ಶುಕ್ರವಾರ, ಮೇ 14, 2021
21 °C
ಮಂಗಳೂರು ವಿವಿಯ 39ನೇ ಘಟಿಕೋತ್ಸವದಲ್ಲಿ ಸುಧಾಮೂರ್ತಿ

ಜೀವನದಲ್ಲಿ ‘ಶಾರ್ಟ್‌ಕಟ್‌’ ನಂಬಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ನಿಗದಿತ ಗುರಿ, ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ಅದನ್ನು ಸಾಧಿಸುವ ಛಲ ಮುಖ್ಯ. ಸಾಧನೆಯ ಹಾದಿಯಲ್ಲಿ ಸವಾಲುಗಳಿಗೆ ಎದೆಗುಂದದೆ ಮುನ್ನಡೆಯ ಬೇಕು. ಆಗ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ’ ಎಂದು ಇಸ್ಫೊಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಶನಿವಾರ ನಡೆದ 39ನೇ ಘಟಿಕೋತ್ಸವದಲ್ಲಿ ವೆಬಿನಾರ್‌ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು.

‘ಬದುಕಿನಲ್ಲಿ ಸೋಲು ನಮಗೆ ಸಾಕಷ್ಟು ಪಾಠಗಳನ್ನು ಕಲಿಸುತ್ತದೆ. ಸೋಲನ್ನೇ ಸವಾಲು ಎಂದು ಸ್ವೀಕರಿಸಿ ಗುರಿ ಮುಟ್ಟಬೇಕು. ನಾನು ನನ್ನ ಬದುಕಿನಲ್ಲಿ ಸಮಸ್ಯೆಗಳು, ಕಷ್ಟಗಳ ದಾರಿಯಲ್ಲಿಯೇ ಮೇಲೇರಿ ಬಂದಿದ್ದೇನೆ. ನಾವು ಜೀವನದಲ್ಲಿ ಶಾರ್ಟ್‌ಕಟ್‌ ಅನ್ನು ನಂಬಲೇಬಾರದು’ ಎಂದರು.

‘ಕಠಿಣ ಪರಿಶ್ರಮ ಮತ್ತು ಸಿದ್ಧಾಂತ ಬದುಕನ್ನೇ ಬದಲಿಸಬಲ್ಲವು. ಕ್ರಿಕೆಟ್‌ ಪಂದ್ಯದಂತೆ ಇಲ್ಲಿ ಹೊಂದಾಣಿಕೆ ಮುಖ್ಯ. ಜ್ಞಾನದ ಹಸಿವು ನಿಂತರೆ ನಾವು ವೃದ್ಧರಾದಂತೆ. ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳ ನಡುವೆ ಪ್ರೀತಿಯಿರಬೇಕು. ಉದ್ಯೋಗ ಪಡೆದು, ದುಡಿದು ಗಳಿಸಿದ ಹಣದಲ್ಲಿ ಒಂದು ಪಾಲು ಸಮಾಜಕ್ಕೆ ನೀಡಬೇಕು’ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ಕುಲಸಚಿವ ಪ್ರೊ.ಪಿ.ಎಲ್‌.ಧರ್ಮ ವಾರ್ಷಿಕ ವರದಿ ಮಂಡಿಸಿದರು.

ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಖಾಯಗಳ ಡೀನ್‌ಗಳು ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಪ್ರೊ.ರವಿಶಂಕರ್‌ ರಾವ್‌, ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

ಈ ಬಾರಿ ವಿದೇಶಿಗರೂ ಸೇರಿದಂತೆ 117 ಮಂದಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. 10 ಮಂದಿಗೆ ಚಿನ್ನದ ಪದಕ ಮತ್ತು ವಿವಿಧ ಕೋರ್ಸುಗಳಲ್ಲಿ ಪ್ರಥಮ ರ‍್ಯಾಂಕ್ ಪಡೆದ 69 ಮಂದಿಗೆ ಪ್ರಮಾಣ ಪತ್ರ ನೀಡಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು