ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ನಗರದ ಲೈಟ್‌ಹೌಸ್‌ ಹಿಲ್‌ ರಸ್ತೆಗೆ ‘ಮೂಲ್ಕಿ ಸುಂದರ ರಾಮ ಶೆಟ್ಟಿ’ ಹೆಸರು

ಅಭಿಮಾನಿಗಳಿಗೆ ಸಂಭ್ರಮದ ದಿನ: ಮೇಯರ್‌
Last Updated 24 ಸೆಪ್ಟೆಂಬರ್ 2020, 3:39 IST
ಅಕ್ಷರ ಗಾತ್ರ

ಮಂಗಳೂರು: ತೀವ್ರ ಆಕ್ಷೇಪ, ವಿವಾದಕ್ಕೆ ಕಾರಣವಾಗಿದ್ದ ಲೈಟ್‌ಹೌಸ್ ರಸ್ತೆಗೆ ಸರ್ಕಾರದ ಆದೇಶದಂತೆ ಬುಧವಾರ ‘ಮೂಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ’ ನಾಮಕರಣ ಮಾಡಲಾಯಿತು. ಕೆಥೊಲಿಕ್ ಕ್ಲಬ್ ಬಳಿ ಮೇಯರ್ ದಿವಾಕರ ಪಾಂಡೇಶ್ವರ್‌ ಅವರು, ಮೂಲ್ಕಿ ಸುಂದರ ರಾಮ ಶೆಟ್ಟಿ ನಾಮಫಲಕವನ್ನು ಅನಾವರಣಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು, ‘ಇದೊಂದು ಹೆಮ್ಮೆಯ ಕಾರ್ಯಕ್ರಮ. ಮೂಲ್ಕಿ ಸುಂದರ ರಾಮ ಶೆಟ್ಟಿಯವರ ಎಲ್ಲಾ ಅಭಿಮಾನಿಗಳು ಸಂಭ್ರಮ ಪಡುವ ದಿನ’ ಎಂದರು.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಇಲ್ಲೇ ಹುಟ್ಟಿ ಬೆಳೆದ ವಿಜಯ ಬ್ಯಾಂಕ್‌ ಅನ್ನು ಉಳಿಸಿಕೊಳ್ಳಲಾಗದಿದ್ದರೂ, ಮೂಲ್ಕಿ ಸುಂದರ ರಾಮ ಶೆಟ್ಟಿ ಅವರ ಹೆಸರನ್ನು ನೆನಪಿಸುವ ಕಾರ್ಯವನ್ನು ಮಾಡಲಾಗಿದೆ ಎಂದರು.

ಮೂಲ್ಕಿ ಸುಂದರ ರಾಮ ಶೆಟ್ಟಿ ಅಭಿಮಾನಿ ಬಳಗದ ಗೌರವಾಧ್ಯಕ್ಷ ಸದಾನಂದ ಶೆಟ್ಟಿ, ಕಾರ್ಯಕಾರಿ ಅಧ್ಯಕ್ಷ ಎ.ಬಿ. ಶೆಟ್ಟಿ ಮಾತನಾಡಿ ಸಂತಸ ವ್ಯಕ್ತಪಡಿಸಿದರು.

ಉಪ ಮೇಯರ್ ವೇದಾವತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಮೂಲ್ಕಿ ಸುಂದರ ರಾಮ ಶೆಟ್ಟಿ ಅಭಿಮಾನಿ ಬಳಗದ ಕಾರ್ಯದರ್ಶಿ ಮೂಲ್ಕಿ ಕರುಣಾಕರ ಶೆಟ್ಟಿ, ಅಜಿತ್ ಕುಮಾರ್ ರೈ ಮಾಲಾಡಿ, ಮಾಜಿ ಮೇಯರ್ ಮಹಾಬಲ ಮಾರ್ಲ ಉಪಸ್ಥಿತರಿದ್ದರು. ನಾಮಫಲಕ ಅನಾವರಣದ ಬಳಿಕ ಚೆಂಡೆ, ಮದ್ದಳೆಯೊಂದಿಗೆ ಲೈಟ್‌ಹೌಸ್‌ನಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು.

ವಾದ–ವಿವಾದ:

ವಿಜಯ ಬ್ಯಾಂಕ್‌ ನೌಕರರ ಸಂಘದ ವತಿಯಿಂದ ರಸ್ತೆಗೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರನ್ನು ಇಡುವ ಪ್ರಸ್ತಾವವನ್ನು ಪಾಲಿಕೆಗೆ ಸಲ್ಲಿಸಲಾಗಿತ್ತು. ಅದರಂತೆ ಪಾಲಿಕೆಯಿಂದ ಒಪ್ಪಿಗೆ ಪಡೆಯಲಾಗಿತ್ತು. ಸರ್ಕಾರದಿಂದಲೂ ಅನುಮತಿ ನೀಡಲಾಗಿತ್ತು. ಆದರೆ, 2017 ರ ಜುಲೈ 1 ರಂದು ಮತ್ತೊಂದು ಆದೇಶ ನೀಡಿದ ಸರ್ಕಾರ, ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿತ್ತು.

ನಂತರ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರ ಜತೆಗೆ ಚರ್ಚಿಸಿ ಒಂದು ನಿರ್ಣಯಕ್ಕೆ ಬರುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅದರಂತೆ ಪಾಲಿಕೆಯ ಹಿಂದಿನ ಆಯುಕ್ತ ಅಜಿತ್‌ಕುಮಾರ್ ಹೆಗ್ಡೆ ಅವರು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ, ಮೂಲ್ಕಿ ಸುಂದರರಾಮ ಶೆಟ್ಟಿ ಅವರನ್ನು ಹೆಸರನ್ನು ಇಡಬಹುದು ಎಂದು ತಿಳಿಸಿದ್ದರು. ಅದರಂತೆ ಸರ್ಕಾರ ನಾಮಕರಣಕ್ಕೆ ಹಸಿರು ನಿಶಾನೆ ತೋರಿತ್ತು.

‘ಅಸಂವಿಧಾನಿಕ ಕ್ರಮ’

‘ರಸ್ತೆಗೆ ಮೂಲ್ಕಿ ಸುಂದರ ರಾಮ ಶೆಟ್ಟಿ ಅವರ ಹೆಸರನ್ನು ಇಡಲು ಸರ್ಕಾರ ಒಪ್ಪಿಗೆ ನೀಡಿರುವುದು ಅಸಂವಿಧಾನಿಕ ಕ್ರಮ. ಇದರಿಂದ ಸೇಂಟ್‌ ಅಲೋಶಿಯಸ್‌ ಶಿಕ್ಷಣ ಸಂಸ್ಥೆಗಳ ಅಭಿಮಾನಿಗಳ ಭಾವನೆಗೆ ಧಕ್ಕೆ ಉಂಟಾಗಿದೆ’ ಎಂದು ರೆಕ್ಟರ್‌ ಫಾ. ಮೆಲ್ವಿನ್‌ ಜೋಸೆಫ್‌ ಪಿಂಟೋ ಹೇಳಿದ್ದಾರೆ.

’ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಸರ್ಕಾರ ಏಕಪಕ್ಷಿಯವಾಗಿ ಹಿಂದಕ್ಕೆ ಪಡೆದಿದೆ. ಈ ಪ್ರಕರಣದಲ್ಲಿ ಆಕ್ಷೇಪಣೆ ಸಲ್ಲಿಸಿದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೈಕೋರ್ಟ್‌ ನಿರ್ದೇಶನಕ್ಕೆ ವಿರುದ್ಧವಾಗಿದೆ’ ಎಂದು ದೂರಿದ್ದಾರೆ.

ಈ ವಿಷಯದ ಕುರಿತು ಎಲ್ಲ ಅರ್ಜಿದಾರರ ಜತೆಗೆ ಸಮಾಲೋಚನೆ ನಡೆಸಿ, ಕ್ರಮ ಕೈಗೊಳ್ಳುವಂತೆ ಒಪ್ಪಿತ ನಿರ್ಣಯಕ್ಕೆ ಬರುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅಲ್ಲದೇ ಈ ವಿಷಯದಲ್ಲಿ ತಮ್ಮನ್ನೂ ಗಣನೆಗೆ ತೆಗೆದುಕೊಳ್ಳುವಂತೆ ಸೇಂಟ್ ಅಲೋಶಿಯಸ್ ಸಂಸ್ಥೆಯಿಂದ ಮನವಿಯನ್ನೂ ಮಾಡಲಾಗಿತ್ತು ಎಂದು ಹೇಳಿದ್ದಾರೆ.

‘ವಿಜಯ ಬ್ಯಾಂಕ್‌ ಮಲ್ಲಿಕಟ್ಟೆಯಲ್ಲಿ ಮೊದಲ ಬಾರಿಗೆ ಕಾರ್ಯಾರಂಭಿಸಿತ್ತು. ಬಂಟ್ಸ್‌ ಹಾಸ್ಟೆಲ್‌ನಿಂದ ಮಲ್ಲಿಕಟ್ಟೆವರೆಗಿನ ರಸ್ತೆಗೆ ಮೂಲ್ಕಿ ಸುಂದರ ರಾಮ ಶೆಟ್ಟಿ ಅವರನ್ನು ಹೆಸರನ್ನು ಇಟ್ಟಿದ್ದರೆ ಅರ್ಥಪೂರ್ಣವಾಗುತ್ತಿತ್ತು’ ಎಂದು ಕಾಲೇಜಿನ ಹಳೆಯ ವಿದ್ಯಾರ್ಥಿ ಎನ್‌.ಜಿ. ಮೋಹನ್‌ ಹೇಳಿದರು.

ಸ್ವಾಗತಾರ್ಹ:

‘ಲೈಟ್‌ಹೌಸ್ ಹಿಲ್ ರಸ್ತೆಗೆ ಮೂಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಿರುವ ಸರ್ಕಾರದ ಕ್ರಮ ಸ್ವಾಗತಾರ್ಹ‘ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT