ ಮಣ್ಣು ಕುಸಿತ ಉಂಟುಮಾಡುವಲ್ಲಿ ಮಾನವ ಅಂಶಗಳ ಪ್ರಾಮುಖ್ಯತೆ ನಿರ್ಧರಿಸಲು ಆ ಪ್ರದೇಶದ ವಿವರವಾದ ಭೂ ರಚನೆ ಕಲ್ಲು ಮಣ್ಣುಗಳು ಇಳಿಜಾರು ಮುಂತಾದ ವಿಷಯಗಳ ಸಮಗ್ರ ಅಧ್ಯಯನದ ಅವಶ್ಯಕತೆ ಇದೆ ಎನ್ನುತ್ತಾರೆ ಮಂಗಳೂರು ವಿಶ್ವವಿದ್ಯಾಲಯದ ಸಾಗರ ಭೂ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹೆಜಮಾಡಿ ಗಂಗಾಧರ ಭಟ್.

ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾದಾಗ ನೆಲದಲ್ಲಿ ನೀರು ವೇಗವಾಗಿ ಸಂಗ್ರಹವಾಗಿ ಮಣ್ಣಿನ ಕುಸಿತಗಳು ಜಾಸ್ತಿ ಸಂಭವಿಸುತ್ತವೆ. ನೀರಿನ ಸಂಪರ್ಕದಲ್ಲಿ ಅತಿ ಹೆಚ್ಚು ಒದ್ದೆಯಾದಾಗ ಅಥವಾ ಅತಿ ಹೆಚ್ಚು ನೀರಿನ ಸಂಪರ್ಕದಿಂದಾಗಿ ಕಲ್ಲು ಭೂಮಿ ಮತ್ತು ಶಿಲಾಖಂಡ ರಾಶಿಗಳ ಉಲ್ಬಣಕ್ಕೆ ಕಾರಣವಾಗುತ್ತದೆ.  ಮಣ್ಣಿನ ಕುಸಿತಗಳು ಸಾಮಾನ್ಯವಾಗಿ ಕಡಿದಾದ ಇಳಿಜಾರುಗಳಲ್ಲಿ ಪ್ರಾರಂಭವಾಗುತ್ತವೆ ಮತ್ತು ನೈಸರ್ಗಿಕ ವಿಪತ್ತುಗಳಿಂದ ಪ್ರಚೋದಿಸಲ್ಪಡಲೂಬಹುದು ಎಂಬುದು ಅವರ ಅಭಿಪ್ರಾಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂ ಕುಸಿತಗಳು ನೈಸರ್ಗಿಕ ಪ್ರಕ್ರಿಯೆಗಳಿಂದ  (Natural  Processes) ಮತ್ತು ಮಾನವ ಚಟುವಟಿಕೆಗಳಿಂದ (Anthropogenic Process) ಆಗಿವೆ. ದೊಡ್ಡ ಕಟ್ಟಡ ಕಟ್ಟುವಾಗ ಅಥವಾ ಕಡಿದಾದ ಇಳಿಜಾರುಗಳಲ್ಲಿ ರಸ್ತೆ ನಿರ್ಮಿಸುವಾಗ ಆ ಪ್ರದೇಶದ ಭೂ ರಚನೆ ಕಲ್ಲು ಮಣ್ಣುಗಳ ಬಗ್ಗೆ ಇಳಿಜಾರಿನ ಬಗ್ಗೆ ಆ ಪ್ರದೇಶದಲ್ಲಿ ಬೀಳುವ ಮಳೆ ಅದರ ತೀವ್ರತೆ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ ಎಂದು ಅವರು ಅಧ್ಯಯನದಿಂದ ಕಂಡಕೊಂಡ ಸತ್ಯ ಬಿಚ್ಚಿಟ್ಟರು.

‘ಆಳದಲ್ಲಿ ಕಾಮಗಾರಿ ತೀರಾ ಅಪಾಯಕಾರಿ’  

