ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕಿ ಪಾಕ್ಸ್ ಹರಡದಂತೆ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಡಾ.ರಾಜೇಂದ್ರ ಸೂಚನೆ

ಬಜ್ಪೆ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಡಾ.ರಾಜೇಂದ್ರ ಕೆ.ವಿ. ನೇತೃತ್ವದಲ್ಲಿ ಸಭೆ
Last Updated 19 ಜುಲೈ 2022, 14:16 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಕಿ ಪಾಕ್ಸ್ ರೋಗ ಹರಡದಂತೆ ತಡೆಯಲು ಸಕಲ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರಕೆ.ವಿ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯಾವುದೇ ವ್ಯಕ್ತಿಗಳಲ್ಲಿ ಜ್ವರ ಹಾಗೂ ಚರ್ಮಗಳಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದ್ದು ಕಂಡು ಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರನ್ನು ಜಿಲ್ಲಾಧಿಕಾರಿ ಕೋರಿದ್ದಾರೆ.

ಬಜ್ಪೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕೇರಳದ ಕಣ್ಣೂರಿಗೆ ಜುಲೈ 13ರಂದು ಪ್ರಯಾಣಿಸಿದ್ದ ಯುವಕನೊಬ್ಬ (31 ವರ್ಷ) ಮಂಕಿ ಪಾಕ್ಸ್‌ ಹೊಂದಿರುವುದು ದೃಢಪಟ್ಟಿರುವುದರಿಂದ ಜಿಲ್ಲಾಧಿಕಾರಿಯವರು ಈ ರೋಗ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಲು ಅಧಿಕಾರಿಗಳೊಂದಿಗೆ ವಿಮಾನನಿಲ್ದಾಣದಲ್ಲಿ ಮಂಗಳವಾರ ಸಭೆ ನಡೆಸಿದರು.

‘ಪಕ್ಕದ ಕೇರಳ ರಾಜ್ಯದಲ್ಲಿ ಮಂಕಿ ಪಾಕ್ಸ್ ಪ್ರಕರಣಗಳು ಪತ್ತೆಯಾಗಿವೆ. ವಿದೇಶದಲ್ಲಿ ನೆಲೆಸಿರುವ ಕೇರಳಿಗರಲ್ಲಿ ಅನೇಕರು ತವರಿಗೆ ಮರಳುವಾಗ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ‌ರಸ್ತೆ ಮಾರ್ಗವಾಗಿ ಊರು ತಲುಪುತ್ತಾರೆ. ಹಾಗಾಗಿ ಮಂಗಳೂರಿನ ವಿಮಾನ ನಿಲ್ದಾಣದ ಸಿಬ್ಬಂದಿಗೂ ಮಂಕಿ ಪಾಕ್ಸ್ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ’ ಎಂದರು.

‘ಪ್ರಯಾಣಿಕರಲ್ಲಿ ಯಾರಾದರೂ ಜ್ವರ ಹೊಂದಿದ್ದಾರೆಯೇ, ಅವರ ಚರ್ಮದಲ್ಲಿ ಗುಳ್ಳೆಗಳು ಕಾಣಿಸಿಕೊಂಡಿವೆಯೇ ಎಂಬುದನ್ನು ಅವರು ವಿಮಾನದಿಂದ ಇಳಿಯುವ ಮುನ್ನವೇ ಪತ್ತೆಹಚ್ಚಲು ವಿಮಾನಯಾನ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರಲ್ಲಿ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಅವರನ್ನು ಪ್ರತ್ಯೇಕಿಸಬೇಕು. ವಿಮಾನ ನಿಲ್ದಾಣದಲ್ಲಿರುವ ಆರೋಗ್ಯಾಧಿಕಾರಿಗಳಿಂದ ತಪಾಸಣೆ ಮಾಡಿಸಬೇಕು. ಆಗಿಂದಾಗ್ಗೆ ಈ ಬಗ್ಗೆ ಮನವರಿಕೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ವಿಮಾನವು ಇಳಿದ ಬಳಿಕವೂ ಪ್ರಯಾಣಿಕರಲ್ಲಿ ಜ್ವರ ಹಾಗೂ ಚರ್ಮದ ಗುಳ್ಳೆಗಳಿವೆಯೇ ಎಂಬುದನ್ನು ಮೇಲ್ವಿಚಾರಣೆ ಸಿಬ್ಬಂದಿ ಮತ್ತೊಮ್ಮೆ ಖಚಿತ ಪಡಿಸಿಕೊಳ್ಳಬೇಕು. ರೋಗ ಲಕ್ಷಣಗಳಿರುವ ಪ್ರಯಾಣಿಕರನ್ನು ಪ್ರತ್ಯೇಕಿಸಿ ಆಂಬುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಯಲ್ಲಿ ಮಂಕಿ ಫಾಕ್ಸ್ ಸೋಂಕಿತರ ಪ್ರತ್ಯೇಕವಾಸಕ್ಕಾಗಿ ಆರಂಭಿಸಲಾದ ವಿಶೇಷ ವಾರ್ಡ್‍ಗೆ ದಾಖಲಿಸಬೇಕು’ ಎಂದು ಸೂಚಿಸಿದರು.

ಮಂಕಿ ಪಾಕ್ಸ್ ಹರಡದಂತೆ ಜಾಗೃತಿ ಮೂಡಿಸಲು ಕನ್ನಡ, ಮಲಯಾಳ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಪ್ರಚಾರ ಸಾಮಗ್ರಿಗಳನ್ನು ವಿಮಾನನಿಲ್ದಾಣದ ವಿವಿಧ ಸ್ಥಳಗಳಲ್ಲಿ ಅಳವಡಿಸಬೇಕು. ಕಾಯಿಲೆಯ ಕುರಿತು ಜಾಗೃತಿ ಮೂಡಿಸುವ ವಿವಿಧ ಫೋಟೊಗಳನ್ನು ವಿಮಾನನಿಲ್ದಾಣ ಪ್ರಾಧಿಕಾರದ ಅಧಿಕಾರಿ ಹಾಗೂ ಸಿಬ್ಬಂದಿ ವಾಟ್ಸ್ ಗ್ರೂಪ್‍ಗಳಲ್ಲಿ ಹಂಚಿಕೊಳ್ಳಬೇಕು. ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಕ್ಯಾಬ್ ಚಾಲಕರಲ್ಲೂ ಅರಿವು ಮೂಡಿಸಬೇಕು. ವಿಮಾನ ನಿಲ್ದಾಣದ ಡಿಜಿಟಲ್ ಪರದೆಗಳಲ್ಲಿ ಹಾಗೂ ಧ್ವನಿವರ್ಧಕಗಳ ಮೂಲಕ ಸಂದೇಶಗಳನ್ನು ಪ್ರಸಾರ ಮಾಡಬೇಕು ಎಂದು ವಿಮಾನನಿಲ್ದಾಣದ ಆರೋಗ್ಯಾಧಿಕಾರಿ ಹಾಗೂ ವಿಮಾನನಿಲ್ದಾಣದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ ಬಿ.ವಿ, ಕೋವಿಡ್ ನೋಡಲ್ ಅಧಿಕಾರಿ ಡಾ.ಅಶೋಕ್ ಹೆಚ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ಕೆ., ವಿಮಾನನಿಲ್ದಾಣದ ಕಾರ್ಯಾಚರಣೆ ವಿಭಾಗದ ಮುಖ್ಯಾಧಿಕಾರಿ ಶ್ರೀಕಾಂತ್ ಟಾಟಾ, ವಿಮಾನ ನಿಲ್ದಾಣದ ವೈದ್ಯಾಧಿಕಾರಿ ಡಾ.ನಿಶಿತಾ, ವಿಮಾನಯಾನ ವಿಭಾಗದ ಮುಖ್ಯಸ್ಥರು, ಕಸ್ಟಮ್ಸ್‌ ಅಧಿಕಾರಿಗಳು ಭಾಗವಹಿಸಿದರು.

‘ಸಹ ಪ್ರಯಾಣಿಕರಲ್ಲಿ ರೋಗ ಲಕ್ಷಣವಿಲ್ಲ’
‘ಮಂಕಿ ಪಾಕ್ಸ್‌ ದೃಢಪಟ್ಟ ಕೇರಳದ ಕಣ್ಣೂರಿನ 31 ವರ್ಷದ ಯುವಕನ ಜೊತೆ ಪ್ರಯಾಣಿಸಿದ್ದವರಲ್ಲಿ 11 ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರು. ಇವರಲ್ಲಿ 9 ಮಂದಿಯನ್ನು ಪತ್ತೆಹಚ್ಚಲಾಗಿದೆ. ಪ್ರತ್ಯೇಕವಾಸಕ್ಕೆ ಒಳಗಾಗುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಅವರ ಆರೋಗ್ಯದ ಮೇಲೂ ನಿಗಾ ಇಡಲಾಗಿದೆ. ಒಂಬತ್ತು ಮಂದಿಯಲ್ಲೂ ಯಾರಲ್ಲೂ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ಕೆ.ಜಗದೀಶ್‌ ತಿಳಿಸಿದರು.

‘ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಒಂಬತ್ತು ಮಂದಿಯ ಮನೆಗಳಿಗೆ ಭೇಟಿ ನೀಡಿಪರಿಶೀಲನೆ ನಡೆಸಿದ್ದಾರೆ. ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ. ಯಾವುದಾದರೂ ರೋಗ ಲಕ್ಷಣ ಕಾಣಿಸಿಕೊಂಡಲ್ಲಿ ತಕ್ಷಣ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬೇಕು ಹಾಗೂ 21 ದಿನಗಳ ಕಾಲ ಪ್ರತ್ಯೇಕವಾಸದಲ್ಲಿರಬೇಕು ಎಂದು ನಿರ್ದೇಶನ ನೀಡಿದ್ದೇವೆ’ ಎಂದರು.

*
ಮಂಕಿ ಪಾಕ್ಸ್ ಹರಡದಂತೆ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಜನರು ಭಯಭೀತರಾಗದೆ ಜಿಲ್ಲಾಡಳಿತದ ಸೂಚನೆ ಪಾಲಿಸುವ ಮೂಲಕ ರೋಗ ನಿಯಂತ್ರಣಕ್ಕೆ ಕೈಜೋಡಿಸಬೇಕು.
-ಡಾ.ರಾಜೇಂದ್ರ ಕೆ.ವಿ. ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT