ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಪಾಲಿಕೆ ಜನಸ್ಪಂದನ 18ರಂದು

ಪಿಎಂ ಸ್ವನಿಧಿ ಯೋಜನೆಗೆ ಅರ್ಜಿ ಸ್ವೀಕಾರ; ಸುರತ್ಕಲ್‌ನಲ್ಲೂ ಅಹವಾಲು ಆಲಿಕೆ
Published 16 ಡಿಸೆಂಬರ್ 2023, 8:00 IST
Last Updated 16 ಡಿಸೆಂಬರ್ 2023, 8:00 IST
ಅಕ್ಷರ ಗಾತ್ರ

ಮಂಗಳೂರು: ನಾಗರಿಕರ ಅಹವಾಲು ಕೇಳಿ ಪರಿಹಾರ ಒದಗಿಸುವುದಕ್ಕಾಗಿ ಮಹಾನಗರ ಪಾಲಿಕೆ ಇದೇ 18ರಂದು ಪುರಭವನದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.

ಶಾಸಕರಾದ ವೇದವ್ಯಾಸ ಕಾಮತ್‌ ಮತ್ತು ಡಾ.ಭರತ್ ಶೆಟ್ಟಿ ಅವರು ಪಾಲ್ಗೊಳ್ಳುವ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ಆರಂಭಗೊಳ್ಳಲಿದ್ದು ಮಧ್ಯಾಹ್ನ 1 ಗಂಟೆಯ ವರೆಗೆ ನಡೆಯಲಿದೆ. ಸಾರ್ವಜನಿಕರು 10 ಗಂಟೆಯಿಂದ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ರಸ್ತೆ, ಒಳಚರಂಡಿ, ನೀರು, ಬಿಲ್ ಪಾವತಿ, ಕಟ್ಟಡ ಮತ್ತು ಉದ್ದಿಮೆ ಪರವಾನಗಿ, ಘನತ್ಯಾಜ್ಯ‌ ನಿರ್ವಹಣೆ, ಇ-ಖಾತಾ ಮತ್ತಿತರ ಎಲ್ಲ ಸಮಸ್ಯೆಗಳಿಗೂ ನೇರ ಪರಿಹಾರ ನೀಡಲು ಪ್ರಯತ್ನಿಸಲಾಗುವುದು. ಗರಿಷ್ಠ 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸಲಾಗುವುದು. ಜನಸ್ಪಂದನದಲ್ಲಿ ವಿವಿಧ ಕೌಂಟರ್‌ಗಳು ಇರುತ್ತವೆ. ಮೊದಲ ಕೌಂಟರ್‌ನಲ್ಲಿ ಅಹವಾಲು ಸಲ್ಲಿಸಬೇಕು. ಅದನ್ನು ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡಿದ ನಂತರ ಸರದಿಯಂತೆ ಕರೆದು ಅಧಿಕಾರಿಗಳ ಸಮ್ಮುಖದಲ್ಲಿ ಮಾತುಕತೆ ನಡೆಸಲು ಅವಕಾಶ ನೀಡಲಾಗುವುದು ಎಂದು ಮೇಯರ್ ತಿಳಿಸಿದರು.  

ಸ್ವನಿಧಿ ಯೋಜನೆಗೆ ನೋಂದಣಿ

ಪ್ರಧಾನಿ ನರೇಂದ್ರ ಮೋದಿ ಅವರ ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿ ಆಗಲು ಜನಸ್ಪಂದನದಲ್ಲಿ ಅವಕಾಶವಿದೆ. ಬೀದಿ ಬದಿ ವ್ಯಾಪಾರಿಗಳು, ಪತ್ರಿಕೆ ಮತ್ತು ಹಾಲು ವಿತರಕರು, ಹಳೆ ಪಾತ್ರೆ ಕೊಂಡುಕೊಳ್ಳುವವರು, ಬಿದಿರು ಬುಟ್ಟಿ ನೇಯುವವರು ಮತ್ತು ಮಾರಾಟ ಮಾಡುವವರು, ಎಳನೀರು ಮಾರುವವರು ಮುಂತಾಗಿ ಯಾವುದೇ ಕೆಲಸ ಮಾಡುವವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸುಧೀರ್ ಶೆಟ್ಟಿ ತಿಳಿಸಿದರು.

ಬ್ಯಾಂಕ್ ಪಾಸ್‌ ಬುಕ್, ವ್ಯಾಪಾರ ಮಾಡುವ ಸ್ಥಳದಲ್ಲಿ ನಿಂತುಕೊಂಡಿರುವ ಚಿತ್ರ ಮತ್ತು ಆಧಾರ್ ಕಾರ್ಡ್
ಇದ್ದರೆ ಅರ್ಜಿ ಸ್ವೀಕರಿಸಲಾಗುವುದು. ಈ ಯೋಜನೆಯಲ್ಲಿ ₹ 10 ಸಾವಿರ ಸಾಲ ನೀಡಲಾಗುತ್ತದೆ. ಇದಕ್ಕೆ ಶೇಕಡ 7ರಷ್ಟು ಸಬ್ಸಿಡಿ ಇದ್ದು 12 ಕಂತಿನಲ್ಲಿ ಮರುಪಾವತಿ ಮಾಡಿದರೆ ನಂತರ ₹ 20 ಸಾವಿರ ಸಿಗುತ್ತದೆ. ಅದನ್ನು ಸರಿಯಾಗಿ ಪಾವತಿಸಿದರೆ ₹ 50 ಸಾವಿರ ಸಾಲ ಪಡೆಯಬಹುದಾಗಿದೆ. ಇದರ ನೋಂದಣಿ ಸಂಜೆ 5 ಗಂಟೆಯ ವರೆಗೆ ನಡೆಯಲಿದೆ ಎಂದರು. 

ಸುರತ್ಕಲ್ ಭಾಗದ ಜನರ ಸಮಸ್ಯೆ ಪರಿಹಾರಕ್ಕಾಗಿ ಪ್ರತ್ಯೇಕ ಜನಸ್ಪಂದನ ನಡೆಸಲಾಗುವುದು. ಜಪ್ಪಿನಮೊಗರು ಮತ್ತು ಕಂಕನಾಡಿ ಭಾಗಗಳನ್ನು ಒಳಗೊಂಡ ಪ್ರದೇಶದಲ್ಲೂ ಕಾರ್ಯಕ್ರಮ ನಡೆಯಲಿದೆ. 3 ತಿಂಗಳಿಗೊಮ್ಮೆ ಈ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ಉಪಮೇಯರ್ ಸುನಿತಾ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಭರತ್ ಕುಮಾರ್ ಎಸ್‌, ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತ್ ಅಮೀನ್‌, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT