ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ನಿಗಾ; ರೈಲು ಪ್ರಯಾಣಿಕರಿಗೂ ಪರೀಕ್ಷೆ

ಕಠಿಣ ಕ್ರಮಕ್ಕೆ ಸರ್ಕಾರದ ಸೂಚನೆ; ಖುದ್ದು ಪರಿಶೀಲನೆಗೆ ಇಂದು ಎಡಿಜಿಪಿ ಪ್ರತಾಪ್‌ ರೆಡ್ಡಿ
Last Updated 3 ಆಗಸ್ಟ್ 2021, 2:58 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಗಡಿಯಲ್ಲಿ ನೆಗೆಟಿವ್ ವರದಿ ಕಡ್ಡಾಯ ಮಾಡ ಲಾಗಿದೆ. ಈ ಬಗ್ಗೆ ಖುದ್ದು ಪರಿಶೀಲನೆಗೆ ಎಡಿಜಿಪಿ ಪ್ರತಾಪ್‌ರೆಡ್ಡಿ ಮಂಗಳವಾರ ನಗರಕ್ಕೆ ಭೇಟಿ ನೀಡಲಿದ್ದಾರೆ.

ಇದುವರೆಗೆ ಒಂದು ಡೋಸ್‌ ಲಸಿಕೆ ಅಥವಾ ನೆಗೆಟಿವ್‌ ವರದಿ ಇದ್ದವರಿಗೆ ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡ ಲಾಗಿತ್ತು. ಆದರೆ, ರೈಲುಗಳ ಮೂಲಕ ಬರುವ ಪ್ರಯಾಣಿಕರ ತಪಾಸಣೆ ಆರಂಭವಾಗಿರಲಿಲ್ಲ. ಇದೀಗ ಜಿಲ್ಲೆಯ ಪರಿಸ್ಥಿತಿ ಕೈಮೀರುವ ಮೊದಲೇ ಎಚ್ಚೆತ್ತು ಕೊಂಡಿರುವ ಜಿಲ್ಲಾಡಳಿತ, ಯಾವುದೇ ಮಾರ್ಗದಿಂದ ನಗರಕ್ಕೆ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯಗೊಳಿಸಿದೆ. ಇದಕ್ಕಾಗಿ ನಗರದ ಕೇಂದ್ರ ರೈಲು ನಿಲ್ದಾಣ ಹಾಗೂ ಜಂಕ್ಷನ್‌ ರೈಲು ನಿಲ್ದಾಣಗಳಲ್ಲಿ ಆರ್‌ಟಿಪಿಸಿಆರ್ ತಪಾಸಣಾ ಕೇಂದ್ರಗಳನ್ನು ಆರಂಭಿಸಲಾಗಿದೆ.

ಸೋಮವಾರ ರೈಲಿನ ಮೂಲಕ ಬಂದ ಬಹುತೇಕ ಜನರು ನೆಗೆಟಿವ್ ಪ್ರಮಾಣಪತ್ರ ತಂದಿರಲಿಲ್ಲ. ನಿಲ್ದಾಣದಲ್ಲಿಯೇ ಅವರ ಗಂಟಲು ದ್ರವ ಸಂಗ್ರಹಿಸಿ, ಆರ್‌ಟಿಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬರುವವರೆಗೆ ಅವರ ಮೇಲೆ ನಿಗಾ ಇಡಲು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

‘ಈಗಾಗಲೇ ಕೇರಳದ ಗಡಿಭಾಗದ ರಸ್ತೆಗಳಲ್ಲಿ 6 ಚೆಕ್‌ಪೋಸ್ಟ್‌ ಹಾಗೂ ರೈಲು ನಿಲ್ದಾಣಗಳಲ್ಲಿ 6 ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ದಿನದ 24 ಗಂಟೆಯೂ ನೆಗೆಟಿವ್ ವರದಿ ತಪಾಸಣೆ ಮಾಡಲಾಗುತ್ತಿದೆ. ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ, ಇತರೆ ಸಂಚಾರ ವನ್ನು ನಿಷೇಧಿಸಲಾಗುತ್ತಿದೆ’ ಎಂದು ಡಿ.ಸಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

‘ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಿದಂತೆ ಕರಾವಳಿಗೂ ಆತಂಕ ಮನೆ ಮಾಡುತ್ತಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಇದೇ ಪರಿಸ್ಥಿತಿ ಉದ್ಭವಿಸಿತ್ತು. ಮಹಾರಾಷ್ಟ್ರದ ಜನರು ರೈಲಿನ ಮೂಲಕ ಮಂಗಳೂರಿಗೆ ಬರುತ್ತಿದ್ದರೆ, ಇತ್ತ ಕಾಸರಗೋಡಿನ ಜನರು ರಸ್ತೆ ಮಾರ್ಗದ ಮೂಲಕ ನಗರಕ್ಕೆ ಬರುತ್ತಾರೆ. ಹಾಗಾಗಿ ಎರಡೂ ಕಡೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸುವುದು ಇದೀಗ ಅನಿವಾರ್ಯವಾಗಿದೆ’ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾಸರಗೋಡಿನಲ್ಲಿ 703 ಪ್ರಕರಣ

ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳು ನಿರಂತರ ಏರಿಕೆಯಾಗುತ್ತಿದ್ದು, ಸೋಮವಾರ 703 ಮಂದಿಗೆ ಕೋವಿಡ್ ದೃಢಪಟ್ಟಿದೆ. 668 ಮಂದಿ ಗುಣಮುಖರಾಗಿದ್ದಾರೆ. 6,910 ಸಕ್ರಿಯ ಪ್ರಕರಣಗಳಿದ್ದು, 27,090 ಮಂದಿಯನ್ನು ನಿಗಾದಲ್ಲಿ ಇಡಲಾಗಿದೆ. ಇದುವರೆಗೆ 1,08,764 ಮಂದಿಗೆ ಕೋವಿಡ್–19 ದೃಢಪಟ್ಟಿದೆ. ಕೇರಳದಲ್ಲಿ ಸೋಮವಾರ ಒಟ್ಟು 13,984 ಜನರಲ್ಲಿ ಕೋವಿಡ್–19 ಪತ್ತೆಯಾಗಿದೆ.

ತಲಪಾಡಿಗೆ ಎಡಿಜಿಪಿ ಭೇಟಿ

ಎಡಿಜಿಪಿ ಪ್ರತಾಪ್‌ ರೆಡ್ಡಿ ಅವರು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ತಲಪಾಡಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಲಿದ್ದಾರೆ.

ಸೋಮವಾರ ಸಂಜೆ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಎಡಿಜಿಪಿ ಪ್ರತಾಪ್ ರೆಡ್ಡಿ, ನೇರವಾಗಿ ಪಶ್ಚಿಮ ವಲಯ ಐಜಿಪಿ ಕಚೇರಿಗೆ ತೆರಳಿ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಸೋಮವಾರ ರಾತ್ರಿ ಮಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದು, ಮಂಗಳವಾರ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಆ ಬಳಿಕ ಕೇರಳ ಗಡಿ ಪ್ರದೇಶವಾದ ತಲಪಾಡಿಗೆ ತೆರಳಿ ಪರಿಶೀಲನೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

38 ಸಾವಿರ ಮಂದಿಗೆ ಲಸಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಒಟ್ಟು 38,311 ಮಂದಿಗೆ ಲಸಿಕೆ ಹಾಕಲಾಗಿದೆ.

ಬಂಟ್ವಾಳ ತಾಲ್ಲೂಕಿನ 9,133, ಬೆಳ್ತಂಗಡಿಯ 4,404, ಮಂಗಳೂರಿನ 14,802, ಪುತ್ತೂರಿನ 6,258 ಹಾಗೂ ಸುಳ್ಯದ 3,714 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಡಿಎಚ್‌ಒ ಡಾ.ಕಿಶೋರ್‌ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT