ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಮಾಜಿಕ ಜಾಲತಾಣಗಳ ಮೊರೆಹೋದ ಮಂಗಳೂರು ವಿಶ್ವವಿದ್ಯಾನಿಲಯ

1,400ಕ್ಕೂ ಅಧಿಕ ಅರ್ಜಿ, ಅರ್ಜಿ ಸಲ್ಲಿಕೆಗೆ ಅವಧಿ ಸೆ.25ರವರೆಗೆ ವಿಸ್ತರಣೆ
Published : 11 ಸೆಪ್ಟೆಂಬರ್ 2024, 6:16 IST
Last Updated : 11 ಸೆಪ್ಟೆಂಬರ್ 2024, 6:16 IST
ಫಾಲೋ ಮಾಡಿ
Comments

ಮಂಗಳೂರು: ಸ್ನಾತಕೋತ್ತರ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಿಸಲು ಮಂಗಳೂರು ವಿಶ್ವವಿದ್ಯಾನಿಲಯವು ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗಿದೆ.

ಎಂ.ಎ, ಎಂ.ಕಾಂ, ಡಿಪ್ಲೊಮಾ ಇನ್ನಿತರ ಸ್ನಾತಕೋತ್ತರ ಕೋರ್ಸ್‌ಗಳಿಗೆ ಅಧಿಕ ಶುಲ್ಕ, ಜೊತೆಗೆ, ಖಾಸಗಿ ವಿಶ್ವವಿದ್ಯಾಲಯಗಳು, ಕಾಲೇಜುಗಳ ಪೈಪೋಟಿಯಿಂದ ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಜಿ ಕೋರ್ಸ್‌ಗಳಿಗೆ ಪ್ರವೇಶಾತಿ ಕುಂಠಿತವಾಗುತ್ತಿದೆ. ಈ ಕಾರಣಕ್ಕೆ ರಾಜ್ಯ, ಹೊರ ರಾಜ್ಯಗಳ ಪಿಜಿ ಪ್ರವೇಶ ಬಯಸುವ ವಿದ್ಯಾರ್ಥಿಗಳನ್ನು ಸೆಳೆಯಲು, ವಿಭಾಗವಾರು ಸಣ್ಣ ವಿಡಿಯೊ ತುಣುಕುಗಳನ್ನು ಮಾಡಿ, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ಗಳ ಮೂಲಕ ಹಂಚಿಕೊಳ್ಳುತ್ತಿದೆ.

ಮಂಗಳೂರು ವಿವಿಯಲ್ಲಿ 28 ವಿಭಾಗಗಳು ಇದ್ದು, ಒಟ್ಟು 42 ವಿವಿಧ ಕೋರ್ಸ್‌ಗಳು ಅಸ್ತಿತ್ವದಲ್ಲಿವೆ. ಇವುಗಳಲ್ಲಿ ಕೆಲವು ಕೋರ್ಸ್‌ಗಳಿಗೆ ಕಳೆದ ವರ್ಷ 10ಕ್ಕಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗಿದ್ದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈ ವಿಭಾಗಗಳು ಮುಚ್ಚುವ ಆತಂಕದಿಂದ ತಪ್ಪಿಸಿಕೊಳ್ಳಲು, ಪ್ರಾಧ್ಯಾಪಕರು ಈ ತಂತ್ರ ಬಳಸಿದ್ದಾರೆ.

ವಿಡಿಯೊದಲ್ಲಿ ಏನಿದೆ?: ಪ್ರತಿ ವಿಭಾಗದ ವಿಡಿಯೊದಲ್ಲಿ ಅಲ್ಲಿರುವ ಸೌಲಭ್ಯಗಳು, ಪ್ರಯೋಗಾಲಯ, ವಾಚನಾಲಯದ ವಿಶೇಷತೆ, ಉದ್ಯೋಗಾವಕಾಶ, ಅಲ್ಲಿಂದ ಕಲಿತು ಉನ್ನತ ಸ್ಥಾನಕ್ಕೆ ಏರಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ನೀಡಲಾಗಿದೆ. ಸುಮಾರು 17 ವಿಭಾಗಗಳು ಇಂತಹ 2–3 ನಿಮಿಷಗಳ ವಿಡಿಯೊ ತಯಾರಿಸಿವೆ.

ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳು ಮಾತ್ರವಲ್ಲದೆ, ರಾಜ್ಯ– ಹೊರರಾಜ್ಯಗಳ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾಲಯದ ವಿಶೇಷತೆ ತಿಳಿಯಲು ಈ ವಿಡಿಯೊಗಳು ಸಹಕಾರಿಯಾಗಿವೆ. ಅನೇಕ ಹಳೆ ವಿದ್ಯಾರ್ಥಿಗಳು ವಿಡಿಯೊ ಶೇರ್ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈಗಾಗಲೇ 1,400ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅವುಗಳಲ್ಲಿ ರಸಾಯನ ವಿಜ್ಞಾನ, ಎಂ.ಕಾಂ., ಇಂಡಸ್ಟ್ರಿಯಲ್ ಕೆಮೆಸ್ಟ್ರಿ ವಿಷಯಗಳಿಗೆ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಸಲ್ಲಿಕೆ ಅವಧಿಯನ್ನು ಸೆ.25ರವರೆಗೆ ವಿಸ್ತರಿಸಲಾಗಿದೆ ಎಂದು ವಿವಿಯ ಕುಲಸಚಿವ (ಆಡಳಿತ) ರಾಜು ಮೊಗವೀರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT