ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷಗಳಲ್ಲಿ ₹50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ

ಕುಕ್ಕೆ ದೇಗುಲದಿಂದ ‘ಸಿ’ ದರ್ಜೆ ದೇವಾಲಯಗಳ ದತ್ತು: ಸಚಿವ ಕೋಟ
Last Updated 24 ಜನವರಿ 2020, 16:25 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ‘ಎ’ ವರ್ಗದ ದೇವಾಲಯಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ‘ಸಿ’ ವರ್ಗದ ಎರಡು ದೇವಾಲಯಗಳನ್ನು ದತ್ತು ತೆಗೆದುಕೊಳ್ಳಲಿದೆ ಎಂದು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಇತ್ತೀಚೆಗೆ ನಡೆದ ಧಾರ್ಮಿಕ ದತ್ತಿ ವಿಭಾಗದ ಸಭೆಯಲ್ಲಿ ಎರಡು ದೇವಾಲಯಗಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಪುತ್ತೂರು ತಾಲೂಕಿನ ಶಿರಾಡಿಯ ಅಮ್ಮಾಜೆ ದುರ್ಗಪರಮೇಶ್ವರಿ ದೇವಸ್ಥಾನ ಮತ್ತು ಬೆಳ್ತಂಗಡಿ ತಾಲ್ಲೂಕಿನ ಸೋಮನಾಥೇಶ್ವರ ದೇವಾಲಯಗಳನ್ನು ಐದು ವರ್ಷಗಳ ಅವಧಿಗೆ ದತ್ತು ತೆಗೆದುಕೊಳ್ಳಲಾಗುತ್ತಿದ್ದು, ಪ್ರತಿ ದೇವಾಲಯಕ್ಕೆ ಗರಿಷ್ಠ ₹50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ‘ಎ’ ವರ್ಗದ ದೇವಾಲಯಗಳ ನಿರ್ವಹಣಾ ಸಮಿತಿಗಳ ಅಧಿಕಾರಾವಧಿಯು ಮಾರ್ಚ್‌ಗೆ ಕೊನೆಗೊಳ್ಳಲಿದ್ದು, ನಿರ್ವಹಣಾ ಸಮಿತಿ ರಚನೆಗೆ ಭಕ್ತರು ಮತ್ತು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದರು.

ಪುಷ್ಕರಣಿ ಅಭಿವೃದ್ಧಿ: ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಕಲ್ಯಾಣಿ ಮತ್ತು ದೇವಾಲಯಗಳ ಸರೋವರಗಳನ್ನು ‘ಜಲಾಭಿಷೇಕ’ ಕಾರ್ಯಕ್ರಮದ ಮೂಲಕ ಪುನಶ್ಚೇತನಗೊಳಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ದೇವಾಲಯದ ಆದಾಯ, ಖಾಸಗಿ ಸಂಸ್ಥೆಗಳ ಸಿಎಸ್ಆರ್ ನಿಧಿಗಳು ಮತ್ತು ದಾನಿಗಳಿಂದ ಹಣವನ್ನು ಸಂಗ್ರಹಿಸಲಾಗುತ್ತದೆ. ಉದ್ಯೋಗ ಖಾತರಿ ಯೋಜನೆ ಮತ್ತು ಶ್ರಮದಾನ್ ಯೋಜನೆಗಳ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಇ-ಆಫೀಸ್, ವೆಬ್ ಆಧಾರಿತ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಒಳಗೊಂಡಿರುವ ಇ-ಆಡಳಿತವನ್ನು ಬಳಸಿಕೊಂಡು ದೇವಾಲಯಗಳಲ್ಲಿನ ಹಲವಾರು ಸೇವೆಗಳನ್ನು ನಿರ್ವಹಿಸಲಾಗುವುದು ಎಂದು ಹೇಳಿದರು.

‘ಪುರೋಹಿತರಿಗೆ ತರಗತಿ’

‘ಸಿ’ ವರ್ಗದ ದೇವಾಲಯಗಳಲ್ಲಿ ಕೆಲಸ ಮಾಡುವ ಪುರೋಹಿತರಿಗೆ ಸಂಸ್ಕೃತ, ವೇದ ಮತ್ತು ಅಗಮ ಶಾಸ್ತ್ರಗಳಲ್ಲಿ ತರಬೇತಿ ನೀಡಲು ಐದು ವರ್ಷಗಳ ಅವಧಿಗೆ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಒಂದು ವರ್ಷದ ವಿಶೇಷ ಕೋರ್ಸ್ ಪ್ರಾರಂಭಿಸುವ ಯೋಚನೆ ಇದೆ. ಹೆಚ್ಚಿನ ಆದಾಯ ಗಳಿಸುವ ದೇವಾಲಯಗಳ ನೆರವಿನೊಂದಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಈ ತರಗತಿಗಳನ್ನು ಪ್ರಾರಂಭಿಸಲಾಗುವುದು. ಈ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ನೇತೃತ್ವದ ಸಮಿತಿ ರಚಿಸಲಾಗಿದ್ದು, ಶೀಘ್ರ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT