ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಪಾಲಿಕೆ: ಆಯುಕ್ತರ ಖುದ್ದು ಹಾಜರಿಗೆ ನಿರ್ದೇಶನ

Last Updated 19 ಜನವರಿ 2022, 17:28 IST
ಅಕ್ಷರ ಗಾತ್ರ

ಬೆಂಗಳೂರು:‌ ‘ಮಂಗಳೂರಿನ ಪಚ್ಚನಾಡಿ ಭೂ ಭರ್ತಿ ಘಟಕದಲ್ಲಿ ದೀರ್ಘ ಕಾಲದಿಂದ ಇರುವ ತ್ಯಾಜ್ಯದ ವಿಲೇವಾರಿ ಮತ್ತು ನಿರ್ವಹಣೆ ಕಾರ್ಯವನ್ನು ಫೆಬ್ರುವರಿ 14ರೊಳಗೆ ಆರಂಭಿಸದೇ ಹೋದಲ್ಲಿ, ಮಂಗಳೂರು ನಗರ ಪಾಲಿಕೆ ಆಯುಕ್ತರು ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು’ ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಮಂಗಳೂರಿನ ಪಚ್ಚನಾಡಿ ಘನತ್ಯಾಜ್ಯ ಭೂ ಭರ್ತಿ ಘಟಕದ ಅನಾಹುತಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌)ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮಂಗಳೂರು ಮಹಾನಗರ ಪಾಲಿಕೆ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ‘ತ್ಯಾಜ್ಯ ವಿಲೇವಾರಿಗೆ ₹ 50 ಕೋಟಿಗಿಂತಲೂ ಹೆಚ್ಚಿನ ಮೊತ್ತದ ಟೆಂಡರ್‌ ಕರೆಯಬೇಕಿದೆ. ಇದಕ್ಕೆ ಹಣಕಾಸು ಇಲಾಖೆ ಅನುಮೋದನೆ ನೀಡಬೇಕಿದೆ. ಅನುಮೋದನೆ ದೊರತೆ ಕೂಡಲೇ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ ತ್ಯಾಜ್ಯ ವಿಲೇವಾರಿ ಕಾರ್ಯ ಆರಂಭಿಸಲಾಗುವುದು’ ಎಂದು ತಿಳಿಸಿದರು‌.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಹಣಕಾಸು ಇಲಾಖೆ ಟೆಂಡರ್ ಪ್ರಸ್ತಾವನೆಯನ್ನು ಪರಿಗಣಿಸಬೇಕು‌. ವಿಳಂಬ ಮಾಡದೆ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಕೆಲಸ ಆರಂಭಿಸಬೇಕು. ಸರ್ಕಾರ ಈ ಹಿಂದೆ ಬಿಡುಗಡೆ ಮಾಡಿರುವ ಹಣವನ್ನೂ ತ್ಯಾಜ್ಯ ವಿಲೇವಾರಿಗೆ ಬಳಸಬೇಕು’ ಎಂದು ನಿರ್ದೇಶಿಸಿ, ವಿಚಾರಣೆಯನ್ನುಫೆಬ್ರುವರಿ 10ಕ್ಕೆ ಮುಂದೂಡಿದೆ.

ತರಾಟೆ: ಪಚ್ಚನಾಡಿ ಘನತ್ಯಾಜ್ಯ ಭೂ ಭರ್ತಿ ಘಟಕದಿಂದ ಬಿಡುಗಡೆ ಮಾಡುವ ನೀರು ಸಮೀಪದ ಫಲ್ಗುಣಿ ನದಿ ಹಾಗೂ ಮರವೂರು ಜಲಾಶಯ‌ ಸೇರುತ್ತಿದೆ. ಇದರಿಂದ‌ ನೀರು ಕಲುಷಿತವಾಗಿರುವ ಹಿನ್ನೆಲೆಯಲ್ಲಿ ಆ ನೀರಿನ‌ ಮಾದರಿ ಸಂಗ್ರಹಿಸಿ ವಿಶ್ಲೇಷಣಾ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ಈ ಹಿಂದಿನ ವಿಚಾರಣೆ ವೇಳೆ ಸೂಚಿಸಿತ್ತು.

ವಿಚಾರಣೆ ವೇಳೆ ಮಂಡಳಿ ಪರ ವಕೀಲರು, ‘ವಿಶ್ಲೇಷಣಾ ವರದಿ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ಬೇಕು’ ಎಂದು ಕೋರಿದರು.ಇದಕ್ಕೆ ಕೆರಳಿದ ನ್ಯಾಯಪೀಠ, ‘ವರದಿ ಸಲ್ಲಿಸಲು ಅಷ್ಟೊಂದು ಕಾಲಾವಕಾಶ ಬೇಕೆ, ಅಲ್ಲಿಯವರೆಗೂ ಜನ ವಿಷಯುಕ್ತ ನೀರು ಕುಡಿಯುತ್ತಿರಬೇಕೆ’ ಎಂದು ಖಾರವಾಗಿ ಪ್ರಶ್ನಿಸಿತು.

‘ಕೋವಿಡ್ ಪರೀಕ್ಷಾ ವರದಿಯನ್ನೇ ಎಂಟು ಗಂಟೆಯೊಳಗೆ ನೀಡಲಾಗುತ್ತಿದೆ. ನಿಮಗೇಕೆ ಇಷ್ಟೊಂದು ಸಮಯ’ ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ‘ಮುಂದಿನ ವಿಚಾರಣೆ ವೇಳೆಗೆ ತಪ್ಪದೇ ವಿಶ್ಲೇಷಣಾ ವರದಿ ಸಲ್ಲಿಸಬೇಕು’ ಎಂದು ಮಂಡಳಿ ಪರ ವಕೀಲರಿಗೆತಾಕೀತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT