ಮಂಗಳೂರು: ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘವು 2023–24ನೇ ಸಾಲಿನಲ್ಲಿ ಶೇ 11 ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಿದೆ.
ನಗರದಲ್ಲಿ ಶನಿವಾರ ನಡೆದ ಸಂಘದ 14ನೇ ವಾರ್ಷಿಕ ಮಹಾಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಪುರುಷೋತ್ತಮ ಕೆ. ಭಂಡಾರಿ, ‘800 ಸದಸ್ಯರನ್ನು ಹೊಂದಿರುವ ಸಂಘವು 2023-24ನೇ ಸಾಲಿನಲ್ಲಿ ₹3.76 ಕೋಟಿ ಸಾಲ ನೀಡಿದ್ದು, ₹5.04 ಕೋಟಿ ಠೇವಣಿ ಸಂಗ್ರಹಿಸಿದೆ. ₹5.44 ಲಕ್ಷಗಳ ಒಟ್ಟು ಪಾಲು ಬಂಡವಾಳ ಸಂಗ್ರಹಿಸಿದೆ. ₹21.47 ಕೋಟಿಗಳ ಒಟ್ಟು ವ್ಯವಹಾರ ನಡೆಸಿದೆ’ ಎಂದರು.
ಪಿ.ಯು ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಸಂಸ್ಥೆಯ ಸ್ಥಾಪಕಾಧ್ಯಕ್ಷ ದಿ. ಪಿ.ಜೆ ಸಲ್ಡಾನ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಸಂಘದ ನಿರ್ದೇಶಕರಾದ ವಿಶ್ವನಾಥ ಗಟ್ಟಿ, ಎಂ.ಜಯರಾಮ ಭಂಡಾರಿ, ಸ್ಟ್ಯಾನಿ ಡಿಸೋಜ, ಕೊಡಂಗೆ ಬಾಲಕೃಷ್ಣ ನಾಯ್ಕ್, ಲೀಲಾವತಿ ಕೆ, ಕಾಶಿನಾಥ್ ಪುತ್ರನ್, ಶ್ರೀನಿವಾಸ ಕಣ್ವತೀರ್ಥ, ಎಚ್. ಸುಬ್ರಹ್ಮಣ್ಯ ಭಟ್ ಮತ್ತು ಸಹಕಾರಿ ಸಂಘದ ಸಿಬ್ಬಂದಿ ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಮಹಾಲಿಂಗೇಶ್ವರ ಭಟ್ ಶ್ರದ್ದಾಂಜಲಿ ನೆರವೇರಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಸಿ.ಎಚ್ ವಾರ್ಷಿಕ ವರದಿ ಮತ್ತು ಪರಿಶೋಧನೆಗೆ ಒಳಪಟ್ಟ ಲೆಕ್ಕಪತ್ರ ಮಂಡಿಸಿದರು. ಸಲಹೆಗಾರ ರಾಮಯ್ಯ ಶೆಟ್ಟಿ ಎಸ್. ಮುಂಗಡ ಪತ್ರ ಮಂಡಿಸಿದರು. ಸದಸ್ಯೆ ಶೋಭಾ ಪ್ರಾರ್ಥನೆ ಹಾಡಿದರು. ನಿರ್ದೇಶಕ ಕಿಶೋರ್ ಕುಟಿನ್ಹ ಧನ್ಯವಾದ ಅರ್ಪಿಸಿದರು.