ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನಿಂದ ತೈಲ ಆಮದಿಗೆ ನಿರ್ಬಂಧ; ಪರ್ಯಾಯ ವ್ಯವಸ್ಥೆಗೆ ಎಂಆರ್‌ಪಿಎಲ್‌ ಸಿದ್ಧತೆ

ನ.4ರಿಂದ ಜಾರಿ ಸಾಧ್ಯತೆ
Last Updated 22 ಸೆಪ್ಟೆಂಬರ್ 2018, 17:28 IST
ಅಕ್ಷರ ಗಾತ್ರ

ಮಂಗಳೂರು: ಇರಾನ್‌ ಜೊತೆಗೆ ವ್ಯಾಪಾರ ವಹಿವಾಟು ನಡೆಸದಂತೆ ಅಮೆರಿಕವು ಹೇರಿರುವ ನಿರ್ಬಂಧ ನವೆಂಬರ್‌ 4ರಿಂದ ಜಾರಿಯಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ಕಚ್ಚಾ ತೈಲ ಆಮದಿಗಾಗಿ ಪರ್ಯಾಯ ಮೂಲಗಳ ಹುಡುಕಾಟ ಆರಂಭಿಸಿದೆ.

ಎಂಆರ್‌‍ಪಿಎಲ್‌ ವಾರ್ಷಿಕ 1.60 ಕೋಟಿ ಟನ್‌ ಕಚ್ಚಾ ತೈಲವನ್ನು ಸಂಸ್ಕರಣೆ ಮಾಡುತ್ತದೆ. ಈ ಪೈಕಿ 30 ಲಕ್ಷ ಟನ್‌ ದೇಶದೊಳಗಿನ ಕಚ್ಚಾ ತೈಲ ಮೂಲಗಳಿಂದ ಪೂರೈಕೆಯಾಗುತ್ತಿದೆ. 1.30 ಕೋಟಿ ಟನ್‌ ಕಚ್ಚಾ ತೈಲ
ವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇರಾನ್‌ನಿಂದ ಪ್ರತಿವರ್ಷ ಸುಮಾರು 45 ಲಕ್ಷ ಟನ್‌ ಕಚ್ಚಾ ತೈಲ ಆಮದು ಮಾಡಲಾಗುತ್ತಿದೆ. ಉಳಿದ ಕಚ್ಚಾ ತೈಲವನ್ನು ಸೌದಿ ಅರೇಬಿಯಾ, ಅಬುಧಾಬಿ, ಕುವೈತ್‌ ಮತ್ತಿತರ ರಾಷ್ಟ್ರಗಳಿಂದ ಖರೀದಿಸಲಾಗುತ್ತಿದೆ.

ಅಮೆರಿಕದ ನಿರ್ಬಂಧವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಇರಾನ್‌ ಜೊತೆಗೆ ಕಚ್ಚಾ ತೈಲ ಖರೀದಿಯೂ ಸೇರಿದಂತೆ ಯಾವುದೇ ವಹಿವಾಟು ನಡೆಸುವಂತಿಲ್ಲ. ಆಗ, ಎಂಆರ್‌ಪಿಎಲ್‌ಗೆ ವಾರ್ಷಿಕ 45 ಲಕ್ಷ ಟನ್‌ನಷ್ಟು ಕಚ್ಚಾ ತೈಲದ ಕೊರತೆ ಎದುರಾಗಲಿದೆ. ಇದು ದೇಶದೊಳಗಿನ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಮೇಲೆ ತೀವ್ರವಾದ ಪರಿಣಾಮ ಉಂಟುಮಾಡುವ ಸಾಧ್ಯತೆಯೂ ಇದೆ.

ಇರಾನ್‌ ಜೊತೆಗಿನ ವಹಿವಾಟು ನಿರ್ಬಂಧಿಸದಂತೆ ಅಮೆರಿಕ ಸರ್ಕಾರದ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಈ ಮಧ್ಯೆ ಮಾತುಕತೆ ವಿಫಲವಾದರೆ ಮುಂದಿನ ಸವಾಲನ್ನು ಎದುರಿಸುವುದಕ್ಕೂ ಪೆಟ್ರೋಲಿಯಂ ಸಚಿವಾಲಯ ಸಿದ್ಧತೆ ಆರಂಭಿಸಿದೆ. ಇರಾನ್‌ನಿಂದ ಖರೀದಿಸುತ್ತಿದ್ದಷ್ಟು ಕಚ್ಚಾ ತೈಲವನ್ನು ಇತರೆ ರಾಷ್ಟ್ರಗಳಿಂದ ಖರೀದಿಸುವುದಕ್ಕೂ ಮಾತುಕತೆ ಆರಂಭವಾಗಿದೆ.

ಈ ಬೆಳವಣಿಗೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್, ‘ಈ ವರ್ಷ ಇರಾನ್‌ನಿಂದ ಪೂರೈಕೆಯಾಗಬೇಕಿದ್ದ ಕಚ್ಚಾ ತೈಲದ ಶೇಕಡ 90ರಷ್ಟು ಈಗಾಗಲೇ ನಮಗೆ ತಲುಪಿದೆ. ಅಕ್ಟೋಬರ್‌ ತಿಂಗಳ ಪಾಲು ಈಗ ಮಂಗಳೂರಿನತ್ತ ಹೊರಟಿದೆ. ನವೆಂಬರ್‌ 4ರ ಬಳಿಕ ಮುಂದಿನ ಬೆಳವಣಿಗೆಗಳ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದರು.

‘ನಿರ್ಬಂಧ ಜಾರಿಯಾಗದಂತೆ ತಡೆಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಬೇರೆ ರಾಷ್ಟ್ರಗಳಿಂದ ಕಚ್ಚಾ ತೈಲ ಖರೀದಿ ಮಾಡುವ ಕುರಿತು ಎಂಆರ್‌ಪಿಎಲ್‌ ಚರ್ಚೆ ನಡೆಸುತ್ತಿದೆ. ಬೇರೆ ರಾಷ್ಟ್ರಗಳ ಕಚ್ಚಾ ತೈಲ ಪೂರೈಕೆದಾರರ ಜೊತೆ ಮಾತುಕತೆ ಚಾಲ್ತಿಯಲ್ಲಿದೆ. ಎಂಆರ್‌ಪಿಎಲ್‌ಗೆ ಅಗತ್ಯವಿರುವಷ್ಟು ಕಚ್ಚಾ ತೈಲ ಪೂರೈಕೆಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT