ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ ನಗರಿಗೆ ಪ್ರವಾಸಿಗರ ಲಗ್ಗೆ

ಕ್ರಿಸ್‌ಮಸ್, ಹೊಸ ವರ್ಷಾಚರಣೆ ಸಂಭ್ರಮ, ಹೋಂಸ್ಟೇ, ಹೋಟೆಲ್‌ಗಳು ಭರ್ತಿ
Last Updated 22 ಡಿಸೆಂಬರ್ 2022, 8:50 IST
ಅಕ್ಷರ ಗಾತ್ರ

ಮಂಗಳೂರು: ಕ್ರಿಸ್‌ಮಸ್ ಹಬ್ಬಕ್ಕೆ ಶೃಂಗಾರಗೊಳ್ಳುವ ಚರ್ಚ್‌ಗಳನ್ನು ಕಣ್ತುಂಬಿಕೊಳ್ಳಲು, ಹಬ್ಬದ ಬೆನ್ನಲ್ಲೇ ಬರುವ ಹೊಸ ವರ್ಷವನ್ನು ಸ್ವಾಗತಿಸಲು ಪ್ರವಾಸಿಗರು ಕಡಲತಡಿಯ ನಗರಿ ಮಂಗಳೂರಿಗೆ ಲಗ್ಗೆ ಇಟ್ಟಿದ್ದಾರೆ. ಮೂಡುಬಿದಿರೆಯ ಆಳ್ವಾಸ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ವೀಕ್ಷಣೆಗೆ ಬರುವವರ ಸಂಖ್ಯೆಯೂ ಹೆಚ್ಚಿದೆ.

ನಗರದ ಹೋಟೆಲ್‌ಗಳು, ರೆಸಾರ್ಟ್‌ಗಳು, ಬಹುತೇಕ ಎಲ್ಲ ಹೋಂಸ್ಟೇ, ಹೋಟೆಲ್‌ಗಳಲ್ಲಿ ಜನವರಿ 2ರವರೆಗೆ ಬುಕಿಂಗ್‌ಗಳು ಮುಗಿದಿವೆ. ದುಬಾರಿ ಬಾಡಿಗೆಯ ಹೋಟೆಲ್‌ಗಳಿಂದ ಸಾಮಾನ್ಯ ಮಟ್ಟದ ಹೋಟೆಲ್‌ಗಳವರೆಗೆ ಎಲ್ಲವೂ ಭರ್ತಿಯಾಗಿವೆ. ಜಿಲ್ಲೆಯಲ್ಲಿ 80 ನೋಂದಾಯಿತ ಹೋಂಸ್ಟೇಗಳು ಇವೆ. ಇವುಗಳಲ್ಲಿ ಹೆಚ್ಚಿನವು ಮಂಗಳೂರು ತಾಲ್ಲೂಕಿನಲ್ಲಿ ಅದರಲ್ಲೂ ವಿಶೇಷವಾಗಿ ಕಡಲ ಕಿನಾರೆಯ ಬಳಿ ಇವೆ. ನೋಂದಣಿ ಆಗದ ಹೋಂಸ್ಟೇಗಳು ಹಲವಾರು ಇವೆ.

ಹೊರ ಜಿಲ್ಲೆಗಳಿಂದ ಅದರಲ್ಲೂ ವಿಶೇಷವಾಗಿ ಬೆಂಗಳೂರು ಭಾಗದಿಂದ ಹೆಚ್ಚು ಜನರು ವರ್ಷಾಂತ್ಯವನ್ನು ಸಮುದ್ರ ಕಿನಾರೆಯಲ್ಲಿ ಕಳೆಯಲು ಉತ್ಸುಕರಾಗಿದ್ದಾರೆ. ಹೀಗಾಗಿ, ಬೇಡಿಕೆ ಹೆಚ್ಚಿದಂತೆ ಬಾಡಿಗೆ ದರಗಳು ದಿನದಿಂದ ದಿನಕ್ಕೆ ಬದಲಾಗುತ್ತಿವೆ. ‘ಸಾಮಾನ್ಯ ದಿನಗಳಲ್ಲಿ ಇರುವ ದರಕ್ಕಿಂತ ₹ 2,000ದಿಂದ ₹ 5,000ವರೆಗೆ ಹೆಚ್ಚಳವಾಗಿದೆ’ ಎಂಬುದು ವಿಚಾರಣೆ ಮಾಡಿದವರು ನೀಡುವ ಮಾಹಿತಿ.

ಸ್ಥಳೀಯವಾಗಿ ನಾವು ಬಾಡಿಗೆ ದರ ಹೆಚ್ಚಳ ಮಾಡುವುದಿಲ್ಲ. ಆನ್‌ಲೈನ್ ಬುಕಿಂಗ್‌ನಲ್ಲಿ ಅರ್ಧದಷ್ಟು ಕೊಠಡಿಗಳು ಭರ್ತಿಯಾಗುತ್ತಿದ್ದಂತೆ ದಿನದಿಂದ ದಿನಕ್ಕೆ ದರಪಟ್ಟಿ ಬದಲಾಗುತ್ತದೆ ಎಂಬುದು ಹೋಟೆಲ್‌ನವರು ನೀಡುವ ಸಮರ್ಥನೆ.

ನಗರದಲ್ಲಿ 100ಕ್ಕೂ ಹೆಚ್ಚು ಹೋಟೆಲ್‌ಗಳು ಹೋಟೆಲ್ ಅಸೋಸಿಯೇಷನ್‌ ಸದಸ್ಯತ್ವ ಹೊಂದಿವೆ. ಜನವರಿ 1ರವರೆಗೆ ಎಲ್ಲ ಹೋಟಲ್‌ಗಳಲ್ಲೂ ಬುಕಿಂಗ್ ಇದೆ. ಮಂಗಳೂರಿಗೆ ರಸ್ತೆ, ರೈಲ್ವೆ, ವಿಮಾನ ನಿಲ್ದಾಣ ಸೌಲಭ್ಯ ಇರುವ ಕಾರಣಕ್ಕೆ ಪ್ರವಾಸಿಗರ ಸಂಖ್ಯೆ ಸಹಜವಾಗಿ ಹೆಚ್ಚಾಗುತ್ತದೆ’ ಎನ್ನುತ್ತಾರೆ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಹಾಸ್ ಅವರು.

‘ಸಮುದ್ರ ನೋಡುವ ಕೌತುಕ ಇತ್ತು. ವರ್ಷಾಂತ್ಯಕ್ಕೆ ಮಂಗಳೂರಿಗೆ ಬರಲು, ವಸತಿಗಾಗಿ ಇಲ್ಲಿ ಹತ್ತಾರು ಹೋಟೆಲ್‌ಗಳನ್ನು ವಿಚಾರಿಸಿದೆ. ಎಲ್ಲಿಯೂ ಕೊಠಡಿ ಸಿಗುತ್ತಿಲ್ಲ’ ಎಂದು ಬೆಂಗಳೂರಿನ ಟೆಕಿ ಕಾರ್ತಿಕ್ ಡಿ.ಕೆ ಪ್ರತಿಕ್ರಿಯಿಸಿದರು.

‘ಡಿ.21ರಿಂದ ಜನವರಿ 2ರವರೆಗೆ ಒಂದು ಮನೆ ಕೂಡ ಖಾಲಿ ಇಲ್ಲ. ಬೆಂಗಳೂರು ಭಾಗದವರ ಬುಕಿಂಗ್ ಜಾಸ್ತಿ ಇದೆ. ಕೋವಿಡ್ ನಂತರ ಇದೇ ಮೊದಲ ಬಾರಿಗೆ ಇಷ್ಟು ಬೇಡಿಕೆ ಬಂದಿದ್ದು, ಆಶಾಭಾವ ಮೂಡಿಸಿದೆ’ ಎಂದು ಆರ್ಯನ್ ಬೀಚ್‌ ಹೌಸ್‌ನ ಮಾಲೀಕ ಪ್ರಸಾದ್ ಶೆಟ್ಟಿ ತಿಳಿಸಿದರು.

‘ಮಕ್ಕಳಿಗೆ ಕ್ರಿಸ್‌ಮಸ್ ರಜೆ ಸಿಗುವುದರಿಂದ ಪ್ರತಿ ಬಾರಿ ವರ್ಷದ ಕೊನೆಗೆ ಮಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಕಳೆದ ಎರಡು ವರ್ಷ ಮಾತ್ರ ಕೋವಿಡ್ ಕಾಯಿಲೆ ಸಂಭ್ರಮವನ್ನು ಕಸಿದಿತ್ತು’ ಎಂದು ಆರ್‌.ಕೆ. ಬೀಚ್‌ ಹೋಂಸ್ಟೇ ಮಾಲೀಕ ಜಯಂತ್ ಶೆಟ್ಟಿ ಹೇಳಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ಹೊರರಾಜ್ಯಗಳ ವಿದ್ಯಾರ್ಥಿಗಳು ರೈಲಿನಲ್ಲಿ ಬರುತ್ತಿದ್ದಾರೆ. ಹೀಗಾಗಿ, ರೈಲ್ವೆ ನಿಲ್ದಾಣ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಕೆಎಸ್‌ಆರ್‌ಟಿಸಿ ಈ ಮಕ್ಕಳಿಗೆ ಬಸ್‌ ವ್ಯವಸ್ಥೆಗೊಳಿಸಿದೆ. ಮಂಗಳವಾರ 2,856 ಪ್ರಯಾಣಿಕರು, 51 ಟ್ರಿಪ್‌ಗಳು, ಬುಧವಾರ 34 ಟ್ರಿಪ್‌ಗಳು ಸುಮಾರು, 1,900 ಪ್ರಯಾಣಿಕರು ಕೆಎಸ್‌ಆರ್‌ಟಿಅಇ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ.

ವರ್ಷಾಂತ್ಯಕ್ಕೆ ಬೆಂಗಳೂರಿನಿಂದ 20 ಹೆಚ್ಚುವರಿ ಬಸ್‌ಗಳು ಕಡಲ ನಗರಿ ಬರಲಿವೆ. ‘ಖಾಸಗಿ ಬಸ್‌ಗಳಂತೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳಲ್ಲಿ ಶೇ 10ರಷ್ಟು ಪ್ರಯಾಣದರ ಹೆಚ್ಚಿಸಲಾಗಿದೆ’ ಎಂಬುದು ಪ್ರಯಾಣಿಕರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT