ಶನಿವಾರ, ನವೆಂಬರ್ 26, 2022
23 °C
ಎಂ.ಎನ್‌.ರಾಜೇಂದ್ರ ಕುಮಾರ್‌ ಅಭಿನಂದನಾ ಸಮಾರಂಭದಲ್ಲಿ ವೀರೇಂದ್ರ ಹೆಗ್ಗಡೆ

ಸಹಕಾರಿ ರಂಗದ ಮೇಲಿನ ನಂಬಿಕೆ ಉಳಿಸಬೇಕಿದೆ: ವೀರೇಂದ್ರ ಹೆಗ್ಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಭಾರವನ್ನು ಸಮಾನವಾಗಿ ಹಂಚಿಕೊಂಡು ಸಂಸ್ಥೆಯನ್ನು ಬೆಳೆಸುವುದು, ಎಲ್ಲರೂ ಜೊತೆಯಲ್ಲಿ ಬೆಳೆದು ಜೊತೆಯಲ್ಲಿ ಸಾಧಿಸಬೇಕೆಂಬುದೇ ಸಹಕರಿ ತತ್ವ. ಈ ತತ್ವದಲ್ಲಿ ಅಚಲವಾದ ನಂಬಿಕೆ ಇಟ್ಟು ಸಹಕಾರಿ ರಂಗದ ಮೇಲಿನ ನಂಬಿಕೆಯನ್ನು ಉಳಿಸಬೇಕಿದೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ರಾಗಿ ಸತತ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿರುವ ಎಂ.ಎನ್‌.ರಾಜೇಂದ್ರ ಕುಮಾರ್‌ ಅವರಿಗೆ ಅಭಿನಂದನೆ ಸಲ್ಲಿಸಲು ಸಮಸ್ತ ಸಹಕಾರಿ ಬಂಧುಗಳು ಸೇರಿ ಇಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದ ಅಧ‌್ಯಕ್ಷತೆ ವಹಿಸಿ ಅವರು ಮಾತನಾಡಿದರು.   

’ಯಶಸ್ಸಿಗೆ ಎಲ್ಲರಿಗೂ ಬೇಕು. ಸೋಲು ಯಾರಿಗೂ ಬೇಡ. ಸೋಲು ಗೆಲುವುಗಳ ಅಂತರವನ್ನು ಗಮನಿಸಿ ಶ್ರದ್ಧೆಯಿಂದ ಕೆಲಸ ಮಾಡುವ ಮೂಲಕ ರಾಜೇಂದ್ರ ಕುಮಾರ್‌ ಅವರು ಸಹಕಾರಿ ರಂಗ ಮೇಲಿನ ನಂಬಿಕೆ ಉಳಿಸುವ ಕೆಲಸವನ್ನು ಮಾಡಿದ್ದಾರೆ. ಜಿಲ್ಲೆಯ ಸಹಕಾರಿ ಕ್ಷೇತ್ರವು ರೆಕ್ಕೆ ಬಿಚ್ಚಿ ಹಾರುವಂತಾಗಿದ್ದು, ಅವರ ಅವಧಿಯಲ್ಲಿ. ಅವರು ರಾಜ್ಯದ ಇತರ ಜಿಲ್ಲೆಗಳಲ್ಲಿ ಹಾಗೂ ಇಡೀ ದೇಶದಲ್ಲಿ ಸಹಕಾರಿ ರಂಗ ಸಶಕ್ತ ಆಗುವಂತೆ ಬದಲಾವಣೆ ತರಲಿ’ ಎಂದು ಹಾರೈಸಿದರು. 

ಅಭಿನಂದನೆ ಸ್ವೀಕರಿಸಿದ ಎಂ.ಎನ್‌.ರಾಜೇಂದ್ರ ಕುಮಾರ್‌, ‘ಸಹಕಾರಿ ಮಹಾಮಂಡಳದ ಅಧ್ಯಕ್ಷನಾಗಲು ಒಂದೋ ಒಕ್ಕಲಿಗ ಆಗಿರಬೇಕು ಅಥವಾ ಲಿಂಗಾಯಿತ ಆಗಿರಬೇಕು ಎಂಬ ಸ್ಥಿತಿ ಇದೆ. ಜಾತಿ ಆಧಾರದಲ್ಲಿ ಕೆಲಸ ಮಾಡದೇ ಎಲ್ಲರನ್ನೂ ಅಣ್ಣತಮ್ಮಂದಿರಂತೆ ಪರಿಗಣಿಸಿ ಕೆಲಸ ಮಾಡಿದ್ದರಿಂದ ಜಾತಿ ಮತ್ತು ಪಕ್ಷದ ಬಲ ಇಲ್ಲದೆಯೂ ನಾನು ಎರಡನೇ ಸಲ ಅವಿರೋಧವಾಗಿ ಆಯ್ಕೆಯಾಗಿದ್ದೇನೆ’ ಎಂದರು.

‘ನಾವೂ ಬದುಕಿ, ಇತರರನ್ನು ಬದುಕಲು ಬಿಡುವುದು, ನಾವೂ ಬೆಳೆದು, ನಮ್ಮ ಜೊತೆಗೆ ಇನ್ನಷ್ಟು ಮಂದಿಯನ್ನು ಬೆಳೆಸುವುದು ಧರ್ಮ. ನೀವೆಲ್ಲ ಹಾಕಿರುವ ಈ ಹಾರಗಳ ಭಾರವನ್ನು ಹೊರಬೇಕಾದರೆ, ಅದರಲ್ಲಿರುವ ಪ್ರತಿ ಎಸಳುಗಳ ಬಗ್ಗೆಯೂ ಜವಾಬ್ದಾರಿ ವಹಿಸಬೇಕು. ಈ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಕೋರುತ್ತೇನೆ. ತಂದೆ ತಾಯಿಯ ಹಾಗೂ ನನ್ನನ್ನು ಬೆಳೆಸಿದ ಮಂದಿಯನ್ನು ಯಾವತ್ತೂ ಮರೆಯುವುದಿಲ್ಲ’ ಎಂದರು.

ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಶಾಸಕ ಡಿ.ವೇದವ್ಯಾಸ ಕಾಮತ್‌, ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಮಾತನಾಡಿದರು.

ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ ಆಳ್ವ, ಕಾಂಗ್ರೆಸ್‌ ಮುಖಂಡ ಅಭಯಚಂದ್ರ ಜೈನ್‌, ಬಿಜೆಪಿ ಮುಖಂಡ ನಾಗರಾಜ ಶೆಟ್ಟಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ದಿನೇಶ್‌ ಕೊಪ್ಪ, ರಾಜೇಂದ್ರ ಕುಮಾರ್‌ ಅವರ ಧರ್ಮ ಪತ್ನಿ ಅರುಣಾ ಮೊದಲಾದವರಿದ್ದರು.

ಎಂ.ಎನ್‌.ರಾಜೇಂದ್ರ ಕುಮಾರ್ ಅವರನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. 

–0–

ಕೋಟ್‌...

ರಾಜೇಂದ್ರ ಕುಮಾರ್‌ ನೇತೃತ್ವದಲ್ಲಿ ನಡೆದ ಕ್ರಾಂತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಡಿಸಿಸಿ ಬ್ಯಾಂಕ್‌ ₹ 8 ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆಸಿ ದೇಶದ ಮುಂಚೂಣಿ ಸಹಕಾರಿ ಬ್ಯಾಂಕ್‌ಗಳ ಸಾಲಿನಲ್ಲಿ ಸ್ಥಾನಪಡೆದಿದೆ.
ಕಿಶೋರ್‌ ಆಳ್ವ, ಅಧ್ಯಕ್ಷ, ದಕ್ಷಿಣ ಭಾರತ ಅದಾನಿ ಬಳಗದ,ಅಧ್ಯಕ್ಷ

–0–

ವೀರೇಂದ್ರ ಹಾಗೂ ರಾಜೇಂದ್ರ ತುಳುನಾಡಿನ ಎರಡು ಕಣ್ಣುಗಳಿದ್ದಂತೆ. ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದ ದಿಗ್ಗಜರಾದರೆ, ರಾಜೇಂದ್ರ ಅವರು ಸಹಕಾರಿ ಕ್ಷೇತ್ರ ರಾಜ
ಐಕಳ ಬಾವ ದೇವಿಪ್ರಸಾದ್‌ ಶೆಟ್ಟಿ ಬೆಳಪು, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು