ಸೋಮವಾರ, ನವೆಂಬರ್ 18, 2019
23 °C
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್‌

ಪೊಳಲಿ: ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ

Published:
Updated:
Prajavani

ಬಜ್ಪೆ: ಪೊಳಲಿಯ ಮಾಧವ ಭಟ್ ಹಾಗೂ ಗಾಣದಪಡ್ಪು ನಾಗೇಶ ಎಂಬುವರ ಗದ್ದೆಯಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ವತಿಯಿಂದ ಯಾಂತ್ರೀಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆ ನಡೆಸಲಾಯಿತು.

ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ದೀಪ ಬೆಳಗಿಸಿ ಪ್ರಾತ್ಯಕ್ಷಿಕೆ ಉದ್ಘಾಟಿಸಿದರು.  ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ ಯಾಂತ್ರೀಕೃತ ಭತ್ತದ ನಾಟಿ ಮಾಹಿತಿ ನೀಡಿ, ‘ ಆಧುನಿಕತೆಯ ಭರಾಟೆ ಹಾಗೂ ಕೂಲಿ ಕೆಲಸದವರ ಕೊರತೆಯಿಂದ ಭತ್ತದ ಗದ್ದೆಗಳು ಹಡೀಲು ಬಿದ್ದಿವೆ. ಭತ್ತದ ಬೇಸಾಯ ದುಬಾರಿ ಎನ್ನುವವರೂ ಇದ್ದಾರೆ. ಆದರೆ, ಯಾಂತ್ರೀಕೃತ ಭತ್ತದ ನಾಟಿಯಿಂದ ಕಡಿಮೆ ಅವಧಿಯಲ್ಲಿ ಬೇಸಾಯ ಮುಗಿಸಿ, ಭವಿಷ್ಯದಲ್ಲಿ ಹೆಚ್ಚು ಆದಾಯ ಗಳಿಸಬಹುದು. ಕೃಷಿ ಉಳಿಸಿ, ಬೆಳೆಸಬೇಕಾದರೆ ಕೃಷಿಕರು ಯಾಂತ್ರೀಕೃತ ವಿಧಾನ ಅಳವಡಿಸಬೇಕು’ ಎಂದರು.

‘ಕಡಿಮೆ ನೇಜಿಯಿಂದ ಭತ್ತದ ನಾಟಿಯಲ್ಲಿ ಅಂತರ ಕಾಪಾಡಿಕೊಂಡಲ್ಲಿ ಸೂರ್ಯನ ಬೆಳಕು ನೇರವಾಗಿ ನೇಜಿ ಮೇಲೆ ಬಿದ್ದು, ಸಸಿ ಬೆಳೆದು ಉತ್ತಮ ಇಳುವರಿ ಸಿಗುತ್ತದೆ. ಯಾರು ಯಾವುದೇ ಪದವಿ ಗಳಿಸಿದರೂ, ಊಟಕ್ಕೆ ಅನ್ನ ಬೇಕೇಬೇಕು. ಶಿಕ್ಷಣದಲ್ಲಿ ಕೃಷಿ ಮಾಹಿತಿ ಪಠ್ಯ ಗೊತ್ತುಪಡಿಸಿರುವ ಸರ್ಕಾರ, ಈ ಮೂಲಕ ಶಾಲಾ ಮಕ್ಕಳಲ್ಲಿ ಕೃಷಿ ಆಸಕ್ತಿ ಹುಟ್ಟಿಸುವ ಪ್ರಯತ್ನ ಒಳ್ಳೆಯದು’ ಎಂದು ಶೆಟ್ಟಿ ಹೇಳಿದರು.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದ ಪ್ರಧಾನ ಅರ್ಚಕ ಮಾಧವ ಭಟ್, ಪದ್ಮನಾಭ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುಂಬೆ ಕೇಂದ್ರ ಒಕ್ಕೂಟ ವಲಯದ ಅಧ್ಯಕ್ಷ ಮಾಧವ ವಳವೂರು, ಸಿಎಚ್‍ಎಸ್‍ಇ ಪ್ರಾದೇಶಿಕ ಸಮನ್ವಯ ಅಧಿಕಾರಿ ಅಶೋಕ್, ತಾಲ್ಲೂಕು ಪಂಚಾಯಿತಿ ಸದಸ್ಯ ಯಶವಂತ ಕೋಟ್ಯಾನ್, ಉದ್ಯಮಿ ಜಯರಾಮ ಕೃಷ್ಣ ಪೊಳಲಿ ಉಪಸ್ಥಿತರಿದ್ದರು.

 ಕೃಷಿಕರಾದ ಚಾರ್ಲಿ ಡಿಸೋಜ, ನಾಗೇಶ ಗಾಣದಪಡ್ಪು, ಇಬ್ರಾಹಿಂ ಅಡ್ಡೂರು ಅವರನ್ನು ಸನ್ಮಾನಿಸಲಾಯಿತು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ತುಂಬೆ ವಲಯದ ಮೇಲ್ವಿಚಾರಕಿ ಅಮಿತಾ ಕಾರ್ಯಕ್ರಮ ನಿರೂಪಿಸಿದರು. ಸಂದೇಶ್ ಸ್ವಾಗತ, ಜನಾರ್ದನ ಪುಂಚಮೆ ವಂದನಾರ್ಪಣೆ ಮಾಡಿದರು.

ಪ್ರತಿಕ್ರಿಯಿಸಿ (+)