ದಕ್ಷಿಣ ಕನ್ನಡ ಜಿಲ್ಲೆಯ ಭೂ ಪ್ರದೇಶ ಎತ್ತರ ತಗ್ಗಿನಿಂದ ಕೂಡಿದೆ. ಇಲ್ಲಿ ಮುರ ಮಣ್ಣು (lateritic soil) ಮತ್ತು ಮುರಕಲ್ಲು(Laterite) ಭೂಮಿಯ ಮೇಲ್ಮೈನಲ್ಲಿ ಜಾಸ್ತಿ ಇದೆ.  ಮಳೆಗಾಲದಲ್ಲಿ ಈ ಮಣ್ಣುಗಳ ಒಳಭಾಗ (void spaces) ನೀರಿನಿಂದ ತುಂಬಿರುತ್ತದೆ. ಎತ್ತರದ ಪ್ರದೇಶದಲ್ಲಿ ಮತ್ತು ತಗ್ಗು ಪ್ರದೇಶದಲ್ಲಿ ಮನೆ ಅಥವಾ ಕಟ್ಟಡ ಇರುವಾಗ ಎತ್ತರ ಪ್ರದೇಶದ ಮುರಮಣ್ಣಿನ ಮೇಲೆ ಬಿದ್ದ ಮಳೆ ನೀರಿನಿಂದ ಮಣ್ಣಿನ ಭಾರ ಜಾಸ್ತಿಯಾಗಿ ಕೆಳಗಡೆ ಕುಸಿಯುತ್ತದೆ. ಕೆಳಗಿನ ಮನೆಯ ಧರೆ ಅಥವಾ ರಿಟೇನಿಂಗ್ ವಾಲ್ ಭಾರಕ್ಕೆ ಕೆಳಗೆ ಕುಸಿಯುತ್ತದೆ ಎನ್ನುತ್ತಾರೆ ನಿವೃತ್ತ ಪ್ರಾಧ್ಯಾಪಕ ಗಂಗಾಧರ ಭಟ್. ಮಳೆಗಾಲದಲ್ಲಿ 30-40 ಅಡಿ ಆಳದಲ್ಲಿ ಕಟ್ಟಡ ಕಾಮಗಾರಿ ತೀರಾ ಅಪಾಯಕಾರಿ. ಗುಡ್ಡ ಬೆಟ್ಟ ಪರ್ವತಗಳ ಬುಡದಲ್ಲಿ ನೈಸರ್ಗಿಕ ಪ್ರಕೋಪಗಳಿಂದ ಮಣ್ಣಿನ ಕುಸಿತ ಸಂಭವಿಸಿದರೆ ಮಂಗಳೂರಿನತಹ ನಗರ ಪ್ರದೇಶಗಳಲ್ಲಿ ಮಾನವ ನಿರ್ಮಿತ ಮಣ್ಣಿನ ಕುಸಿತಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ವಿಶೇಷ ನಿಯಮ ಜಾರಿಗೆ ಯೋಚನೆ: ಡಿಸಿ

ಅವೈಜ್ಞಾನಿಕ ಸುಸ್ಥಿರವಲ್ಲದ ಭೂ ಅಗೆತದಿಂದ ಪ್ರತಿವರ್ಷ ಮಳೆಗಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶೇಷ ನಿಯಮ ಜಾರಿಗೊಳಿಸಲು ಯೋಚಿಸಲಾಗಿದೆ. ತಾಂತ್ರಿಕವಾಗಿ ಬಲಿಷ್ಠವಾದ ನಿಯಮವನ್ನು ಸದ್ಯದಲ್ಲಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಬೃಹತ್ ಕಟ್ಟಡ ಕಟ್ಟುವ ಸಂದರ್ಭದಲ್ಲಿ ಭೂಮಿಯನ್ನು ಆಳವಾಗಿ ಅಗೆದು ಪಿಲ್ಲರ್ ಹಾಕಬೇಕಾಗುತ್ತದೆ. ಇದರಿಂದ ಮಣ್ಣು ಕುಸಿತ ಉಂಟಾಗಿ ಸಮಸ್ಯೆ ಸೃಷ್ಟಿಯಾಗುತ್ತದೆ. ಇದನ್ನು ನಿಯಂತ್ರಿಸಲು ಈಗಿರುವ ನಗರ ಸ್ಥಳೀಯ ಸಂಸ್ಥೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮದಲ್ಲಿ ಸ್ಪಷ್ಟ ಉಲ್ಲೇಖ ಇಲ್ಲ. ಭೂ ಕಂದಾಯ ಕಾಯ್ದೆಯಲ್ಲೂ ನಿರ್ದಿಷ್ಟ ನಿಯಮ ಇಲ್ಲ. ಗುಡ್ಡಗಾಡು ಪ್ರದೇಶವಾಗಿರುವ ಶಿಮ್ಲಾದಲ್ಲಿ ಭೂ ಅಗೆತಕ್ಕೆ ಸಂಬಂಧಿಸಿ ನಿಯಮ ರೂಪಿಸಲಾಗಿದೆ. ಅದನ್ನು ತರಿಸಿಕೊಂಡಿದ್ದು ಅದನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವ ರೀತಿಯಲ್ಲಿ ವಿಶೇಷ ನಿಯಮ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.  ಮಣ್ಣು ಕುಸಿತ ಪ್ರಕರಣಗಳಲ್ಲಿ ಬಹುತೇಕ ಎಲ್ಲವೂ ಖಾಸಗಿ ಜಾಗಗಳಲ್ಲಿ ಸಂಭವಿಸಿವೆ. ಮಳೆಗಾಲದಲ್ಲಿ ಭೂಮಿ ಅಗೆತವನ್ನು ನಿಷೇಧಿಸುವ ಆದೇಶ ಕಟ್ಟುನಿಟ್ಟಿನ ಪಾಲನೆ ಆಗಬೇಕಾಗಿದೆ ಎಂದರು.

ಪೂರಕ ಮಾಹಿತಿ: ಲೋಕೇಶ್ ಬಿ.ಎನ್, ಸಿದ್ದಿಕ್ ನೀರಾಜೆ, ಸತೀಶ್ ಕೊಣಾಜೆ, ಮೋಹನ್ ಕುತ್ತಾರ್, ಲೋಕೇಶ್ ಪೆರ್ಲಂಪಾಡಿ

ಬೆಂಡೋಡಿ ಸೇತುವೆ ಸಂಪರ್ಕ ರಸ್ತೆಯ ದುಃಸ್ಥಿತಿ – ಚಿತ್ರ: ಲೋಕೇಶ್ ಬಿ.ಎನ್
ಬೆಂಡೋಡಿ ಸೇತುವೆ ಸಂಪರ್ಕ ರಸ್ತೆಯ ದುಃಸ್ಥಿತಿ – ಚಿತ್ರ: ಲೋಕೇಶ್ ಬಿ.ಎನ್
ಮಿತ್ತೊಡಿಯ ಅಪೂರ್ಣ ಸ್ಥಿತಿಯಲ್ಲಿರುವ ಸೇತುವೆ
ಮಿತ್ತೊಡಿಯ ಅಪೂರ್ಣ ಸ್ಥಿತಿಯಲ್ಲಿರುವ ಸೇತುವೆ
ಉಪ್ಪಿನಂಗಡಿಯ ಪಾದಾಳದಲ್ಲಿ ಸುರೇಶ್ ಶೆಟ್ಟಿ ಅವರ ಮನೆ ಪಕ್ಕದಲ್ಲಿ ಧರೆ ಕುಸಿತ ತಡೆಯಲು ಪ್ಲಾಸ್ಟಿಕ್ ಹೊದೆಸಲಾಗಿದೆ
ಉಪ್ಪಿನಂಗಡಿಯ ಪಾದಾಳದಲ್ಲಿ ಸುರೇಶ್ ಶೆಟ್ಟಿ ಅವರ ಮನೆ ಪಕ್ಕದಲ್ಲಿ ಧರೆ ಕುಸಿತ ತಡೆಯಲು ಪ್ಲಾಸ್ಟಿಕ್ ಹೊದೆಸಲಾಗಿದೆ
ಉಳ್ಳಾಲ ತಾಲ್ಲೂಕಿನ ಅಜ್ಜನಕಟ್ಟೆ ಬಳಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡ್
ಉಳ್ಳಾಲ ತಾಲ್ಲೂಕಿನ ಅಜ್ಜನಕಟ್ಟೆ ಬಳಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡ್
ಬಂಟ್ವಾಳ– ಧರ್ಮಸ್ಥಳ ರಸ್ತೆ ಬದಿಯಲ್ಲಿ ಕಳೆದ ಮಳೆಗಾಲದಲ್ಲಿ ಮಣ್ಣು ಕುಸಿದಿರುವುದು (ಪ್ರೊ. ಗಂಗಾಧರ್ ಭಟ್ ಕ್ಲಿಕ್ಕಿಸಿದ ಸಂಗ್ರಹ ಚಿತ್ರ)
ಬಂಟ್ವಾಳ– ಧರ್ಮಸ್ಥಳ ರಸ್ತೆ ಬದಿಯಲ್ಲಿ ಕಳೆದ ಮಳೆಗಾಲದಲ್ಲಿ ಮಣ್ಣು ಕುಸಿದಿರುವುದು (ಪ್ರೊ. ಗಂಗಾಧರ್ ಭಟ್ ಕ್ಲಿಕ್ಕಿಸಿದ ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT