ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯು.ಕೆ.ಮೋನು, ರಾಮಕೃಷ್ಣ ಆಚಾರ್‌, ಪುರಾಣಿಕ್‌ಗೆ ಮಂಗಳೂರು ವಿ.ವಿ ಗೌರವ ಡಾಕ್ಟರೇಟ್‌

Last Updated 14 ಮಾರ್ಚ್ 2023, 10:14 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯವು ಶಿಕ್ಷಣ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಯು.ಕೆ.ಮೋನು, ಜಿ.ರಾಮಕೃಷ್ಣ ಆಚಾರ್‌ ಹಾಗೂ ಎಂ.ಬಿ.ಪುರಾಣಿಕ್‌ ಅವರಿಗೆ 41ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ನೀಡಲು ನಿರ್ಧರಿಸಿದೆ.

ಯು.ಕೆ.ಮೋನು: ಕಣಚೂರು ಗ್ರೂಪ್‌ ಆಫ್ ಇಂಡಸ್ಟ್ರೀಸ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಯು.ಕೆ.ಮೋನು 2002ರಲ್ಲಿ ಕಣಚೂರು ಅಕಾಡೆಮಿ ಆಫ್‌ ಜನರಲ್‌ ಎಜುಕೇಷನ್‌ ಸಂಸ್ಥೆ ಸ್ಥಾಪಿಸಿ ಸ್ಥಳೀಯ ಮಹಿಳೆಯರು ಹಾಗೂ ಬಡವಿಗೆ ಗುಣಮಟ್ಟದ ಶಿಕ್ಷಣಕ್ಕೆ ನೆರವಾಗಿದ್ದಾರೆ. ಈ ಅಕಾಡೆಮಿಯು ಕಣಚೂರು ಪಬ್ಲಿಕ್‌ ಸ್ಕೂಲ್‌, ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜು, ಕಣಚೂರು ಉದ್ಯಮಾಡಳಿತ ಮತ್ತು ವಿಜ್ಞಾನ ಸಂಸ್ಥೆ, ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಣಚೂರು ಫಿಸಿಯೋಥೆರಪಿ ಕಾಲೇಜು, ಕಣಚೂರು ನರ್ಸಿಂಗ್‌ ವಿಜ್ಞಾನ ಕಾಲೇಜು, ಕಣಚೂರು ಆರೋಗ್ಯ ವಿಜ್ಞಾನಗಳ ಸಂಸ್ಥೆ, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಗಳನ್ನು ಒಳಗೊಂಡಿದೆ.

ಸಯ್ಯದ್‌ ಮದನಿ ಚಾರಿಟಬಲ್‌ ಟ್ರಸ್ಟ್‌ ಮತ್ತು ಉಳ್ಳಾಲ ದರ್ಗಾ ಅಸೋಸಿಯೇಷನ್‌ ಅಧ್ಯಕ್ಷರೂ ಆಗಿದ್ದ ಯು.ಕೆ.ಮೊನು ಅವರು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಪಂಜಳದ ಮೊಹಿಯುದ್ದೀನ್‌ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ, ದಕ್ಷಿಣ ಭಾರತ ಪ್ಲೈವುಡ್‌ ತಯಾರಕರ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಯು.ಕೆ.ಮೋನು ಬಿಜಿನೆಸ್‌ ವೆಂಚರ್‌ ಮೂಲಕ ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಅನೇಕರಿಗೆ ನೆರವಾಗಿದ್ದಾರೆ. ಉಚಿತ ವಿವಾಹ, ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕವೂ ಬಡವರಿಗೆ ನೆರವಾಗಿದ್ದಾರೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಜಿ.ರಾಮಕೃಷ್ಣ ಆಚಾರ್‌: ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಗಂಗೊಳ್ಳಿಯ ಬಡಕುಟುಂಬದಲ್ಲಿ ಜನಿಸಿದ ಜಿ.ರಾಮಕೃಷ್ಣ ಆಚಾರ್‌, ಕುಟುಂಬವನ್ನು ಪೊರೆಯಲು ಬಾಲ್ಯದಲ್ಲಿ ಅರ್ಧದಲ್ಲೇ ಶಿಕ್ಷಣ ತೊರೆದು ಫ್ಯಾಬ್ರಿಕೇಷನ್‌ ವರ್ಕ್‌ಶಾಪ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಹದಿಹರೆಯದಲ್ಲೇ ಪ್ಯಾಬ್ರಿಕೇಷನ್‌ ಕೆಲಸದಲ್ಲಿ ಪರಿಣಿತರಾಗಿ ಹೊರಹೊಮ್ಮಿದ್ದರು. ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ತರಬೇತಿ ಪಡೆದು ತಾಂತ್ರಿಕ ಜ್ಞಾನವನ್ನು ಸುಧಾರಿಸಿಕೊಂಡರು. ಕೇವಲ ₹ 25ಸಾವಿರ ಬಂಡವಾಳದಲ್ಲಿ ಫ್ಯಾಬ್ರಿಕೇಷನ್‌ ಕಂಪನಿ ಆರಂಭಿಸಿದರು. ಕೃಷಿ, ನೀರಿನ ನಿರ್ವಹಣೆ, ಕೊಳಚೆ ನೀರು ಶುದ್ಧೀಕರಣವೂ ಸೇರಿದಂತೆ ವಿವಿಧ ರಂಗಗಳಲ್ಲಿ ಫ್ರಾಬ್ರಿಕೇಷನ್‌ ಉದ್ಯಮವನ್ನು ನಡೆಸುತ್ತಿರುವ ಅವರು ವಾರ್ಷಿಕ ₹ 250 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದ್ದಾರೆ. ಕೌಶಲಯುಕ್ತ ಹಾಗೂ ಅರೆ ಕೌಶಲಯುಕ್ತ ಕಾರ್ಮಿಕರು ಸೇರಿ 3000ಕ್ಕೂ ಅಧಿಕ ಮಂದಿಗೆ ಉದ್ಯೋಗ ಒದಗಿಸಿದ್ದಾರೆ. 1990ರಲ್ಲಿ ಅವರು ರೂಪಿಸಿದ ಭತ್ತ ಸಂಸ್ಕರಣಾ ಘಟಕವು ಗುಣಮಟ್ಟದ ಅಕ್ಕಿ ಉತ್ಪಾದನೆಗೆ ಕೊಡುಗೆ ನೀಡಿದೆ. ವಿಶ್ವದ ವಿವಿಧ ದೇಶಗಳು ಇವರ ಕಂಪನಿಯ ಉಪಕರಣಗಳನ್ನೇ ಖರೀದಿಸುತ್ತಿವೆ. ಅಕ್ಕಿಯು ತೇವಾಂಶ ಹೀರಿಕೊಂಡು ವ್ಯರ್ಥವಾಗುವುದನ್ನು ಈ ಯಂತ್ರವು ತಪ್ಪಿಸಿದೆ. ಿದರಿಂದಾಗಿ ಪ್ರತಿ ಋತುವಿನಲ್ಲೂ ₹ 100 ಕೋಟಿ ಮೌಲ್ಯದಷ್ಟು ಅಕ್ಕಿ ವ್ಯರ್ಥವಾಗುವುದು ತಪ್ಪಿದೆ. ಇವರ ಸಂಶೋಧನೆಯ ಫಲವಾಗಿ ಸಾಮಾನ್ಯ ಅಕ್ಕಿಯು ಉತ್ತಮ ಸ್ವಾದ ಹಾಗೂ ರುಚಿಯನ್ನು ಹೊಂದುವಂತಾಗಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ,

ಎಲಿಕ್ಸಿರ್‌ ಬ್ರ್ಯಾಂಡ್‌ನ ನೀರು ಶುದ್ಧೀಕರಣ ಯಂತ್ರ ದೇಶದಾದ್ಯಂತ ಹಾಗೂ ನೆರೆಯ ರಾಷ್ಟ್ರಗಳಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಸುಜಲಾ ಕಾರ್ಯಕ್ರಮದ ಆಶಯದಂತೆ ಎಲ್ಲ ನಾಗರಿಕರಿಗೂ ಶುದ್ಧ ಕುಡಿಯುವ ನೀರು ಪೂರೈಸಲು ರಾಮಕೃಷ್ಣ ಆಚಾರ್‌ ಅವರು ಈ ಯಂತ್ರದಲ್ಲಿ ಮತ್ತಷ್ಟು ಸುಧಾರಿತ ತಂತ್ರಜ್ಞಾನ ಅಳವಡಿಸಿದ್ದಾರೆ. ಅಗ್ಗದ ದರದಲ್ಲಿ ಪೂರೈಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಈ ಯಂತ್ರಗಳು ಮನೆ ಮಾತಾಗಿವೆ. ಪ್ಲಾಸ್ಟಿಕ್‌ ಬಾಟಲಿಗಳ ಬಳಕೆ ಕಡಿಮೆ ಮಾಡುವುದಕ್ಕೂ ಕೊಡುಗೆ ನೀಡಿವೆ. ಇವರ ಕಂಪನಿಯ ಬೇರೆ ಬೇರೆ ಮಾದರಿಯ ಕೊಳಚೆ ನೀರು ಶುದ್ಧೀಕರಣ ಯಂತ್ರಗಳು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೊಳಚೆ ನೀರು ಶುದ್ಧೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಸಂಪೂರ್ಣ ಸ್ವಯಂಚಾಲಿತ ಯಂತ್ರಗಳು ಮಾನವ ಶ್ರಮ ಇಲ್ಲದೆಯೇ ಕಾರ್ಯನಿರ್ವಹಿಸುವ ತಾಂತ್ರಿಕತೆಯನ್ನು ಹೊಂದಿವೆ. ಮನೆ, ಮನೆಗಳ ಸಮೂಹದಲ್ಲೂ ಬಳಸುವಂತ ಪುಟ್ಟ ಮಾದರಿಗಳೂ ಲಭ್ಯ. ಮೂಡುಬಿದಿರೆ ಬನ್ನಡ್ಕದಲ್ಲಿ ಇವರು ಆರಂಭಿಸಿದ ಕೈಗಾರಿಕಾ ತರಬೇತಿ ಸಂಸ್ಥೆ ಗ್ರಾಮೀಣ ಯುವಜನರಿಕೆ ತಾಂತ್ರಿಕ ಶೀಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಾರ್ಕಳ ತಾಲ್ಲೂಕಿನ ಮುನಿಯಾಲಿನಲ್ಲಿ 35 ಎಕರೆ ಜಾಗದಲ್ಲಿ ಇವರು ಆರಂಭಿಸಿದ ‘ಗೋಧಾಮ’ವು ಹಸು ಸಾಕಣೆ ಮತ್ತು ಹೈನು ಉತ್ಪನ್ನಗಳ ಮೂಲಕ ಸ್ವಾವಲಂಬನೆ ಸಾಧಿಸುವ ಮದರಿಯನ್ನು ಕಟ್ಟಿಕೊಟ್ಟಿದೆ. ಭಾರತೀಯ ತಳಿಯ 37 ಹಸುಗಳನ್ನು ಇಲ್ಲಿ ಸಾಕಲಾಗುತ್ತಿದೆ. ಮೂಡುಬಿದಿರೆಯ ಶ್ರೀ ಕಾಳಿಕಾಂಬ ದೇವಸ್ಥಾನದ ಟ್ರಸ್ಟಿಯಾಗಿ, ಬಾಲ ಸಂಸ್ಕಾರ ಕೇಂದ್ರವನ್ನು ಸ್ಥಾಪಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿದ್ದಾರೆ. ಎಸ್‌ಕೆಎಫ್‌ನ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲೂ ಅನೇಕ ಸಮಾಜಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಪ್ರಕಟಣ ತಿಳಿಸಿದೆ.

ಪ್ರೊ.ಎಂ.ಬಿ.ಪುರಾಣಿಕ್‌: ಜನಹಿತಕಾರಿ, ದೂರದೃಷ್ಟಿಯುಳ್ಳ ಶಿಕ್ಷಣತಜ್ಞ, ಉದ್ಯಮಿ, ಸಾಮಾಜಿಕ ಕರ್ಯಕರ್ತ ಹಾಗೂ ರಾಷ್ಟ್ರೀಯವಾದಿ ಚಿಂತನೆಯ ರಾಜಕಾರಣಿಯಾಗಿರುವ ಎಂ.ಬಿ.ಪುರಾಣಿಕ್‌ 34 ವರ್ಷ ಕಾಲ ಪ್ರಾಧ್ಯಾಪಕರಾಗಿ, ಸಸ್ಯವಿಜ್ಞಾನ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದವರು. ಶಿರ್ವದ ಸೇಂಟ್‌ ಮೇರಿ ಪದವಿ ಪೂರ್ವ ಕಾಲೇಜು ಹಾಗೂ ಕೆನರಾ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದ ಅವರು ನಾಲ್ಕು ಪ್ರತ್ಯೇಕ ಪ್ರಾಂಗಣಗಳಲ್ಲಿ 10 ಶೈಕ್ಷಣಿಕ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ತುಳುನಾಡು ಶಿಕ್ಷಣ ಟ್ರಸ್ಟ್‌ ಹಾಗೂ ಶಾರದ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರಾಗಿರುವ ಅವರು ಮಜೂರು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಇನ್ನಂಜೆ ವಿಷ್ಣುಮೂರ್ತಿ ಹಯವದನ ಸ್ವಾಮಿ ಪ್ರೌಢಶಾಲೆ, ಉಡುಪಿ ಪೂರ್ಣಪ್ರಜ್ಞಾ ಕಲೇಜು, ಮೈಸೂರಿನ ರೀಜನಲ್‌ ಕಾಲೇಜ್ ಆಫ್‌ ಎಜುಕೇಷನ್‌, ಗುಜರಾತ್ನ ಆನಂದ್‌ನ ಸರ್ದಾರ್‌ ಪಟೇಲ್‌ ವಿಶ್ವವಿದ್ಯಾಲಯದ ಹಳೆವಿದ್ಯಾರ್ಥಿ. ಪ್ರಾಧ್ಯಾಪಕರಾಗಿದ್ದಾಗ ಎನ್‌ಸಿಸಿ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಕೃಷಿ, ಹೈನುಗಾರಿಕೆಯಲ್ಲೂ ನಿರತರಾಗಿದ್ದಾರೆ. ಮಂಗಳಾ ಸೇವಾ ಸಮಿತಿ ಟ್ರಸ್ಟ್‌ನ (ಬಾಲ ಸಂರಕ್ಷಣಾ ಕೇಂದ್ರ ಕುಟ್ರಪ್ಪಾಡಿ) ಅಧ್ಯಕ್ಷ. ಫಜೀರ್‌ನ ಗೋವನಿಯತಾಶ್ರಯ ಟ್ರಸ್ಟ್‌ ಅರಂಭಿಸಿರುವ ಅವರು ಅಲ್ಲಿ 400ಕ್ಕೂ ಹೆಚ್ಚು ಜಾನುವಾರುಗಳಿಗೆ ಆಶ್ರಯ ನೀಡಿದ್ದಾರೆ. ಆರ್ಥಿಕವಾಗಿ ದುರ್ಬಲರಾಗಿರುವ ಅಂಗವಿಕಲರಿಗೆ ಶಿಕ್ಷಣ ನೀಡುವ ಆರ್‌ಸಿಪಿಎಚ್‌ಡಿ ಟ್ರಸ್ಟ್‌ನ ಅಧ್ಯಕ್ಷ. ವಿಶ್ವಹಿಂದೂ ಪರಿಷತ್‌ನ ಕರ್ನಾಟಕ ಪ್ರಾಂತದ ಕಾರ್ಯಾಧ್ಯಕ್ಷರೂ ಆಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸಕ್ರಿಯರಾಗಿದ್ದ ಅವರು, ವಿಭಾಗ ಸಂಘಚಾಲಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಧಾರ್ಮಿಕ ಪರಿಷತ್‌ನ ರಾಜ್ಯ ಸಮಿತಿ ಸದಸ್ಯರಾಗಿ, ಗೋಸೇವಾ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT