ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಲೋಬೊ ಪುನರಾಯ್ಕೆ

14 ಅಭ್ಯರ್ಥಿಗಳು ಅವಿರೋಧ ಆಯ್ಕೆ
Published 6 ಏಪ್ರಿಲ್ 2024, 5:46 IST
Last Updated 6 ಏಪ್ರಿಲ್ 2024, 5:46 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಕಥೋಲಿಕ್ ಕೋ– ಆಪರೇಟಿವ್ ಬ್ಯಾಂಕ್ (ಎಂಸಿಸಿ) ಅಧ್ಯಕ್ಷರಾಗಿ ಅನಿಲ್‌ ಲೋಬೊ ಪುನರಾಯ್ಕೆಯಾಗಿದ್ದಾರೆ.

ಸೋಮವಾರ ನಡೆದ ಚುನಾವಣೆಯಲ್ಲಿ ನಿರ್ದೇಶಕ ಮಂಡಳಿಗೆ 14 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜೆರಾಲ್ಡ್ ಜೂಡ್ ಡಿಸಿಲ್ವ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ. ಚುನಾವಣಾಧಿಕಾರಿಯಾಗಿದ್ದರು. ಮೇಲ್ವಿಚಾರಕ ಎನ್.ಜೆ. ಗೋಪಾಲ್ ಸಹಕರಿಸಿದರು. ಬ್ಯಾಂಕ್‌ನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಇದ್ದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಿಲ್ ಲೋಬೊ, ‘ಬ್ಯಾಂಕ್‌ನ ಕಾರ್ಯಕ್ಷೇತ್ರ ವಿಸ್ತರಣೆ, ಬ್ಯಾಂಕಿಂಗ್ ಸೇವೆಯಲ್ಲಿ ಸಿಬ್ಬಂದಿಯ ಜ್ಞಾನ– ಕೌಶಲ ಅಭಿವೃದ್ಧಿ, ಸ್ಮರ್ಧಾತ್ಮಕ ಬಡ್ಡಿದರದಲ್ಲಿ ಶೈಕ್ಷಣಿಕ, ವಾಹನ ಸಾಲ, ಬ್ಯಾಂಕ್ ವ್ಯವಹಾರವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ, ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುವ ಉದ್ದೇಶವಿದೆ. ಗ್ರಾಹಕರ ಅಹವಾಲು ತುರ್ತು ವಿಲೇವಾರಿಗೆ ವಿಶೇಷ ಕುಂದುಕೊರತೆ ನಿವಾರಣಾ ಘಟಕ ಸ್ಥಾಪಿಸಲಾಗುವುದು’ ಎಂದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬ್ಯಾಂಕ್ ಸಂಪೂರ್ಣ ಆಧುನೀಕೃತ 16 ಶಾಖೆಗಳನ್ನು ಹೊಂದಿದ್ದು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ವ್ಯವಹಾರ ವಿಸ್ತರಣೆಗೆ ಅನುಮತಿ ದೊರಕಿದೆ. ಪ್ರಸ್ತುತ 1 ಲಕ್ಷಕ್ಕೂ ಮಿಕ್ಕಿ ಗ್ರಾಹಕರನ್ನು ಹೊಂದಿದೆ. ಮುಂದಿನ ವರ್ಷಗಳಲ್ಲಿ ಬ್ಯಾಂಕ್ ಕಾರ್ಯವ್ಯಾಪ್ತಿಯನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸುವ ಕನಸು ಇದೆ ಎಂದು ಹೇಳಿದರು.

ಸಿಬ್ಬಂದಿಗೆ ಕೌಶಲ ತರಬೇತಿ ನೀಡಲಾಗಿದ್ದು, ತ್ವರಿತ ಸೇವೆ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಉಸ್ತುವಾರಿ ಸಿಬ್ಬಂದಿ ಇರುತ್ತಾರೆ. ಗ್ರಾಹಕರಿಗೆ ಯಾವುದೇ ಶಾಖೆಯಲ್ಲಿ ಅಹವಾಲುಗಳಿದ್ದರೆ ನಿವಾರಣೆಗಾಗಿ ಸ್ಥಾಪಿಸುವ ವಿಶೇಷ ಘಟಕವನ್ನು ಸಂಪರ್ಕಿಸಬಹುದು. ಬ್ಯಾಂಕ್‌ನ ಎಲ್ಲ ವಿತ್ತೀಯ ವ್ಯವಹಾರಗಳು ಡಿಜಿಟಲೀಕರಣಗೊಳ್ಳಲಿವೆ. ಬ್ಯಾಂಕ್‌ನ ಶತಮಾನೋತ್ತರ ದಶಮಾನೋತ್ಸವ ಸಂದರ್ಭದಲ್ಲಿ ಅನೇಕ ಸಾಮಾಜಿಕ ಕಾರ್ಯಗಳಿಗೆ ನೆರವು ನೀಡಲಾಗಿದೆ ಎಂದು ತಿಳಿಸಿದರು.

ಬ್ಯಾಂಕ್ ನಿರ್ದೇಶಕರಾದ ಜೆರಾಲ್ಡ್ ಪಿಂಟೊ ಕಲ್ಯಾಣಪುರ, ಆಂಡ್ರು ಡಿಸೋಜ, ಜೋಸೆಫ್ ಎಂ. ಅನಿಲ್ ಪತ್ರಾವೊ, ಡೇವಿಡ್ ಡಿಸೋಜ, ಎಲ್‌ರೊ ಕಿರಣ್ ಕ್ರಾಸ್ಟೊ, ಜೆ.ಪಿ. ರೋಡ್ರಿಗಸ್, ರೋಶನ್ ಡಿಸೋಜ, ಹೆರಾಲ್ಡ್ ಜೋನ್ ಮೊಂತೆರೊ, ಐರಿನ್ ರೆಬೆಲ್ಲೊ, ಫ್ರೀಡಾ ಫ್ಲಾವಿಯಾ ಡಿಸೋಜ, ಮೆಲ್ವಿನ್ ಅಕ್ವಿನಸ್ ವಾಸ್ ಮಿಲಾಗ್ರಿಸ್, ವಿನ್ಸೆಂಟ್ ಅನಿಲ್ ಲಸ್ರಾದೊ ಇದ್ದರು.

‘ಶೂನ್ಯ ಬಡ್ಡಿ ಶೈಕ್ಷಣಿಕ ಸಾಲ’

ಶಿಕ್ಷಣದಿಂದ ಸಾಮಾಜಿಕ ಸಶಕ್ತೀಕರಣದ ಉದ್ದೇಶದಿಂದ ಶೈಕ್ಷಣಿಕ ಸಾಲಕ್ಕೆ ಬ್ಯಾಂಕ್ ವಿಶೇಷ ಒತ್ತು ನೀಡಿದೆ. ಸೀಮಿತ ಅವಧಿಗೆ ₹10 ಲಕ್ಷದವರೆಗೆ ಶೈಕ್ಷಣಿಕ ಸಾಲವನ್ನು ಶೂನ್ಯ ಪ್ರೊಸೆಸಿಂಗ್ ಫೀಸ್‌ನಲ್ಲಿ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಾಲ ಮಂಜೂರು ಪ್ರಕ್ರಿಯೆಯೂ ವೇಗದಲ್ಲಿ ನಡೆಯುತ್ತದೆ ಎಂದು ಅನಿಲ್ ಲೋಬೊ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT