ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: 1,500 ಕೆ.ಜಿ.ಗೂ ಅಧಿಕ ಸ್ಫೋಟಕ ಸಾಮಗ್ರಿ ವಶ

Last Updated 16 ಆಗಸ್ಟ್ 2021, 13:23 IST
ಅಕ್ಷರ ಗಾತ್ರ

ಮಂಗಳೂರು: ನಗರದ ಬಂದರ್‌ನ ಗಾಂಧಿ ಸನ್ಸ್ ಕಟ್ಟಡದ ಕೊಠಡಿಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 1,500 ಕೆ.ಜಿ.ಗೂ ಅಧಿಕ ಅಪಾಯಕಾರಿ ಸ್ಫೋಟಕಸಾಮಗ್ರಿಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಬಂಟ್ವಾಳ ತಾಲ್ಲೂಕು ಮುಡಿಪು ಕೈರಂಗಳ ನಿವಾಸಿ ಆನಂದ ಗಟ್ಟಿ (50) ಬಂಧಿತ ಆರೋಪಿ. ಆರೋಪಿಯಿಂದ 400 ಕೆ.ಜಿ. ಸಲ್ಫರ್ ಪೌಡರ್, 350 ಕೆ.ಜಿ. ಪೊಟ್ಯಾಷಿಯಂ ನೈಟ್ರೇಟ್, 50 ಕೆ.ಜಿ. ಬೇರಿಯಂ ನೈಟ್ರೇಟ್, 395 ಕೆ.ಜಿ. ಪೊಟ್ಯಾಷಿಯಂ ಕ್ಲೊರೈಟ್, 260 ಕೆ.ಜಿ. ತೂಕದ ವಿವಿಧ ಬಗೆಯ ಅಲ್ಯುಮಿನಿಯಂ ಪೌಡರ್, 30 ಕೆ.ಜಿ. ಲೆಡ್ ಬಾಲ್ಸ್, 240 ಕೆ.ಜಿ. ಚಾರ್ಕೊಲ್, 100 ಏರ್‌ ರೈಲ್‌ಗಳನ್ನು ಒಳಗೊಂಡ 140 ಪಿಲೆಟ್ಸ್ ಪ್ಯಾಕೇಟ್, 100 ಏರ್ ರೈಲ್‌ಗಳನ್ನು ಒಳಗೊಂಡ 21 ಪಿಲೆಟ್ಸ್ ಪ್ಯಾಕೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 1,500 ಕೆ.ಜಿ. ತೂಕದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ₹ 1.11 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಬಂದರು ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟಡವೊಂದರ ಕೊಠಡಿಯಲ್ಲಿ ಅಕ್ರಮವಾಗಿ ನಿಷೇಧಿತ ಸ್ಫೋಟಕಗಳನ್ನು ದಾಸ್ತಾನು ಇಟ್ಟಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಪರಿಶೀಲನೆ ನಡೆಸಿದ್ದರು.

ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳಿರುವ ಕಟ್ಟಡವೊಂದರ ಕೊಠಡಿಯಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ದಾಸ್ತಾನು ಇಟ್ಟಿರುವುದು ಪತ್ತೆಯಾಗಿದೆ.

ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿದಾಗ ಬಂದರು ಪ್ರದೇಶದಲ್ಲಿ ಗನ್ ಶಾಪ್ ನಡೆಸುತ್ತಿರುವ ಆನಂದ್ ಗಟ್ಟಿ ಇದನ್ನು ಸಂಗ್ರಹಿಸಿರುವುದು ಗೊತ್ತಾಗಿದೆ. ಗನ್ ಶಾಪ್ ಪರವಾನಗಿಗೂ ಪತ್ತೆಯಾದ ಸ್ಫೋಟಕಕ್ಕೂ ಯಾವುದೇ ಸಂಬಂಧವಿಲ್ಲ. ಕೋರೆ, ಪಟಾಕಿ, ಬಾವಿಯ ಕಲ್ಲು ಸ್ಫೋಟಿಸಲು, ಮೀನು ಹಿಡಿಯಲು ಈ ಸ್ಫೋಟಕಗಳನ್ನು ಬಳಸಲಾಗುತ್ತಿತ್ತು. ಆರೋಪಿ ಆನಂದ್ ಗಟ್ಟಿಯನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಸ್ಫೋಟಕ ಪೂರೈಕೆದಾರರು, ಇದರಲ್ಲಿ ಶಾಮೀಲು ಆಗಿರುವವರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT