ಗುರುವಾರ , ಮಾರ್ಚ್ 4, 2021
26 °C

ಮೀನುಗಾರಿಕೆ ಇಲಾಖೆಯಲ್ಲಿ 10 ಸಾವಿರ ಉದ್ಯೋಗ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ಶನಿವಾರ 74ನೇ ಸರಳ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಷ್ಟ್ರಧ್ವರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ರಾಜ್ಯದ ಮೀನುಗಾರಿಕಾ ಇಲಾಖೆಯಲ್ಲಿ 10 ಸಾವಿರ ಉದ್ಯೋಗಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

ಜನಸ್ನೇಹಿ ಯೋಜನೆಗಳನ್ನು ಪ್ರತಿ ಮನೆಗೆ ತಲುಪುವಂತೆ ಮಾಡುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಪ್ರತಿಯೊಬ್ಬರು ಇದರ ಬಳಕೆ ಮಾಡಬೇಕು. ಸುಮಾರು 5 ಕೋಟಿ ಜನರು ಆಯುಷ್ಮಾನ್ ಭಾರತ್, ಕಿಸಾನ್‌‌‌ ಸಮ್ಮಾನ್‌‌ ಮುಂತಾದ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡಿದ್ದಾರೆ. ಬಿ.ಎಸ್‌‌. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರವು ರೈತರ ಪರವಾಗಿದ್ದು, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ನಾವು ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್ 2020-21 ಅನ್ನು ಸಹ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.

ಮುಖ್ಯಮಂತ್ರಿ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪಡಿತರ ಹಾಗೂ ಆಹಾರ ಕಿಟ್‌‌ಗಳನ್ನು ಪೂರೈಕೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಧಾರ್ಮಿಕ ದತ್ತಿ ಇಲಾಖೆಯೂ ಕೂಡ ಅಗತ್ಯ  ಆಹಾರವನ್ನು ಒದಗಿಸಿದೆ. ಇದಲ್ಲದೇ, ಹಲವಾರು ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಜನರ ಪ್ರತಿನಿಧಿಗಳು ಆಹಾರ ಕಿಟ್ ಮತ್ತು ಔಷಧಿಗಳನ್ನು ವಿತರಿಸುವ ಮೂಲಕ ಲಾಕ್‌ಡೌನ್‌‌ ಸಮಯದಲ್ಲಿ ಜನರಿಗೆ ನೆರವಾಗಲು ಮುಂದೆ ಬಂದಿದ್ದಾರೆ. ಜತೆಗೆ ನಾವು ಅಂತರ ರಾಜ್ಯ ಹಾಗೂ ಅಂತರ ರಾಷ್ಟ್ರೀಯ ಪ್ರಯಾಣಿಕರ ಬರುವಿಕೆಯನ್ನು ನಿರ್ವಹಿಸಿದ್ದೇವೆ ಎಂದರು.

ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ ₹2,000 ಕೋಟಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ ₹338 ಕೋಟಿ ಬಿಡುಗಡೆ ಮಾಡಲಾಗಿದ್ದು, ₹100 ಕೋಟಿ ವೆಚ್ಚದ ಕೆಲಸಗಳು ಈವರೆಗೆ ಪೂರ್ಣಗೊಂಡಿವೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಭಿವೃದ್ಧಿಗಾಗಿ ₹5.83 ಕೋಟಿ ಬಳಸಲಾಗಿದೆ. ₹2.31 ಕೋಟಿ ವೆಚ್ಚದಲ್ಲಿ ಲೇಡಿಗೋಷನ್ ಆಸ್ಪತ್ರೆಯ ಎರಡನೇ ಮಹಡಿಯ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಧಾನಿ ಕಿಸಾನ್ ಸಮ್ಮನ್ ಯೋಜನೆಯಡಿ 1,35,841 ರೈತರಿಗೆ ತಲಾ ₹10,000 ಬಿಡುಗಡೆ ಮಾಡಲಾಗಿದ್ದು, ಒಟ್ಟು ವೆಚ್ಚ ₹137 ಕೋಟಿ ರೈತರಿಗೆ ತಲುಪಿದೆ ಎಂದು ಮಾಹಿತಿ ನೀಡಿದರು.

ಹೊಸ ತಾಲ್ಲೂಕುಗಳಾದ ಮೂಡುಬಿದಿರೆ ಹಾಗೂ ಕಡಬದಲ್ಲಿ ಹೊಸ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ₹10 ಕೋಟಿ ಮಂಜೂರು ಮಾಡಲಾಗಿದ್ದು, ಅದರಲ್ಲಿ ₹2 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಬಿ.ಸಿ.ರೋಡ್‌‌, ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕಾರ್ಕಳ, ಮೂಡುಬಿದಿರೆ ಮತ್ತು ಮಂಗಳೂರುಗಳಲ್ಲಿ ರಸ್ತೆ ಕೆಲಸವನ್ನು ಶೀಘ್ರವಾಗಿ ಕೈಗೊಳ್ಳಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಈ ವೇಳೆ ವೆನ್ಲಾಕ್ ಆಸ್ಪತ್ರೆ ವೈದ್ಯರು, ಡಿಎಚ್‌ಒ, ಪೊಲೀಸ್, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ನಾಗರಿಕ ಕಾರ್ಯಕರ್ತರು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಾಧಕರು ಮತ್ತು ಕೊರೊನಾ ಯೋಧರನ್ನು ಸನ್ಮಾನಿಸಲಾಯಿತು. ಪೆರೇಡ್ ಕಮಾಂಡರ್ ಎಂ.ಎ.ಉಪಾಸೆ ನೇತೃತ್ವದಲ್ಲಿ ಐದು ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದ್ದವು.

ಶಾಸಕರಾದ ವೇದವ್ಯಾಸ್ ಕಾಮತ್‌, ಡಾ.ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಸಂಸದ ನಳಿನ್ ಕುಮಾರ್ ಕಟೀಲ್, ಎಂಎಲ್‌‌ಸಿ ಪ್ರತಾಪ್ ಸಿಂಹ ನಾಯಕ್, ಪೊಲೀಸ್ ಆಯುಕ್ತ ವಿಕಾಸ್‌‌ ಕುಮಾರ್, ಮೇಯರ್ ದಿವಾಕರ್ ಮತ್ತು ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು