ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲಮೊಗ್ರು-ಕಲ್ಮಕಾರು ಸಂಪರ್ಕ ರಸ್ತೆಯ ಗಡಿಕಲ್ಲು ಎಂಬಲ್ಲಿ ಮಳೆಯಿಂದಾಗಿ ರಸ್ತೆ ಬದಿ ಕುಸಿದಿದ್ದು, ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಡಿಕಲ್ಲು ಎಂಬಲ್ಲಿ ರಸ್ತೆ ಪಕ್ಕ, ಹೊಳೆಯ ಭಾಗದಲ್ಲಿ ಮಣ್ಣು ಕುಸಿದು ರಸ್ತೆ ಅಪಾಯದಲ್ಲಿದ್ದು, ಭಾರಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು. ಕುಸಿದ ಸ್ಥಳದ ಕೆಳಭಾಗದಿಂದ ತಡೆಗೋಡೆ ನಿರ್ಮಾಣಕ್ಕೆ ಎಂಜಿನಿಯರ್‌ಗಳು ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಮಳೆ ಕಡಿಮೆಯಾದ ಕೂಡಲೇ ತುರ್ತು ಪರಿಹಾರ ಕ್ರಮವಾಗಿ ತಾತ್ಕಲಿಕವಾಗಿ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಬಳಿಕ ಸರ್ಕಾರದ ಅನುದಾನ ತರಿಸಿ ತಡೆಗೋಡೆ ಕಾಮಗಾರಿ ನಡೆಸಲಾಗುವುದು ಎಂದು ಶಾಸಕಿ ತಿಳಿಸಿದರು.
ಕೊಲ್ಲಮೊಗ್ರು ಪೇಟೆಯಲ್ಲಿರುವ ಮುಳುಗು ಸೇತುವೆಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆಯೂ ಸ್ಥಳೀಯರು ಗಮನ ಸೆಳೆದರು. ಸರ್ವಋತು ಸೇತುವೆ ನಿರ್ಮಾಣದ ಭರವಸೆ ನೀಡಿದರು. ಪನ್ನೆ ಎಂಬಲ್ಲಿ ಕಾಲು ಸಂಕದ ಬೇಡಿಕೆ ಇರುವ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲು ಆಲಿಸಿದರು.
ಕೊಲ್ಲಮೊಗ್ರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಶ್ವತ್ ಯಳದಾಳು, ಸದಸ್ಯ ಮಾಧವ ಚಾಂತಾಳ, ಪ್ರಮುಖರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಎಸ್.ಎನ್.ಮನ್ಮಥ, ಪ್ರಸಾದ್ ಭಾಗವಹಿಸಿದ್ದರು.