ಕಾಂಗ್ರೆಸ್‌ನದ್ದು ನೈಜ ಹಿಂದುತ್ವ: ಖಾದರ್‌

ಬುಧವಾರ, ಏಪ್ರಿಲ್ 24, 2019
25 °C
ಜನರ ಭಾವನೆಯೊಂದಿಗೆ ಬಿಜೆಪಿ ಚೆಲ್ಲಾಟ: ಆರೋಪ

ಕಾಂಗ್ರೆಸ್‌ನದ್ದು ನೈಜ ಹಿಂದುತ್ವ: ಖಾದರ್‌

Published:
Updated:
Prajavani

ಮಂಗಳೂರು: ‘ಕಾಂಗ್ರೆಸ್ ಪಕ್ಷ ನೈಜ ಹಿಂದುತ್ವ ಸಿದ್ಧಾಂತವನ್ನು ಪಾಲಿಸುತ್ತಿದ್ದು, ಸ್ವಾಮಿ ವಿವೇಕಾನಂದ, ಪರಮಹಂಸ ಮುಂತಾದ ಮಹಾನ್ ನಾಯಕರು ಬೋಧಿಸಿ, ಪಾಲಿಸಿದಂತಹ ಸಿದ್ಧಾಂತಗಳನ್ನು ನಂಬುತ್ತಿದೆ. ಸ್ವಾಮಿ ವಿವೇಕಾನಂದರ ಹಿಂದುತ್ವ ಜಗತ್ತೇ ಒಪ್ಪಿಕೊಳ್ಳುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಯಾಚನೆ ಮೊದಲು ವೈಯಕ್ತಿಕವಾಗಿ ದೇವರನಾಮವನ್ನು ಜಪಿಸಿದರೆ, ಯಾರೂ ಅದನ್ನು ತಡೆಯುವಂತಿಲ್ಲ. ಅದು ಅವರ ವೈಯಕ್ತಿಕ ವಿಚಾರ ಎಂದರು.

ಮಿಥುನ್ ರೈ ಅವರು ಹನುಮಾನ್ ಚಾಲೀಸ್ ಹೇಳಿದರೆ ಅದು ತಪ್ಪಲ್ಲ. ಅವರು ನೈಜ ಹಿಂದೂ ಕುಟುಂಬದಿಂದ ಬಂದವರು. ಅವರ ಧರ್ಮವನ್ನು ಪಾಲಿಸುವ ಎಲ್ಲ ಸ್ವಾತಂತ್ರ್ಯ ಅವರಿಗಿದೆ. ಹನುಮಾನ್ ಚಾಲೀಸ್ ಹೇಳಿದ ಪುಣ್ಯದಲ್ಲಿ ಹಿಂದೂಗಳಿಗೆ ಪಾಲು ಸಿಗಬಹುದು. ಇನ್ನೂ ಮಿಥುನ್ ರೈ ಪ್ರಚಾರದ ಸಂದರ್ಭ ಮುಸ್ಲಿಂ ಪ್ರಾರ್ಥನೆ ಸಲ್ಲಿಸಿದರೆ ಮುಸ್ಲಿಮರಿಗೆ ಅವರ ಪುಣ್ಯದಲ್ಲಿ ಪಾಲು ಸಿಗಬಹುದು. ಅದು ಅವರ ವೈಯಕ್ತಿಕ ವಿಚಾರವಾಗಿದೆ ಎಂದು ತಿಳಿಸಿದರು.

ಎಲ್ಲ ಜಾತಿ ಧರ್ಮದವರನ್ನು ಒಗ್ಗೂಡಿಸಿ, ಎಲ್ಲ ಸಮುದಾಯದವರನ್ನು ಸಹೋದರತೆ ಭಾವನೆಯಿಂದ ಕಾಣುವುದೇ ನಿಜವಾದ ಹಿಂದುತ್ವ. ಇದೇ ಮಾತನ್ನು ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿ ಹೇಳಿದ್ದಾರೆ ಎಂದರು.

ಬಿಜೆಪಿಯ ನಕಲಿ ಹಿಂದುತ್ವ ಅವರಿಗೇ ಉಲ್ಟಾ ಹೊಡೆಯುತ್ತಿದೆ. ಮೈತ್ರಿ ಅಭ್ಯರ್ಥಿ ಮಿಥುನ್ ರೈ ಅವರಿಗೆ ಜನಬೆಂಬಲ ಹೆಚ್ಚಾಗುತ್ತಿದ್ದು, ಅವರು ಬಹುಮತದಿಂದ ಗೆಲ್ಲಲಿದ್ದಾರೆ. ಸತ್ಯ, ನ್ಯಾಯದ ಪರ ಹೋರಾಟದ ಮಾಡುವ ಭರವಸೆಯನ್ನು ಜಿಲ್ಲೆಯ ಜನರಿಗೆ ಮಿಥನ್ ರೈ ನೀಡಿದ್ದಾರೆ ಎಂದರು.

ಪ್ರತಿ ಚುನಾವಣೆಯಲ್ಲೂ ಬಿಜೆಪಿ ಜನರ ಭಾವನೆಯೊಂದಿಗೆ ಚೆಲ್ಲಾಟ ಆಡುತ್ತಿದೆ. ಕಳೆದ ಬಾರಿಯ ಪ್ರಣಾಳಿಕೆಯನ್ನು ಈ ಬಾರಿಯೂ ಬಿಜೆಪಿ ಕಟ್ ಆಂಡ್‌ ಪೇಸ್ಟ್ ಮಾಡಿದ್ದು, ನಾಲ್ಕು ಗೋಡೆ ಮಧ್ಯೆ ಕುಳಿತು ರಚನೆ ಮಾಡಿದೆ. ಬಿಜೆಪಿಯ ಪ್ರಣಾಳಿಕೆಯನ್ನು ನಂಬುವಂತಿಲ್ಲ ಎಂದು ಹೇಳಿದರು.

ಭಾವನಾತ್ಮಕ ವಿಚಾರದಿಂದ ಜಿಲ್ಲೆಯ ಅಭಿವೃದ್ಧಿ ಆಗುವುದಿಲ್ಲ. ಹಾಗಾಗಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಅವರಿಗೆ ಮತ ಚಲಾಯಿಸಬಾರದು. ಆತ್ಮಾವಲೋಕನ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಮಿಥುನ್‌ ರೈ ಅವರಿಗೆ ಮತ ನೀಡಬೇಕು. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವ ಸಂಸದರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್‌, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌, ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಕಳ್ಳಿಗೆ ತಾರಾನಾಥ ಶೆಟ್ಟಿ, ಸಂತೋಷ್‌ ಶೆಟ್ಟಿ, ಬಿ.ಎ. ಮುಹಮ್ಮದ್‌ ಹನೀಫ್‌, ಸದಾಶಿವ ಉಳ್ಳಾಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !