ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಪಾದೆ: ಅಭಿವೃದ್ಧಿಯ ವೇಗದ ನಡುವೆ ಸಂಚಾರದ ಸಂಕಟ

ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳ ಸಮೀಪದ ಪ್ರದೇಶ
Last Updated 23 ಜೂನ್ 2022, 2:23 IST
ಅಕ್ಷರ ಗಾತ್ರ

ಮಂಗಳೂರು: ನಗರದ ನಾಡಿಯಂತಿರುವ ‍ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಮುಖ್ಯರಸ್ತೆಗಳಿಗೆ ದಾರಿ ಇರುವ ಪ್ರದೇಶ. ಹೊರಗಿನಿಂದ ನೋಡುವಾಗ ಎಲ್ಲವೂ ಸರಿ ಇರುವಂತೆ ಕಾಣುತ್ತಿದೆಯಾದರೂ ಒಳಗೆ ಪ್ರವೇಶಿಸಿದರೆ ಹತ್ತಾರು ಸಮಸ್ಯೆಗಳಿರುವ ಬಡಾವಣೆ. ಇದು, ನಗರದ ದೇರೆಬೈಲ್‌ ಭಾಗದ ಪರಪಾದೆಯ ಸ್ಥಿತಿ.

ಒಂದು ಭಾಗದಲ್ಲಿ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆ, ಮತ್ತೊಂದು ಕಡೆ ರಾಷ್ಟ್ರೀಯ ಹೆದ್ದಾರಿ. ಇವೆರಡಕ್ಕೂ ದೇರೆಬೈಲ್ ಕೊಂಚಾಡಿಯಿಂದ ಮಾಲೆಮಾರ್ ಮೂಲಕ ಸಂಪರ್ಕ ಕಲ್ಪಿಸುವ ಪ್ರದೇಶವಿದು. ಎತ್ತರ–ತಗ್ಗು, ಕುರುಚಲು ಕಾಡು ಮತ್ತು ರಸ್ತೆ ತಿರುವುಗಳು ಹೆಚ್ಚು ಇರುವ ಪ್ರದೇಶವಾಗಿರುವುದರಿಂದ ಕೆಲವು ಕಡೆಗಳಲ್ಲಿ ವಾಹನ ಸವಾರರು ಕಷ್ಟಪಟ್ಟು ಸಾಗಬೇಕಾದ ಪರಿಸ್ಥಿತಿ.

ಮಾಲೆಮಾರ್ ರಸ್ತೆಯ ಬಜಾಜ್ ಸುಪ್ರೀಂ ಮತ್ತು ಪೈ ಇಂಟರ್‌ನ್ಯಾಷನಲ್‌ ಸಮೀಪದಿಂದ ಸಾಗಿ ನಾಗಬನವನ್ನು ದಾಟಿ ಎತ್ತರಕ್ಕೇರಿದರೆ ಪರಪಾದೆ ಬಡಾವಣೆ ತೆರೆದುಕೊಳ್ಳುತ್ತದೆ. ಈ ರಸ್ತೆಯ ಮೂಲಕ ನೇರವಾಗಿ ಮುಂದೆ ಸಾಗಿದರೆ ಆಕಾಶಭವನ ಸೇರಬಹುದು. ಮುಖ್ಯ ರಸ್ತೆಯ ಅಲ್ಲಲ್ಲಿ ಸಣ್ಣ ಹೊಂಡಗಳು ಇವೆ. ಆದರೆ ಒಳ ರಸ್ತೆಗಳಿಗೆ ಸಾಗಿದರೆ ಎಲ್ಲ ಕಡೆಯಲ್ಲೂ ಸಮಸ್ಯೆಗಳು ಎದುರಾಗುತ್ತವೆ. ತಗ್ಗು ಪ್ರದೇಶಗಳಲ್ಲಂತೂ ವಾಹನ ಸಂಚಾರ ದುಸ್ತರ. ‌

ಕೆಲವು ಪ್ರದೇಶಗಳಲ್ಲಿ ಮನೆಗಳ ಸುತ್ತ ಕುರುಚಲು ಕಾಡು ಬೆಳೆದಿದೆ. ಕೆಲವು ಕಡೆಗಳಲ್ಲಿ ರಸ್ತೆಗಳಿಗೂ ಗಿಡ–ಮರಗಳ ರೆಂಬೆಗಳು ಚಾಚಿಕೊಂಡಿವೆ. ಇಂಥ ಕಡೆಗಳಲ್ಲಿ ವಾಹನ ಸವಾರರಿಗೆ ಕಷ್ಟವಾಗುತ್ತಿದೆ. ಒಳರಸ್ತೆಗಳ ಪೈಕಿ ಹಲವು, ಕಾಂಕ್ರೀಟ್‌ನಿಂದ ‘ಕಂಗೊಳಿಸುತ್ತಿದ್ದರೆ’ ಕೆಲವೊಂದಕ್ಕೆ ಡಾಂಬರು ಭಾಗ್ಯವೂ ದಕ್ಕಲಿಲ್ಲ.

ಒಳಚರಂಡಿಗಳ ಭಾರಿ ಸಮಸ್ಯೆ

ಪರಪಾದೆಯಲ್ಲಿ ಈಚಿನ ಕೆಲವು ವರ್ಷಗಳ ವರೆಗೆ ಒಳಚರಂಡಿ ಸಮಸ್ಯೆ ತುಂಬ ತೀವ್ರವಾಗಿತ್ತು. ಮಳೆಗಾಲದಲ್ಲಿ ಮನೆಗಳ ಒಳಗೆ ನೀರು ಬಂದಿರುವುದನ್ನು ಕೂಡ ಇಲ್ಲಿನವರು ನೆನಪಿಸಿಕೊಳ್ಳುತ್ತಾರೆ. ಈಗ ಚರಂಡಿ ಸಮಸ್ಯೆಗೆ ಬಹುತೇಕ ಪರಿಹಾರವಾಗಿದೆ. ಆದರೂ ಆತಂಕ ಇನ್ನೂ ಕಾಡುತ್ತಿದೆ. ಮಳೆಗಾಲ ಆರಂಭವಾಗಿರುವುದರಿಂದ ಮುಂದೇನಾಗುತ್ತದೆಯೋ ಎಂಬ ಭಯದಲ್ಲಿದ್ದಾರೆ ಕೆಲವರು.

‘ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ಭಾರಿ ಮಾತು ಕೇಳಿಬರುತ್ತಿದೆ. ಆದರೆ ನಡೆಯುತ್ತಿರುವ ಕಾಮಗಾರಿಗಳನ್ನು ನೋಡಿದರೆ ಅದೆಲ್ಲ ನಗರ ಮಧ್ಯದಲ್ಲಿರುವವರಿಗೆ ಮಾತ್ರ ಎಂಬಂತೆ ತೋರುತ್ತಿದೆ. ಪ್ರಮುಖ ರಸ್ತೆಯ ಬದಿಯಲ್ಲೇ ಮನೆ ಮಾಡಿಕೊಂಡಿದ್ದರೂ ನಾವು ಯಾವುದೋ ಅನ್ಯಪ್ರದೇಶದಲ್ಲಿ ಇದ್ದಂತೆ ಭಾಸವಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಕೂಡ ನಮ್ಮನ್ನು ಅದೇ ರೀತಿ ನೋಡುತ್ತಿದ್ದಾರೆ’ ಎಂದು ದುಗುಡ ತೋಡಿಕೊಳ್ಳುತ್ತಾರೆ ಸ್ಥಳೀಯರು.

‘ಎಂಟು ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. ಆರಂಭದಲ್ಲಿ ತುಂಬ ಸಮಸ್ಯೆ ಎದುರಾಗಿತ್ತು. ಚರಂಡಿ ನೀರು ಒಳಗೆ ಬರುತ್ತಿತ್ತು. ಈಗ ಅದಕ್ಕೆ ಪರಿಹಾರವಾಗಿದೆ. ಆದರೆ ರಸ್ತೆ ಸಂಪರ್ಕವೊಂದು ಸಮರ್ಪಕವಾದರೆ ನೆಮ್ಮದಿಯಿಂದ ಇರಬಹುದು’ ಎಂಬುದು ದಾಸಗು ಕಂಪೌಂಡ್‌ ನಿವಾಸಿ ಶುಭಾ ರಮಾನಾಥ ಅವರ ಅಭಿಪ್ರಾಯ.

‘ಈ ಭಾಗದ ಕೆಲವು ಕಡೆಗಳಲ್ಲಿ ಡಾಂಬರು ರಸ್ತೆ ಮಾಡಿ ಪ್ರಯೋಜನವಿಲ್ಲ. ಮಳೆಗಾಲದಲ್ಲಿ ಸಹಜವಾದ ಒರತೆ ನೀರು ಬರುವುದರಿಂದ ಡಾಂಬರು ಕಿತ್ತು ಹೋಗುವ ಸಾಧ್ಯತೆ ಇದೆ. ಆದ್ದರಿಂದ ಕಾಂಕ್ರಿಟ್ ರಸ್ತೆಯೊಂದೇ ಪರಿಹಾರ’ ಎಂಬ ಅಭಿಪ್ರಾಯವೂ ಕೇಳಿಬಂತು.

****

ಮಹಾನಗರ ಪಾಲಿಕೆಯವರು ಒಳಚರಂಡಿಯನ್ನೇನೋ ಮಾಡಿದ್ದಾರೆ. ಆದರೆ ಕಾಮಗಾರಿ ಅಸಮರ್ಪಕವಾಗಿರುವುದರಿಂದ ಬಾವಿಯ ಶುದ್ಧ ನೀರು ಹೊಲಸಾಗಿದೆ. ಈಗ ಕೆಸರು ಮಿಶ್ರಿತ ಬೋರ್‌ವೆಲ್ ನೀರು ಕುಡಿಯುವ ಪರಿಸ್ಥಿತಿ ಎದುರಾಗಿದೆ.

-ಶಾರದಾ ಭಟ್‌ ಬಡಾವಣೆಯ ನಿವಾಸಿ

****

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಪದೇ ಪ‍ದೇ ಮನವಿ ಮಾಡಿರುವುದರಿಂದ ಒಂದಷ್ಟು ಕೆಲಸಗಳು ಆಗಿವೆ. ಇನ್ನೂ ತುಂಬ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಾಗಿವೆ. ರಸ್ತೆ ಸಮಸ್ಯೆಗೆ ಪರಿಹಾರ ಕಾಣಬೇಕಾಗಿದೆ.

-ರತ್ನಾಕರ ಕೆ,ದಾಸಗು ಕಂಪೌಂಡ್‌ ನಿವಾಸಿ

****

ಸಮಸ್ಯೆಗಳಿಗೆ ಆದ್ಯತೆ ಮೇಲೆ ಪರಿಹಾರ

ಪರಪಾದೆ ಭಾಗದಲ್ಲಿ ಒಳಚರಂಡಿಯದ್ದೇ ದೊಡ್ಡ ಸಮಸ್ಯೆಯಾಗಿತ್ತು. ಅದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ. ರಸ್ತೆಗಳ ಅಭಿವೃದ್ಧಿಯೂ ಸಾಕಷ್ಟು ಆಗಿದೆ. ಒಂದೊಂದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಆದ್ಯತೆ ಮೇಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಯಾರಿಗೂ ತೊಂದರೆಯಾಗಬಾರದು ಎಂಬುದು ನನ್ನ ನೀತಿ. ಒಂದು ಪ್ರದೇಶದವರಿಗಾಗಿ ಮತ್ತೊಂದು ಕಡೆಯವರಿಗೆ ಸಮಸ್ಯೆ ಮಾಡುವುದು ಸರಿಯಲ್ಲ. ಆದ್ದರಿಂದ ಸರಿಯಾದ ಅಧ್ಯಯನ ನಡೆಸಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ.

- ರಂಜನಿ ಕೋಟ್ಯಾನ್‌,ನಗರಪಾಲಿಕೆ ಸದಸ್ಯೆ, ದೇರೆಬೈಲ್ ದಕ್ಷಿಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT