ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟ; ರಿಕ್ಷಾ ಚಾಲಕನ ಚಿಕಿತ್ಸೆ ವೆಚ್ಚ ಬಿಜೆಪಿ ಭರಿಸಲಿದೆ : ಸುನಿಲ್ ಕುಮಾರ್

Last Updated 25 ನವೆಂಬರ್ 2022, 6:45 IST
ಅಕ್ಷರ ಗಾತ್ರ

ಮಂಗಳೂರು: 'ನಗರದ ಗರೋಡಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟದಿಂದ ಗಾಯಗೊಂಡಿರುವ ರಿಕ್ಷಾ ಚಾಲಕ ಪುರುಷೋತ್ತಮ ಅವರ ಚಿಕಿತ್ಸೆ ವೆಚ್ಚವನ್ನು ಜನಪ್ರತಿನಿಧಿಗಳು ಸೇರಿ ಬಿಜೆಪಿಯಿಂದ ಭರಿಸಲಿದ್ದೇವೆ. ಅವರಿಗೆ ಸರ್ಕಾರದಿಂದ ಪರಿಹಾರ ನೀಡುವುದಕ್ಕೂ ಕ್ರಮ ಕೈಗೊಳ್ಳಲಾಗುವುದು' ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದರು.

ಕುಕ್ಕರ್ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

'ಈ ಘಟನೆಯನ್ನು ಅತ್ಯಂತ ಉಗ್ರವಾಗಿ ಖಂಡಿಸುತ್ತೇನೆ. ಈ ಪ್ರಕರಣವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಈ ಘಟನೆ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲು ಹಾಗೂ ಇದರ ಆಳ ಮತ್ತು ಅಗಲವನ್ನು ಅರಿತು, ಈ ಪ್ರಕರಣವನ್ನು ಸಂಪೂರ್ಣವಾಗಿ ಭೇದಿಸುವ ಉದ್ದೇಶದಿಂದ ಇದರ ತನಿಖೆಯನ್ನು ರಾಷ್ಟ್ರೀಯ ತನಿಖೆ ಸಂಸ್ಥೆಗೆ ಹಸ್ತಾಂತರ ಮಾಡಲಾಗಿದೆ' ಎಂದರು..

'ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸಲು ರೂಪಿಸಿದ ಸಂಚುಗಳನ್ನು ವಿಫಲಗೊಳಿಸಲು ಸರ್ಕಾರ ದಿಟ್ಟತನದ ಕ್ರಮ ಕೈಗೊಳ್ಳುತ್ತಲೇ ಬಂದಿದೆ. ಶಿವಮೊಗ್ಗದ ಘಟನೆ ಹಾಗೂ ನೆಟ್ಟಾರಿನ ಘಟನೆಗಳು ನಡೆದ ನಂತರ ಇಂತಹ ಚಟುವಟಿಕೆಗೆ ಕಡಿವಾಣ ಹಾಕಲು ಪಿಎಫ್ಐನಂತಹ ಸಂಘಟನೆಗಳನ್ನು ನಿಷೇಧ ಮಾಡಿ ದ್ದು ಇದರ ಒಂದು ಭಾಗ. ಯಾವುದೇ ಕಾರಣಕ್ಕೂ ಸಮಾಜಘಾತುಕ ಶಕ್ತಿಗಳನ್ನು ಬೆಳೆಯಲಿಕ್ಕೆ ಬಿಡುವುದಿಲ್ಲ. ಸಮಾಜದಲ್ಲಿ ಭಯವನ್ನುಂಟು ಮಾಡುವ ಸಂಘಟನೆಗಳ ಬಗ್ಗೆ ನಮ್ಮ ಸರ್ಕಾರ ಮೃದು ಧೋರಣೆಯನ್ನು ತೆಗೆದುಕೊಳ್ಳುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

'ಈ ರೀತಿಯ ಆತಂಕದ ಪ್ರದೇಶಗಳು ಮಂಗಳೂರಿನ ತನಕ ಬೆಳೆದಿವೆ‌‌ ಇಡೀ ಸಮಾಜವೇ ಒಗ್ಗಟ್ಟಾಗಿ ನಿಂತು ಇದನ್ನು ಎದುರಿಸಬೇಕು' ಎಂದರು.

'ಮೊನ್ನೆ ನಡೆದ ಘಟನೆಯ ಮುಂದುವರಿದ ಭಾಗವಾಗಿ ಕದ್ರಿ ದೇವಸ್ಥಾನದಲ್ಲಿ ಇಂತಹದ್ದೇ ಘಟನೆ ನಡೆಸಲು ಸಂಚು ರೂಪಿಸಿದ್ದರು, ಇನ್ಯಾವುದೋ ಕಚೇರಿಗಳನ್ನು ಹಾಗೂ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿ ಕೊಂಡಿದ್ದರು ಎಂದು ಗೋತ್ತಾಗಿದೆ. ಹಿಂದೂ ಸಮಾಜವನ್ನು ಗುರಿಯನ್ನಾಗಿಸುವುದೇ ಇದರ ಒಟ್ಟು ಉದ್ದೇಶ ಎಂಬುದು ಇದರಿಂದ ಮನದಟ್ಟಾಗುತ್ತದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ. ಆದರೆ ಈ ಸಂಚು ವಿಫಲವಾಗಿದೆ. ಈ ಮಾನಸಿಕತೆಯೇ ದೂರ ಆಗಬೇಕು' ಎಂದು ತಿಳಿಸಿದರು.

'ರಾಷ್ಟ್ರೀಯ ತನಿಖೆ ಸಂಸ್ಥೆ ಮೇಲೆ ಹಾಗೂ ಪೊಲೀಸರ ಮೇಲೆ ವಿಶ್ವಾಸ ಇದೆ. ಇಂತಹ ಸಂಘಟನೆಗಳು ಮತ್ತೆ ಚಿಗುರೊಡೆಯಲಿಕ್ಕೆ ಅವರು ಬಿಡುವುದಿಲ್ಲ' ಎಂದು ಹೇಳಿದರು.

'ಎನ್ಐಎ ಘಟಕ ಇಲ್ಲಿ ಸ್ಥಾಪನೆ ಆಗಬೇಕು. ಖಂಡಿತ ಇವತ್ತಲ್ಲ ನಾಳೆ ಇದು ಆಗಲಿದೆ‌‌. ಕೇಂದ್ರ ಸರ್ಕಾರವು ಪೂರಕವಾಗಿ ಸ್ಪಂದಿಸಿದೆ. ಅದಕ್ಕಿಂತಲೂ ಹೆಚ್ಚಾಗಿ ಈ ರೀತಿಯ ಘಟನೆಗಳನ್ನು ತಡೆಯಲು ಏನೇನು ಕ್ರಮ ಕೈಗೊಳ್ಳಬೇಕೋ, ಅದನ್ನು ತೆಗೆದುಕೊಂಡಿದ್ದೇವೆ' ಎಂದರು.

'ಕರ್ನಾಟಕ ಮಾತ್ರ ಅಲ್ಲ, ದೇಶದ ಯಾವುದೇ ಭಾಗದಲ್ಲಿ ಈ ರೀತಿಯ ವಾತಾವರಣ ಸೃಷ್ಟಿ ಆಗಬಾರದು. ಭಯೋತ್ಪಾದನೆಯನ್ನು ಮಟ್ಟ ಹಾಕದೆ, ವಿಶ್ರಮಿಸುವುದಿಲ್ಲ ಎಂಬುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪಷ್ಟಪಡಿಸಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಇಡೀ ಸಮಾಜ ಒಟ್ಟಾಗಿ ಇದನ್ನು ಎದುರಿಸಬೇಕು.
ಇದಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ನೀಡುತ್ತಿರುವವರ ಬಗ್ಗೆಯೂ ಸಮಾಜ ಎಚ್ಚರ ವಹಿಸಬೇಕು' ಎಂದರು‌.

ಮೇಯರ್ ಜಯಾನಂದ ಅಂಚನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಅವರು ಜೊತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT