ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ವಿಮಾನದ ಮೂಲಕ ಚೀನಾಕ್ಕೆ ಜೀವಂತ ಏಡಿ ರವಾನೆ

5 ತಿಂಗಳುಗಳಲ್ಲಿ 1,676 ಟನ್ ಸರಕು ನಿರ್ವಹಿಸಿದ ಐಸಿಟಿ
Published 3 ಅಕ್ಟೋಬರ್ 2023, 14:10 IST
Last Updated 3 ಅಕ್ಟೋಬರ್ 2023, 14:10 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ಸಮಗ್ರ ಸರಕು ಟರ್ಮಿನಲ್ (ಐಸಿಟಿ) ಕಾರ್ಯಾರಂಭ ಮಾಡಿದ ಬಳಿಕ ಸ್ಥಳೀಯ ಸಾಗರೋತ್ಪನ್ನ ರಫ್ತುದಾರರು ಈ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಸಾಗರೋತ್ಪನ್ನಗಳ ವ್ಯಾಪಾರೋದ್ಯಮಿಯೊಬ್ಬರು ಜೀವಂತ ಏಡಿಗಳನ್ನು ವಿಮಾನದ ಮೂಲಕ ರವಾನೆ ಮಾಡುತ್ತಿದ್ದಾರೆ.

‘ಸಾಗರೋತ್ತರ ಗ್ರಾಹಕರಿಗೆ ಇಲ್ಲಿನ ಸಾಗರೋತ್ಪನ್ನಗಳನ್ನು ಸಾಗಿಸಲು ಐಸಿಟಿ ವರದಾನವಾಗಿದೆ. ವಿಶೇಷವಾಗಿ ಏಡಿಗಳನ್ನು ಕೋಲ್ಕತ್ತಕ್ಕೆ ಸಾಗಿಸಿ, ಅಲ್ಲಿಂದ ಚೀನಾಕ್ಕೆ ರಫ್ತು ಮಾಡಲು ನಮಗೆ ಈ ಸರಕು ಟರ್ಮಿನಲ್ ಪ್ರಯೋಜನಕಾರಿ’ ಎನ್ನುತ್ತಾರೆ ಸಾಗರೋತ್ಪನ್ನಗಳ ವ್ಯಾಪಾರೋದ್ಯಮಿ ಫಯಾಜ್ ಅಹ್ಮದ್.

‘ಜೀವಂತ ಏಡಿಗಳಿಗೆ ಚೀನಾ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಇವುಗಳನ್ನು ತ್ವರಿತವಾಗಿ ಮತ್ತು ಸಕಾಲದಲ್ಲಿ ತಲುಪುವಂತೆ ರವಾನಿಸಲು ಐಸಿಟಿ ನೆರವಾಗುತ್ತಿದೆ' ಎಂದು ಅವರು ತಿಳಿಸಿದರು.

‘ಸಮುದ್ರದ ನೀರಿನಿಂದ ಹೊರತೆಗೆದ ಬಳಿಕ ಏಡಿಗಳು ನಾಲ್ಕೈದು ದಿನಗಳವರೆಗೆ ಬದುಕಿರುತ್ತವೆ. ಎರಡು ದಿನಗಳಿಗೊಮ್ಮೆ 150 ಕೆ.ಜಿ.ಯಿಂದ 300 ಕೆ.ಜಿ.ಗಳಷ್ಟು ಜೀವಂತ ಏಡಿಗಳನ್ನು ಕೊಲ್ಕತ್ತಕ್ಕೆ ರವಾನಿಸುತ್ತೇವೆ. ನಾವು ಮೀನುಗಾರರಿಗೆ ಪ್ರತಿ ಕೆ.ಜಿ. ಏಡಿಗೆ ಸರಾಸರಿ ₹ 300 ನೀಡಬೇಕಾಗುತ್ತದೆ. ವಿಮಾನ ಶುಲ್ಕ ಹಾಗೂ ಅವುಗಳ ನಿರ್ವಹಣೆಗೆ ಪ್ರತಿ ಕೆ.ಜಿ.ಗೆ ₹ 100ರಿಂದ ₹ 150 ವೆಚ್ಚವಾಗುತ್ತದೆ’ ಎಂದು ಏಡಿಗಳ ವ್ಯಾಪಾರದಲ್ಲಿ ತೊಡಗಿರುವ ಅಬ್ದುಲ್‌ ಸಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳುಹಿಸುವ ಏಡಿಗಳಲ್ಲಿ ಕೆಲವು ಕೋಲ್ಕತ್ತ ತಲುಪುವಷ್ಟರಲ್ಲಿ ಸಾಯುವುದೂ ಉಂಟು. ಸತ್ತ ಏಡಿಗಳನ್ನು ಬಿಸಾಡಬೇಕಾಗುತ್ತದೆ. ವಿಮಾನದ ಮೂಲಕ ಏಡಿಗಳನ್ನು ಕಳುಹಿಸುವ ಸೇವೆ ಆರಂಭವಾದ ಬಳಿಕ ಇಲ್ಲಿಂದ ನಾಲ್ಕೈದು ಗಂಟೆಗಳಲ್ಲಿ ಕೋಲ್ಕತ್ತಕ್ಕೆ ಏಡಿಗಳನ್ನು ಕಳುಹಿಸಲು ಸಾಧ್ಯವಾಗುತ್ತಿದೆ. ಅವು ಸಾಯುವ ಪ್ರಮಾಣವೂ ಕಡಿಮೆ’ ಎಂದು ಅವರು ವಿವರಿಸಿದರು.

‘ಚೆನ್ನೈಗೆ ರೈಲಿನಲ್ಲಿ ಏಡಿಗಳನ್ನು ರವಾನಿಸಿ, ಅಲ್ಲಿಂದ ಸಿಂಗಪುರಕ್ಕೆ ರಫ್ತು ಮಾಡಲಾಗುತ್ತದೆ. ರೈಲಿನಲ್ಲಿ ಕಳುಹಿಸಲು ಹೆಚ್ಚು ಸಮಯ ತಗಲುತ್ತದೆ’ ಎಂದರು.

‘ವಿಮಾನ ನಿಲ್ದಾಣದ ಐಸಿಟಿ  ಈ ವರ್ಷದ ಮೇ 1 ರಂದು ಉದ್ಘಾಟನೆಯಾಗಿತ್ತು. ಅಂದಿನಿಂದ ಸೆ. 30ರವರೆಗೆ ಈ ಟರ್ಮಿನಲ್ 1,676.21 ಟನ್ ದೇಸಿ ಸರಕುಗಳನ್ನು ನಿರ್ವಹಿಸಿದೆ. ಒಟ್ಟು ಸರಕು ನಿರ್ವಹಣೆಯಲ್ಲಿ ಇಲ್ಲಿಂದ ಬೇರೆಡೆಗೆ ರವಾನೆ ಮಾಡಿರುವ ಸರಕುಗಳ ಪ್ರಮಾಣ 1,560.23 ಟನ್‌ಗಳಷ್ಟಿದೆ’ ಎಂದು ಎಂಐಎ ವಕ್ತಾರರು ತಿಳಿಸಿದರು. 

‘ಸರಕು ನಿರ್ವಹಣೆಯಲ್ಲಿ ಅಂಚೆ ಸೇವೆ ಮೂಲಕ ರವಾನೆಯಾಗುವ ಸರಕುಗಳ ಪ್ರಮಾಣವೇ ಜಾಸ್ತಿ. ಸಾಮಾನ್ಯ ಸರಕುಗಳ ಜೊತೆ, ಬೆಲೆಬಾಳುವ ವಸ್ತುಗಳು, ಸಾಗರೋತ್ಪನ್ನಗಳು, ಆಲಂಕಾರಿಕ ಮೀನುಗಳನ್ನೂ ಐಸಿಟಿ ಮೂಲಕ ರವಾನಿಸಲಾಗುತ್ತಿದೆ. ಅಂಚೆ ಸರಕು ಸೇವೆ, ಬೆಲೆಬಾಳುವ ವಸ್ತುಗಳು, ಯಂತ್ರೋಪಕರಣಗಳ ಬಿಡಿಭಾಗಗಳು, ವೈದ್ಯಕೀಯ ಸರಕುಗಳು, ವೈದ್ಯಕೀಯ ಉಪಕರಣಗಳು ಬೇರೆ ಬೇರೆ ಪ್ರದೇಶಗಳಿಂದ ಇಲ್ಲಿಗೆ ರವಾನೆಯಾಗುತ್ತಿವೆ. ಹಣ್ಣು, ತರಕಾರಿಗಳಂತಹ ಋತುಮಾನ ಆಧರಿತ ಪಾರ್ಸೆಲ್‌ಗಳನ್ನೂ ಐಸಿಟಿ ನಿರ್ವಹಿಸುತ್ತಿದೆ. ವಿಮಾನ ಪ್ರಯಾಣಿಕರು ಕೆಲವೊಮ್ಮೆ ತಮ್ಮಲ್ಲಿನ ಹೆಚ್ಚುವರಿ ಬ್ಯಾಗೇಜ್‌ಗಳನ್ನೂ ಸಾಗಿಸುವುದಕ್ಕೂ ಐಸಿಟಿಯನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಅವರು ವಿವರಿಸಿದರು. 

‘ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಜೊತೆ  ನಡೆಸಿದ್ದ ಸಂವಾದದಲ್ಲಿ ಸರಕು ಸಾಗಣೆಗೆ ನೆರವಾಗುವುದಾಗಿ ಎಂಐಎ ವಾಗ್ದಾನ ಮಾಡಿತ್ತು. ಅದಕ್ಕೆ ಬದ್ಧವಾಗಿ ಸಂಸ್ಥೆಯು ನಡೆದುಕೊಂಡಿದೆ. ಕೆಸಿಸಿಐ ಬೇಡಿಕೆಯಂತೆ ಅಂತರರಾಷ್ಟ್ರೀಯ ಸರಕು ಕಾರ್ಯಾಚರಣೆಯನ್ನು ಪ್ರಾರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ರಫ್ತು ನಿರ್ವಹಣೆಗಾಗಿ ವಿಮಾನ ನಿಲ್ದಾಣವು ಕಸ್ಟಮ್ಸ್ ಇಲಾಖೆಯ ಅನುಮತಿ  ಪಡೆದ ನಂತರ ಇದು ಕಾರ್ಯರೂಪಕ್ಕೆ ಬರಲಿದೆ’  ಎಂದು ಅವರು ತಿಳಿಸಿದರು. 

ಅಂಕಿ ಅಂಶ

1676.21 ಟನ್ ಎಂಐಎಯ ಸಮಗ್ರ ಸರಕು ಟರ್ಮಿನಲ್ ಇದುವರೆಗೆ ನಿರ್ವಹಿಸಿರುವ ಸರಕು

1560.23 ಟನ್‌ ಎಂಐಎಯ ಸಮಗ್ರ ಸರಕು ಟರ್ಮಿನಲ್ಮೂಲಕ ಬೇರೆಡೆಗೆ ಕಳುಹಿಸಿರುವ ಸರಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT