ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಮೇಲುಗೈ ಆದರೆ ‘ಗ್ಯಾರಂಟಿ’ಗೆ ಅಪಾಯ: ಮುನೀರ್‌ ಕಾಟಿಪಳ್ಳ

ಜಿಲ್ಲಾ ಮಟ್ಟದ ಜನ ಸಮಾವೇಶ: ಬಿಜೆಪಿ ಸೋಲಿಸಿ, ಇಂಡಿ ಒಕ್ಕೂಟದ ಅಭ್ಯರ್ಥಿ ಗೆಲ್ಲಿಸಿ ಘೋಷಣೆ
Published 16 ಏಪ್ರಿಲ್ 2024, 4:17 IST
Last Updated 16 ಏಪ್ರಿಲ್ 2024, 4:17 IST
ಅಕ್ಷರ ಗಾತ್ರ

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದರೆ ಆ ಪಕ್ಷದವರು ಸಿದ್ದರಾಮಯ್ಯ ಸರ್ಕಾರವನ್ನು ಪತನಗೊಳಿಸುವ ಸಾಧ್ಯತೆ ಇದೆ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಆತಂಕ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಾತ್ಯತೀತ ಪಕ್ಷಗಳು, ಸಮಾನ‌ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ಹಾಗೂ ಇಂಡಿಯಾ ಕೂಟದ ಘಟಕ ಪಕ್ಷಗಳು ದಕ್ಷಿಣ ಕನ್ನಡ ಜಿಲ್ಲೆಯ ನೈಜ ಅಭಿವೃದ್ಧಿ ಮತ್ತು ಸೌಹಾರ್ದ ಎಂಬ ಆಶಯದೊಂದಿಗೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನ ಸಮಾವೇಶದಲ್ಲಿ ಮಾತನಾಡಿದ ಅವರು ‘ಬಿಜೆಪಿಗೆ ಶಕ್ತಿ ಬಂದರೆ ಆಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸುತ್ತಾರೆ. ಹಾಗೆ ಆದರೆ ಗ್ಯಾರಂಟಿ ಯೋಜನೆಗಳು ನಿಂತುಹೋಗುತ್ತವೆ’ ಎಂದರು.

‘ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಉಳಿಯಬೇಕು. ಅದಕ್ಕೆ ಬಿಜೆಪಿ ಸೋಲಬೇಕು. ದಕ್ಷಿಣ ಕನ್ನಡ ಕ್ಷೇತ್ರದಲ್ಲೂ ಬಿಜೆಪಿಯನ್ನು ಸೋಲಿಸಬೇಕು. ಇಲ್ಲಿ ಗ್ಯಾರಂಟಿ ಯೋಜನೆಗೆ ಹೆಚ್ಚು ಫಲಾನುಭವಿಗಳು ಇದ್ದಾರೆ. ಯೋಜನೆಯ ಸಮರ್ಪಕ ಅನುಷ್ಠಾನವೂ ಇಲ್ಲಿಯೇ ಆಗುತ್ತಿದೆ. ಬಿಜೆಪಿಯದ್ದು ನೈಜ ಹಿಂದುತ್ವ ಅಲ್ಲ. ಅದು ಆರ್‌ಎಸ್‌ಎಸ್ ಹಿಂದುತ್ವವೇ ಹೊರತು ನಾರಾಯಣ ಗುರುಗಳ, ವಿವೇಕಾನಂದರ ಹಿಂದುತ್ವ ಅಲ್ಲ’ ಎಂದು ಮುನೀರ್ ಹೇಳಿದರು.

‘ಕೈಬೀಸಿ ಹೋದ ಮೋದಿ’

‘ಭಾನುವಾರ ನಗರಕ್ಕೆ ಬಂದ ನರೇಂದ್ರ ಮೋದಿ ಮಾತನಾಡುವ ಧೈರ್ಯ ತೋರಿಸಿಲ್ಲ. ಬಾಯಿಬಿಟ್ಟರೆ ಬಣ್ಣಗೇಡು ಎಂದು ಹೆದರಿ ಕೇವಲ ಕೈ ಬೀಸಿ ಹೋಗಿದ್ದಾರೆ. ಅವರೊಂದಿಗೆ ಬ್ರಿಜೇಶ್ ಚೌಟ ಕೂಟ ಕೈಬೀಸಿದ್ದಾರೆ. ಚುನಾವಣೆಯ ಫಲಿತಾಂಶ ಬಂದಮೇಲೆ ಟಾಟಾ ಮಾಡಿ ಹೋಗುತ್ತಾರೆ. ಅವರು ಜಿಲ್ಲೆಯಲ್ಲಿ ಕಂಬಳ ಆಯೋಜಿಸಿದ್ದಲ್ಲದೆ ಅಭಿವೃದ್ಧಿಗಾಗಿ ಯಾವ ಕೆಲಸವನ್ನೂ ಮಾಡಲಿಲ್ಲ’ ಎಂದು ಮುನೀರ್ ದೂರಿದರು.

‘ಈಗಿನ ಸಂಸದರು ಅಭಿವೃದ್ಧಿಯ ಸುಳ್ಳು ಪಟ್ಟಿಯನ್ನು ಮುಂದಿಡುತ್ತಿದ್ದಾರೆ. ಗುರುಪುರ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅಲ್ಲಿ ಪಾರ್ಕ್ ಇಲ್ಲ. ಮಂಗಳೂರಿನ ವಿಮಾನ ನಿಲ್ದಾಣ ಮತ್ತು ಬಂದರು ಹಣವಂತರಿಗೆ ಹಸ್ತಾಂತರ ಆಗಿದೆ. ಜಿಲ್ಲೆಯ ದೊಡ್ಡ ಕಂಪನಿಗಳು ಮತ್ತು ಎಸ್‌ಇಝಡ್‌ನಂಥ ಯೋಜನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಲಿಲ್ಲ. ಈ ಬಗ್ಗೆ ಬಿಜೆಪಿಯವರು ಚಕಾರ ಎತ್ತಲಿಲ್ಲ. ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್‌ನವರು ಕೂಡ ಮಾತನಾಡಲಿಲ್ಲ. ಜಿಲ್ಲೆಯ ವ್ಯಾಪ್ತಿಯಲ್ಲಿ ಏಳು ಟೋಲ್‌ಗೇಟ್‌ಗಳು ಸೃಷ್ಟಿಯಾಗುವ ಆತಂಕವಿದೆ ಎಂದರು.   

ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.‌ಶೇಖರ್ ಮಾತನಾಡಿ ದಕ್ಷಿಣ ಕನ್ನಡ ಕ್ಷೇತ್ರದ ಮತದಾರರು ‘ಇಂಡಿಯ’ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಸಲಹೆ ನೀಡಿದರು. ಆಮ್ ಆದ್ಮಿ ಪಕ್ಷದ ಮುಖಂಡ ಬಿ.ಕೆ.ವಿಶು ಕುಮಾರ್, ‘ಸಂವಿಧಾನ ಬದಲಿಸಲು ಬಿಜೆಪಿ‌ ಮುಂದಾಗಿದ್ದು ಅದನ್ನು ಉಳಿಸಬೇಕು. ವಿರೋಧಿಗಳನ್ನು ಕಟ್ಟಿಹಾಕಿ ಏನು ಬೇಕಾದರೂ ಮಾಡಬಹುದು ಎಂಬ ಹುಂಬತನದಿಂದ ಆಮ್ ಆದ್ಮಿ ಪಕ್ಷದ ನಾಯಕರನ್ನು ಬಿಜಿಪಿ ಜೈಲಿಗೆ ಹಾಕಿದೆ’ ಎಂದು ದೂರಿದರು.

ಸಮಾವೇಶದಲ್ಲಿ ವಿವಿಧ ಸಂಘಟನೆಯ ಪ್ರಮುಖರು ಒಗ್ಗಟ್ಟು ಪ್ರದರ್ಶಿಸಿದರು
ಸಮಾವೇಶದಲ್ಲಿ ವಿವಿಧ ಸಂಘಟನೆಯ ಪ್ರಮುಖರು ಒಗ್ಗಟ್ಟು ಪ್ರದರ್ಶಿಸಿದರು

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಎಐಟಿಯುಸಿ ಮುಖಂಡ ಸೀತಾರಾಮ ಬೆಳಿಂಜ, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಕೆ.ಅಶ್ರಫ್, ಕೆಥೋಲಿಕ್ ಸಭಾದ ಆಲ್ವಿನ್ ಡಿಸೋಜ, ಮುಸ್ಲಿಂ ಐಕ್ಯತಾ ವೇದಿಕೆಯ ಯಾಸಿನ್ ಕುದ್ರೋಳಿ, ಮುಸ್ಲಿಂ ಯುವಜನ ಪರಿಷತ್‌ನ ಅಶ್ರಫ್ ಕಲ್ಲೇಗ, ವಿದ್ಯಾರ್ಥಿ ನಾಯಕ ಕ್ರಿಸ್ಟನ್ ಮೆನೇಜಸ್, ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್, ‌ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಜಯಂತಿ ವಿ.ಶೆಟ್ಟಿ, ನಾಯಕಿ ಕೇಶವತಿ ಬಂಟ್ವಾಳ, ಆದಿವಾಸಿ ಹಕ್ಕುಗಳ ಜಿಲ್ಲಾ ನಾಯಕ ಕರಿಯ ಕೆ, ದಲಿತ ಸಂಘರ್ಷ ಸಮಿತಿ ನಾಯಕ ಎಂ.ದೇವದಾಸ್, ದಲಿತ ಹಕ್ಕುಗಳ ಸಮಿತಿ ಕೃಷ್ಣಪ್ಪ ಕೊಣಾಜೆ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೃಷ್ಣಪ್ಪ ಕೊಂಚಾಡಿ, ಸುನಿಲ್ ಕುಮಾರ್ ಬಜಾಲ್ ಮುಖಂಡರಾದ ಜಗತ್ಪಾಲ್ ಕೋಡಿಕಲ್, ಮಂಜುಳಾ ನಾಯಕ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT