ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಿಗೆ ಆಹಾರ ಸಾಮಗ್ರಿ ತಲುಪಿಸುವ ಯೋಜನೆ

ಆಹಾರ ಪೂರೈಕೆ ಸಂಸ್ಥೆ ಪ್ರತಿನಿಧಿಗಳ ಜತೆ ಶಾಸಕ ವೇದವ್ಯಾಸ ಕಾಮತ್ ಸಭೆ
Last Updated 27 ಮಾರ್ಚ್ 2020, 12:16 IST
ಅಕ್ಷರ ಗಾತ್ರ

ಮಂಗಳೂರು: ದೇಶದಾದ್ಯಂತ ಜಾರಿಗೊಂಡಿರುವ ಲಾಕ್‌ಡೌನ್ ಸಂದರ್ಭದಲ್ಲಿ ತುರ್ತು ಆಹಾರ ವಸ್ತುಗಳ ಪೂರೈಕೆಗೆ ಸಂಬಂಧಿಸಿದಂತೆ ಶಾಸಕ ಡಿ.ವೇದವ್ಯಾಸ ಕಾಮತ್ ಅವರು, ಆಹಾರ ಪೂರೈಕೆ ಸಂಸ್ಥೆಗಳಾದ ಝೋಮ್ಯಾಟೋ, ಊಬರ್ ಈಟ್ಸ್, ಮತ್ತಿತರ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು.

ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಕೊರೊನಾ ಭೀತಿಯು ಮುಂದಿನ ಕಠಿಣ ದಿನಗಳಿಗೆ ಸಾಕ್ಷಿಯಾಗಿದೆ. ಸದ್ಯ ದೇಶದಲ್ಲಿ ಆಹಾರ ಸಾಮಗ್ರಿಗಳ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗಿಲ್ಲ. ಮುಂಬರುವ ದಿನಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಆಗುವ ಸಂದರ್ಭದಲ್ಲಿ ಮನೆ ಮನೆಗೆ ಆಹಾರ ಸಾಮಗ್ರಿಗಳ ಪೂರೈಸುವ ನಿಟ್ಟಿನಲ್ಲಿ ಈ ಸಭೆ ನಡೆದಿದೆ ಎಂದು ಶಾಸಕ ಕಾಮತ್‌ ತಿಳಿಸಿದರು.

ದೇಶದಲ್ಲಿ ಜನರು ಕೊರೊನಾ ವೈರಸ್ ಕುರಿತು ಜಾಗೃತಿ ವಹಿಸಬೇಕಾದ ಅನಿವಾರ್ಯತೆಯಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರವಿಲ್ಲದೇ ಸಾಧ್ಯವೇ ಇಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಸಾರಿ ಹೇಳಿದ್ದಾರೆ. ಆದರೆ ಸಾರ್ವಜನಿಕರು ಈ ವಿಚಾರವನ್ನು ಲಘುವಾಗಿ ತೆಗೆದುಕೊಂಡರೆ, ಅದು ಯಾವ ಹಂತಕ್ಕೂ ತಲುಪಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ಸದ್ಯ ಆಹಾರ ಸಾಮಗ್ರಿಗಳ ಪೂರೈಕೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಕರ್ಫ್ಯೂ ಜಾರಿಯಾದರೆ ಆಹಾರ ಪೂರೈಕೆದಾರ ಸಂಸ್ಥೆಗಳ ಮೂಲಕ ಮನೆ ಮನೆಗೆ ಆಹಾರ ಸಾಮಗ್ರಿಗಳನ್ನು ತಲುಪಿಸುವ ಯೋಜನೆಯಿದೆ. ಸಹಾಯವಾಣಿ ಕೇಂದ್ರದ ಮೂಲಕ ಜನರೊಂದಿಗೆ ನಿರಂತರ ಸಂಪರ್ಕ ಕಲ್ಪಿಸಿ, ತುರ್ತಾಗಿ ಬೇಕಾದ ಸಾಮಗ್ರಿಗಳನ್ನು ತಲುಪಿಸುವ ಯೋಜನೆಯಾಗಿದೆ. ಮನೆ ಮನೆಗೆ ಸಿದ್ಧ ಆಹಾರ, ಆಹಾರ ಸಾಮಗ್ರಿ, ತರಕಾರಿ, ಔಷಧಿ ತಲುಪಿಸಲು ಹಲವಾರು ಸಂಸ್ಥೆಗಳು ಮುಂದೆ ಬಂದಿವೆ. ಆದರೆ ಇವೆಲ್ಲವನ್ನೂ ಹೊಂದಿಸಿ, ಜನರಿಗೆ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಹಾರ ಪೂರೈಕೆ ಸಂಸ್ಥೆಯ ಸಿಬ್ಬಂದಿ ಕೂಡ ತಮ್ಮ ಆರೋಗ್ಯದ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ, ಈ ಯೋಜನೆ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎನ್ನುವ ವಿಚಾರದ ಬಗ್ಗೆ ಚರ್ಚೆಗಳಾಗಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.

ಅಭಿನವ್ ಕಿಣಿ, ವೈಶಾಖ್ ಪೈ, ಸ್ಮಾರ್ಟ್ ಸಿಟಿಯ ಧರ್ಮರಾಜ್, ಫ್ರಿನ್ಸ್ ಪಿಂಟೋ, ಸ್ವಿಗ್ಗಿ ಸಂಸ್ಥೆಯ ಲಕ್ಷ್ಮಿನಾರಾಯಣ ಶೆಣೈ, ಕಲಂದರ್ ಶೇಕ್, ಚಿಟ್ಕಿ ಪ್ರೈವೇಟ್ ಲಿಮಿಟೆಡ್‌ನ ದೀಕ್ಷಿತ್ ಶೆಟ್ಟಿ, ಐಡಿಯಲ್ ಚಿಕನ್ ಸಂಸ್ಥೆಯ ಪ್ರಮುಖರು, ಶಾಡೋ ಫಾಕ್ಸ್ ಸಂಸ್ಥೆಯ ಸನತ್, ಹೆಲ್ತ್ ಇ ಸಂಸ್ಥೆಯ ಧೀರಜ್ ಭಂಡಾರಿ, ಝೂಪ್ ಡೆಲಿವರಿ ಸಂಸ್ಥೆಯ ಸುಮಿತ್, ರೋಡ್ ರನ್ನರ್ ಫುಡ್ ಡೆಲಿವರಿ ಸಂಸ್ಥೆಯ ಪ್ರಮುಖರು, ಮಾಂಸ ಪೂರೈಕೆದಾರ ಕಿಂಗ್ಸ್ ಮಟನ್ ಸಂಸ್ಥೆಯ ಪ್ರತಿನಿಧಿ, ಡೋಮಿನೋಸ್ ಫಿಜ್ಜಾ ಸಂಸ್ಥೆಯ ಪ್ರತಿನಿಧಿಗಳು, ಝೋಮ್ಯಾಟೋ ಸಂಸ್ಥೆಯ ವೈಭವ್, ನೀಲಗಿರೀಸ್ ಸಂಸ್ಥೆಯ ಅಷರ್ ಎ.ಆರ್., ಡೆಲಿವರಿ ಪ್ರೈವೇಟ್ ಲಿಮಿಟೆಡ್‌ನ ಅಶೋಕ್ ಎ., ಸ್ಮಾಲ್ ಬಜಾರ್ ಸಂಸ್ಥೆಯ ರಾಘವೇಂದ್ರ ಕುಂಬ್ಳೆ, ಆಹಾರ ಪೂರೈಕೆದಾರ ವಿನೋದ್ ಕಾಮತ್, ತೌಸಿಫ್ ಅಹಮ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT