ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈನಂದಿನ ದರಪಟ್ಟಿ ಪ್ರಕಟಿಸಲು ಸೂಚನೆ

ಕರಂಗಲ್ಪಾಡಿ ಹಾಪ್‌ಕಾಮ್ಸ್‌ಗೆ ಕಾಮತ್‌, ಮೇಯರ್ ಭೇಟಿ
Last Updated 18 ಮೇ 2021, 2:43 IST
ಅಕ್ಷರ ಗಾತ್ರ

ಮಂಗಳೂರು: ಹಾಪ್‌ಕಾಮ್ಸ್ ಮಳಿಗೆಯಲ್ಲಿ ದರಪಟ್ಟಿಯಲ್ಲಿ ಗೊಂದಲ ಉಂಟಾಗಿರುವ ಕುರಿತು ಸಾರ್ವಜನಿಕ ದೂರಿನ ಮೇರೆಗೆ ಶಾಸಕ ವೇದವ್ಯಾಸ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಕರಂಗಲ್ಪಾಡಿ ಹಾಪ್‌ಕಾಮ್ಸ್ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋವಿಡ್ 2 ನೇ ಅಲೆಯ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಲಾಕ್‌ಡೌನ್ ಜಾರಿಗೊಳಿಸಿದೆ. ಈ ವಿಚಾರದಲ್ಲಿ ಸರ್ಕಾರವು ಮಾರ್ಗಸೂಚಿಗಳನ್ನು ಸೂಚಿಸಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ನೀಡಿದೆ. ಇದನ್ನು ಹೊರತುಪಡಿಸಿ ಸರ್ಕಾರದ ಅಧೀನದಲ್ಲಿರುವ ಹಾಪ್‌ಕಾಮ್ಸ್ ಸಂಸ್ಥೆಯ ವತಿಯಿಂದ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ತರಕಾರಿ, ಹಣ್ಣುಹಂಪಲುಗಳನ್ನು ಸಾರ್ವಜನಿಕರಿಗೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ನಗರದಲ್ಲಿರುವ ಎಲ್ಲ ಹಾಪ್‌ಕಾಮ್ಸ್ ಮಳಿಗೆಗಳಲ್ಲೂ ದೈನಂದಿನ ದರಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಪ್ರತಿಯೊಬ್ಬ ಗ್ರಾಹಕರಿಗೂ ಕಡ್ಡಾಯವಾಗಿ ಬಿಲ್ ನೀಡಬೇಕು. ಉರ್ವಸ್ಟೋರ್, ಉರ್ವ ಮಾರ್ಕೆಟ್‌, ಕದ್ರಿ ಶಿವಭಾಗ್, ಕರಂಗಲ್ಪಾಡಿ, ಮಣ್ಣಗುಡ್ಡೆ, ಪದವಿನಂಗಡಿ, ಸ್ಟೇಟ್ ಬ್ಯಾಂಕ್, ಬೋಂದೆಲ್, ಮಾರ್ನೆಮಿಕಟ್ಟೆಯಲ್ಲಿ ಇರುವ ಹಾಪ್‌ಕಾಮ್ಸ್ ಸಂಸ್ಥೆಗಳಿಗೂ ಇದು ಅನ್ವಯಿಸುವಂತೆ ಸ್ಥಳದಲ್ಲಿದ್ದ ಹಾಪ್ ಕಾಮ್ಸ್ ಆಡಳಿತ ನಿರ್ದೇಶಕರಿಗೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಸೂಚನೆ ನೀಡಿದರು. ಪಾಲಿಕೆ ಸದಸ್ಯ ಕದ್ರಿ ಮನೋಹರ್ ಶೆಟ್ಟಿ ಇದ್ದರು.

ಕೋವಿಡ್ ಕಿಟ್ ವಿತರಣೆ: ಪಾಲಿಕೆ ವ್ಯಾಪ್ತಿಯಲ್ಲಿ ರೋಗ ಲಕ್ಷಣಗಳಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಆಗಿರುವ ಸೋಂಕಿತರಿಗೆ ವಿತರಿಸುವ ಕೋವಿಡ್ ಕಿಟ್ ಅನ್ನು ಶಾಸಕ ವೇದವ್ಯಾಸ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತೆಯರಿಗೆ ಹಸ್ತಾಂತರಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು.

ಶಾಸಕ ಕಾಮತ್ ಮಾತನಾಡಿ, ಅಲ್ಪ ಪ್ರಮಾಣದಲ್ಲಿ ರೋಗ ಲಕ್ಷಣಗಳಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಆಗಿರುವ ಸೋಂಕಿತರಿಗೆ ಪ್ಯಾರಾಸಿಟಮಲ್, ಆ್ಯಂಟಿ ಬೈಯೋಟಿಕ್, ವಿಟಮಿನ್ ಸಿ, ಝಿಂಕ್ ಮಾತ್ರೆಗಳನ್ನು ಒಳಗೊಂಡ ಕಿಟ್ ಅನ್ನು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತರು ತಲುಪಿಸಲಿದ್ದಾರೆ ಎಂದು ಹೇಳಿದರು.

ಕುಚ್ಚಲಕ್ಕಿ ವಿತರಣೆಗೆ ಕಾಮತ್ ಮನವಿ

ನಗರದ ನ್ಯಾಯಬೆಲೆ ಅಂಗಡಿಗಳಲ್ಲಿ ಕುಚ್ಚಲಕ್ಕಿ ನೀಡುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ಜನರು ಹೆಚ್ಚಾಗಿ ಕುಚ್ಚಲಕ್ಕಿಯನ್ನೇ ಬಳಸುವುದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಕುಚ್ಚಲಕ್ಕಿ ನೀಡುವಂತೆ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸಚಿವರು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಕುಚ್ಚಲಕ್ಕಿ ವಿತರಿಸುವುದರಿಂದ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT