ಜೀವನಾಸಕ್ತಿಯ ಚಿಲುಮೆ

7
ಸಕಲಕಲಾವಲ್ಲಭ ಸದಾನಂದ ಬಿ.ಮುಂಡಾಜೆ

ಜೀವನಾಸಕ್ತಿಯ ಚಿಲುಮೆ

Published:
Updated:
ಸದಾನಂದ ಬಿ.ಮುಂಡಾಜೆ

ಹುಟ್ಟುತ್ತಲೇ ಬಡತನವನ್ನು ದೇಣಿಗೆ ಪಡೆದ ಸದಾನಂದ ಅವರಿಗೆ ಕಲೆಯ ವಿಷಯದಲ್ಲಿ ಬಡತನವೇ ಇಲ್ಲ. ಪ್ರತಿಭೆಯಲ್ಲಿ ಗುಲಗುಂಜಿಯಷ್ಟೂ ಬಡತನವಿಲ್ಲ. ಆದ್ದರಿಂದಲೇ ಅವರನ್ನು ಸಕಲಕಲಾವಲ್ಲಭ ಎಂದರೆ ಯಾರ ತಗಾದೆಯೂ ಇಲ್ಲ. 

ಸದಾನಂದ ಬಿ.ಮುಂಡಾಜೆ ಅವರು ಕಾಸರಗೋಡು ತಾಲ್ಲೂಕಿನ ನೆಟ್ಟಣಿಗೆ ಎಂಬಲ್ಲಿನ ಸಂಕಪ್ಪ ಪೂಜಾರಿ ಕೃಷ್ಣಮ್ಮ ದಂಪತಿ ಪುತ್ರ. 54 ವಯಸ್ಸಿನ ಸದಾನಂದ ಅವರ ಸಾಧನೆ ಅಪಾರ. ಬರವಣಿಗೆ, ಯಕ್ಷಗಾನ ,ರಂಗಕ್ಷೇತ್ರ, ರಂಗಭೂಮಿಕ್ಷೇತ್ರ, ಹಾಡುಗಾರಿಕೆಯಲ್ಲಿ ತೊಡಗಿಕೊಂಡವರು.

ಹೈಸ್ಕೂಲ್ ಶಿಕ್ಷಣವನ್ನು ಸರ್ವೋದಯ ಹೈಸ್ಕೂಲ್ ಸುಳ್ಯಪದವಿನಲ್ಲಿ  ಮುಗಿಸಿದರು ನಂತರದ ಶಿಕ್ಷಣಕ್ಕೆ ಹೋಗುವ ಸೌಕಾರ್ಯ ಇರದೆ ಮನೆಯಲ್ಲಿಯೆ ಉಳಿಯಬೇಕಾಯಿತು. ಆದರೆ  ಕಲಾ ಆಸಕ್ತಿ ಕಡಿಮೆಯಾಗಲಿಲ್ಲ. ಆರನೇ ತರಗತಿಯಲ್ಲಿರುವಾಗಲೇ ಬರವಣಿಗೆ, ನಾಟಕ, ಯಕ್ಷಗಾನ ಪಾತ್ರಗಳಲ್ಲಿ ಆಸಕ್ತಿ ಹೊಂದಿ ಪುತ್ತೂರು ಹಾಗೂ ಕಾಸರಗೋಡು ತಾಲ್ಲೂಕುಗಳಲ್ಲಿ ಬಹುಮಾನವನ್ನು ಬಾಚಿಕೊಂಡವರು. ಇದೇ ಆಸಕ್ತಿ ಇವರನ್ನು ಮುನ್ನಡೆಸುತ್ತಾ ಬಂದಿತು.

ಬೆಳ್ತಂಗಡಿ ತಾಲ್ಲೂಕಿನ ಮುಂಡಾಜೆಯಲ್ಲಿ ನೆಲೆಸಿ 1986  ರಿಂದ ಎಸ್.ಡಿ.ಎಂ.ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದಾರೆ. ಇವರ ಕಲೆಗೆ ಇನ್ನಷ್ಟೂ ಸ್ಫೂರ್ತಿ  ನೀಡಿದ್ದು ಎಸ್.ಡಿ.ಎಂ.ಸಂಸ್ಥೆ ಎಂದು ಸ್ಮರಿಸಿಕೊಳ್ಳುತ್ತಾರೆ ಸದಾನಂದನವರು. ಮುಂಡಾಜೆಯಲ್ಲಿ ಗ್ರಾಮೀಣ ಪ್ರದೇಶದ ಕಲಾವಿದರನ್ನು ಒಟ್ಟುಗೂಡಿಸಿ 'ಕೀರ್ತನಾ ಕಲಾ ತಂಡ'  ಎಂಬ ಸಾಂಸ್ಕೃತಿಕ ಸಂಘಟನೆಯನ್ನು ಕಟ್ಟಿ ಇದರ ಮೂಲಕ ಭಜನೆ, ಪೌರಾಣಿಕ ಕಥಾನಾಟಕ, ಸಂಸ್ಕೃತಿ ಅಭಿವ್ಯಕ್ತಿ ಎಂಬ ವಿನೂತನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದವರು. ಅದೇ ರೀತಿ ಹಾಸ್ಯಲಾಸ್ಯ, ನಾಟಕ, ರೂಪಕಗಳ ಪ್ರದರ್ಶನಗಳಿಂದ ತಾಲ್ಲೂಕಿನ ಉತ್ತಮ ಸಾಂಸ್ಕೃತಿಕ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.ತಾಲ್ಲೂಕಿನ ಹಲವಾರು ಕಡೆ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಹಲವಾರು ಪ್ರತಿಭೆಗಳಿಗೆ ಅವಕಾಶ ದೊರೆತಿದೆ.

  ಹಾಗೆಯೇ ಬರವಣಿಗೆಯಲ್ಲೂ ಸೈ ಎನಿಸಿಕೊಂಡ ಇವರ 'ಸದಾಶಯ' ಮತ್ತು ' ಬೆಳ್ಳಿ ಹೆಜ್ಜೆ'  ಕವನಸಂಕಲನಗಳು ಪ್ರಕಟಗೊಂಡಿವೆ.ಪ್ರತಿಷ್ಠಿತ ಪತ್ರಿಕೆಗಳಲ್ಲಿ ಕಥೆ, ಕವನ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡವರು. ಇವರ ಇನ್ನೊಂದು ವಿಶೇಷತೆಯೆಂದರೆ ನಾಟಿಮದ್ದು ಕೊಡುವುದರಲ್ಲಿ  ಹೆಸರುವಾಸಿಯಾದವರು. ಗಿಡಮೂಲಿಕೆಗಳ ಬಗ್ಗೆ ಹಿರಿಯರಿಂದ ಪಡೆದ ಅನುಭವವನ್ನು ನೂರಾರು ಕಡೆ ಸಂಘಸಂಸ್ಥೆಗಳಲ್ಲಿ ಯಾವುದೇ ಗೌಪ್ಯತೆಯನ್ನು ಇಡದೆ ಸಮಾಜದೊಂದಿಗೆ ಹಂಚಿಕೊಳ್ಳುವ ಗುಣ ಇವರದ್ದು‌.

 ಇವರು ' ಈ ಸಮಾಜ', ಗೊತ್ತಾನಗ ಬೊಳ್ಪಾಂಡ್, ಅಣ್ಣೆ ಇಂಚನೆ ಎಂಬ ತುಳುನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಅದೇ ರೀತಿ ಪುಣ್ಯಕೋಟಿ, ಅಳಿಯ ಕಟ್ಟು, ಶ್ರೀ ದೇವಿ ಶಾಂಭವಿ, ಸತ್ಯದಪ್ಪೆದೇಯಿ, ಕಲ್ಕುಡ ಕಲ್ಲುರ್ಟಿ, ಸತ್ಯ ಹರಿಶ್ಚಂದ್ರ, ತುಳುನಾಡ ಸಿರಿ, ಪ್ರಕೃತಿ ದೇವೊಭವ, ಅಕ್ಷರ ದೀಪ, ಸ್ತ್ರೀ, ಅಮರ ಅಮೃತ, ಹೀಗೆ ತುಳು ಹಾಗೂ ಕನ್ನಡ ಗೀತಾರೂಪಕಗಳನ್ನು ಬರೆದು ಅಭಿನಯಿಸಿದ್ದಾರೆ. ಹಲವಾರು ಕಡೆ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿದೆ.ಸುಮಾರು ಆರು ಯಕ್ಷಗಾನದ ಪ್ರಸಂಗ ಹಾಗೂ ಪದ್ಯ ರಚನೆ ಮಾಡಿದ್ದಾರೆ.

ಉತ್ತಮವಾಗ್ಮಿ, ಯಕ್ಷಗಾನ ಅರ್ಥಗಾರಿಕೆ, ಕಾರ್ಯಕ್ರಮ ನಿರೂಪಕ ,ಧಾರ್ಮಿಕ ಹಾಗೂ ಪುರಾಣ ಪ್ರವಚನಗಳಿಂದ ಗುರುತಿಸಿ ಸನ್ಮಾನ, ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.  ಕಾದಂಬರಿ ಬರೆಯಬೇಕೆಂಬ ಆಸೆ ಹಾಗೂ ಚಲನಚಿತ್ರಗಳಿಗೆ ಸಾಹಿತ್ಯ ಬರೆಯಬೇಕೆಂಬ ಕನಸನ್ನು ಹೊಂದಿದ್ದಾರೆ..

 ಕಲಾವಿದರಿಗೆ ಸೂಕ್ತ ವೇದಿಕೆಯನ್ನು ನಿರ್ಮಿಸಿ ಪ್ರತಿಭಾ ವಿಕಾಸಕ್ಕೆ ಅನುವು ಮಾಡಿಕೊಡುವುದೇ ನಿಜವಾದ ಪ್ರೋತ್ಸಾಹ. ಪ್ರಚಾರವಿಲ್ಲದೆ ಪ್ರತಿಭೆಗಳು ಸೊರಗಬಾರದು, ಪ್ರಚಾರದ ಭರಾಟಿಯಲ್ಲಿ ಪ್ರತಿಭಾಹೀನರು ಮರೆಯಬಾರದು
- ಸದಾನಂದ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !