ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ: ಜಾಗೃತಿಗೆ ಬೂತ್ ಸಮಿತಿ

ರೋಗ ನಿವಾರಣೆಗೂ ರಾಜಕೀಯ ಮಾದರಿ: ಶಾಸಕರಿಬ್ಬರ ಸಾಥ್
Last Updated 1 ಆಗಸ್ಟ್ 2019, 14:47 IST
ಅಕ್ಷರ ಗಾತ್ರ

ಮಂಗಳೂರು: ಚುನಾವಣೆಯ ಸಂದರ್ಭದಲ್ಲಿ ಬೂತ್‌ ಮಟ್ಟದಲ್ಲಿ ಸಮಿತಿ ರಚಿಸಿ, ಅಭ್ಯರ್ಥಿ ಅಥವಾ ಪಕ್ಷದ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸುವುದು ಸಾಮಾನ್ಯ. ಆದರೆ, ಶಾಸಕ ವೇದವ್ಯಾಸ ಕಾಮತ್ ಹಾಗೂ ಭರತ್‌ ಶೆಟ್ಟಿ ಡೆಂಗಿ ಹಾಗೂ ಮಲೇರಿಯಾ ನಿವಾರಣೆಗಾಗಿ ಮಾದರಿಯಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ರಾಜಕೀಯದ ಸಾಮಾಜಿಕ ಬದ್ಧತೆಗೆ ಹೆಜ್ಜೆ ಇಟ್ಟಿದ್ದಾರೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಬಾಧಿಸುತ್ತಿರುವ ಡೆಂಗಿಗೆ ಕಾರಣವಾದ ಲಾರ್ವಾ ನಾಶಕ್ಕೆ ಒತ್ತು ನೀಡುವ ಕುರಿತು ಶಾಸಕರಿಗೆ ಮಾಹಿತಿ ನೀಡಲಾಯಿತು. ಜಿಲ್ಲಾಧಿಕಾರಿಯ ಮುತುವರ್ಜಿಗೆ ಸಾಥ್ ನೀಡಿದ ಶಾಸಕರಿಬ್ಬರೂ, ‘ಎರಡು ದಿನಗಳೊಳಗೆ ಕಾರ್ಯಕರ್ತರನ್ನು ಸೇರಿಸಿಕೊಂಡು ಬೂತ್‌ ಸಮಿತಿ ರಚಿಸಿ, ತಜ್ಞರಿಂದ ಅವರಿಗೆ ತರಬೇತಿ ಕೊಡಿಸಿ ಭಾನುವಾರದಿಂದಲೇ ಜಾಗೃತಿ ಮೂಡಿಸಲಾಗುವುದು’ ಎಂದು ಭರವಸೆ ನೀಡಿದರು.


ಜಿಲ್ಲಾಧಿಕಾರಿ ಹಾಗೂ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು, ‘ಶಾಸಕರ ನೇತೃತ್ವದಲ್ಲಿ ಬೂತ್ ಹಾಗೂ ವಾರ್ಡ್ ಸಮಿತಿಗಳನ್ನು ರಚಿಸಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಿದರೆ ಪರಿಣಾಮಕಾರಿಯಾಗಿ ಲಾರ್ವಾ ನಾಶ ಮಾಡಲು ಸಾಧ್ಯ’ ಎಂಬುದನ್ನು ವಿವರಿಸಿದರು.

ಜಿಲ್ಲಾಡಳಿತ:‘ಡೆಂಗಿ ವಿರುದ್ಧ ಜಿಲ್ಲಾಡಳಿತ ಸಮರ ಸಾರಿದ್ದು, ಜು.18ರಿಂದ ನಗರದಲ್ಲಿ ಲಾರ್ವಾ ಉತ್ಪತ್ತಿ ತಾಣಗಳೆಂದು ಗುರುತಿಸಲಾಗಿರುವ ಪ್ರದೇಶಗಳನ್ನು 120 ಗ್ರಿಡ್‌ಗಳನ್ನಾಗಿ ವಿಂಗಡಿಸಿಕೊಂಡು, ಈ ಪೈಕಿ 58 ಗ್ರಿಡ್‌ಗಳಲ್ಲಿ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಹಾಗೂ ಲಾರ್ವಾ ನಾಶ ಕಾರ್ಯವನ್ನು ಪೂರ್ಣಗೊಳಿಸಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ರೆಡ್‌ಕ್ರಾಸ್ ಹಾಗೂ ಸರಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ 30,493 ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಲಾಗಿದೆ. 3,500 ಮನೆಗಳ ಆವರಣದಲ್ಲಿ ಲಾರ್ವಾ ಉತ್ಪತ್ತಿ ಪತ್ತೆಯಾಗಿದ್ದು, ನಾಶ ಪಡಿಸಲಾಗಿದೆ. ಲಾರ್ವಾ ನಾಶಕ್ಕಾಗಿ ಶಿಕ್ಷಣ ಸಂಸ್ಥೆಗಳಿಗೂ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ. ಖಾಸಗಿ ಕಚೇರಿಗಳಿಗೂ ಎಚ್ಚರಿಕೆ ನೀಡಲಾಗಿದೆ. ರೋಗಿಗಳ ಬಗ್ಗೆ ವಿಚಾರಿಸಲಾಗುತ್ತಿದೆ’ ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಜೀರ್, ಉಪ ಆಯುಕ್ತೆ ಗಾಯತ್ರಿ ನಾಯಕ್, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ರಾಜೇಶ್ವರಿ ದೇವಿ, ಉಪವಿಭಾಗಾಧಿಕಾರಿ ರವಿಚಂದ್ರ ನಾಯಕ್, ಸುರೇಶ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT