ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದ್ರೋಳಿ ಕ್ಷೇತ್ರ ರಾಜ್ಯಕ್ಕೆ ಮಾದರಿ: ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು ದಸರಾ ಉದ್ಘಾಟನೆ
Last Updated 6 ಅಕ್ಟೋಬರ್ 2019, 15:08 IST
ಅಕ್ಷರ ಗಾತ್ರ

ಮಂಗಳೂರು: ಅತ್ಯಂತ ಯೋಜನಾಬದ್ಧವಾಗಿ ಮುಂದಿನ ಜನಾಂಗಕ್ಕೆ ಬೆಳಕಾಗಬಲ್ಲ ಹಾಗೂ ಭಾವುಕನೊಬ್ಬ ಪ್ರೀತಿ, ಹೆಮ್ಮೆಯಿಂದ ಆರಾಧನೆ ಮಾಡಬಹುದಾದ ಶ್ರೇಷ್ಠ ದೇವಸ್ಥಾನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

‘ರಾಜ್ಯದಲ್ಲಿ ಸುಮಾರು 34,500 ದೇವಾಲಯಗಳಿವೆ. ಇವುಗಳನ್ನೆಲ್ಲ ಸಮೀಕ್ಷೆ ಮಾಡಿದಾಗ ರಾಜ್ಯದಲ್ಲಿಯೇ ಮಾದರಿಯಾದ ದೇವಸ್ಥಾನ ಇದಾಗಿದೆ ಎಂಬುದು ನನ್ನ ಅನಿಸಿಕೆ’ ಎಂದರು.

ಭಕ್ತರೇ ಸ್ವಯಂಪ್ರೇರಿತರಾಗಿ ದಸರಾ ಸಂಭ್ರಮವನ್ನು ಅಚ್ಚುಕಟ್ಟಾಗಿ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಹಿರಿಯರಾದ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕುದ್ರೋಳಿ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ವರ್ಷದಿಂದ ವರ್ಷಕ್ಕೆ ವೈಭವಯುತವಾಗಿ ನಡೆಯುತ್ತಿದೆ ಎಂದು ಹೇಳಿದರು.

ನಾನು ಯುವಕನಾಗಿದ್ದಾಗ ಜನಾರ್ದನ ಪೂಜಾರಿ ಅವರು ಉಡುಪಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಅಂದು ಬಡವರಿಗೆ ಸಾಲ ವಿತರಿಸಿದ್ದರು. ಅಧಿಕಾರ ಸಿಕ್ಕಾಗ ಬಡವರಿಗೆ ಬ್ಯಾಂಕಿನ ಬಾಗಿಲು ತೆರೆದ ಜನಾರ್ದನ ಪೂಜಾರಿ ಅವರು, ರಾಜ್ಯ ಮತ್ತು ರಾಷ್ಟ್ರದಲ್ಲಿ ‘ಬಡವರ ಪೂಜಾರಿ’ ಎಂದೇ ಖ್ಯಾತರಾಗಿದ್ದಾರೆ ಎಂದು ತಿಳಿಸಿದರು.

ಮಂಗಳೂರು ದಸರಾ ಉದ್ಘಾಟಿಸಿದ ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ, ದಸರಾ ಮಹೋತ್ಸವದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಆ ದೇವರು ಸುಖ, ಶಾಂತಿ, ಸಮೃದ್ಧಿಯನ್ನು ನೀಡಲಿ ಎಂದು ಹಾರೈಸಿದರು.

ಮಾಲತಿ ಜನಾರ್ದನ ಪೂಜಾರಿ, ಆಡಳಿತ ಮಂಡಳಿ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ, ಪದ್ಮರಾಜ್‌ ಆರ್‌., ಊರ್ಮಿಳಾ ರಮೇಶ್‌ಕುಮಾರ್‌, ಹರಿಕೃಷ್ಣ ಬಂಟ್ವಾಳ, ಆಡಳಿತ ಮಂಡಳಿ ಸದಸ್ಯರು ವೇದಿಕೆಯಲ್ಲಿದ್ದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶೋಭಾಯಾತ್ರೆ ನಾಳೆ: ಮಂಗಳೂರು ದಸರಾ ಮಹೋತ್ಸವ ಭವ್ಯ ಶೋಭಾಯಾತ್ರೆ ಇದೇ 8ರಂದು ಸಂಜೆ 4ರಿಂದ ಆರಂಭವಾಗಲಿದೆ.

ಕುದ್ರೋಳಿ ಕ್ಷೇತ್ರದಿಂದ ಆರಂಭವಾಗುವ ಶೋಭಾಯಾತ್ರೆಯು ಮಣ್ಣಗುಡ್ಡೆ, ಲೇಡಿಹಿಲ್ ಸರ್ಕಲ್, ಲಾಲ್‌ಬಾಗ್, ಬಲ್ಲಾಳಬಾಗ್, ಪಿವಿಎಸ್ ವೃತ್ತ, ನವಭಾರತ್ ಸರ್ಕಲ್, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿಶ್ವವಿದ್ಯಾಲಯ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ರಥಬೀದಿ, ಚಿತ್ರಾ ಟಾಕೀಸ್‌, ಅಳಕೆಯ ಮೂಲಕ ಕುದ್ರೋಳಿ ಕ್ಷೇತ್ರಕ್ಕೆ ತಲುಪಲಿದೆ.

ಈ ಬಾರಿಯ ಮೆರವಣಿಗೆಯಲ್ಲಿ ಮಾರ್ಪಾಡು ಮಾಡಲಾಗಿದ್ದು, ಶಾರದಾ ಮಾತೆಯ ವಿಗ್ರಹ ಸೇರಿದಂತೆ ನವದುರ್ಗೆಯ ವಿಗ್ರಹಗಳು ಮೆರವಣಿಗೆ ಮುಂಚೂಣಿಯಲ್ಲಿ ಇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT