ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುರಸಭೆ ಸಾಮಾನ್ಯ ಸಭೆ: ಗೌರವಧನಕ್ಕೆ ಪಟ್ಟು

Published : 18 ಸೆಪ್ಟೆಂಬರ್ 2024, 15:57 IST
Last Updated : 18 ಸೆಪ್ಟೆಂಬರ್ 2024, 15:57 IST
ಫಾಲೋ ಮಾಡಿ
Comments

ಬಂಟ್ವಾಳ: ಕಳೆದ ಒಂದೂವರೆ ವರ್ಷ ಆಡಳಿತಾಧಿಕಾರಿ ಆಡಳಿತ ನಡೆಸಿದ್ದ ಅವಧಿಯಲ್ಲಿ ಪುರಸಭೆ ಸದಸ್ಯರಿಗೆ ನೀಡಬೇಕಿದ್ದ ಗೌರವಧನ ನಮಗೆ ಕೊಡಬೇಕು. ಈ ಬಗ್ಗೆ ಪುರಸಭೆ ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ  ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಇಂದು ನಡೆಯುತ್ತಿರುವ ಸಾಮಾನ್ಯ ಸಭೆಯ ಗೌರವಧನ ಸ್ವೀಕರಿಸುವುದಿಲ್ಲ ಎಂದು ಆಡಳಿತ ಪಕ್ಷ (ಕಾಂಗ್ರೆಸ್) ಸದಸ್ಯರು ಪಟ್ಟುಹಿಡಿದರು.

ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೊ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಜನಾರ್ದನ ಚಂಡ್ತಿಮಾರ್, ಮಹಮ್ಮದ್ ಶರೀಫ್, ಪಿ.ರಾಮಕೃಷ್ಣ ಆಳ್ವ, ಹಸೈನಾರ್, ಸಿದ್ದೀಕ್ ಮತ್ತಿತರರು ಈ ವಿಷಯ ಪ್ರಸ್ತಾವಿಸಿದರು. ಆಡಳಿತ ಪಕ್ಷದ ಸದಸ್ಯರ ಒತ್ತಾಯಕ್ಕೆ ಮಣಿದ ಪುರಸಭೆ ಅಧ್ಯಕ್ಷರು ಯೋಜನಾ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ  ಈ ಬಗ್ಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ ಬಳಿಕ ಚರ್ಚೆಗೆ ತೆರೆ ಬಿತ್ತು.

ಎರಡನೆಯ ಹಂತದ ಕುಡಿಯುವ ನೀರಿನ ಯೋಜನೆ ಪುರಸಭೆಗೆ ಹಸ್ತಾಂತರಗೊಂಡಿಲ್ಲ. ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿಯಿಂದ ಮೆಲ್ಕಾರ್ ,ಬಿ.ಸಿ.ರೋಡಿನ ಕೆಲವೆಡೆ 10 ದಿನಗಳಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎಂದು ವಿರೋಧ ಪಕ್ಷದ (ಬಿಜೆಪಿ) ಸದಸ್ಯ ಎ.ಗೋವಿಂದ ಪ್ರಭು ಆರೋಪಿಸಿದರು. ಇದಕ್ಕೆ ಸದಸ್ಯರಾದ ಪಿ.ರಾಮಕೃಷ್ಣ ಆಳ್ವ, ಸಿದ್ದಿಕ್, ಜೆಸಿಂತಾ ಡಿಸೋಜ ಧ್ವನಿಗೂಡಿಸಿದರು.

ಜಿಲ್ಲಾಧಿಕಾರಿ ಗಮನಕ್ಕೆ ತಂದು ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಎಂಜಿನಿಯರ್ ಜತೆಗೆ ಪ್ರತ್ಯೇಕ ಸಭೆ ನಡೆಸುವುದಾಗಿ ಪುರಸಭೆ ಅಧ್ಯಕ್ಷರು ಉತ್ತರಿಸಿದರು.

ಉಪಾಧ್ಯಕ್ಷ ಮುನೀಶ್ ಆಲಿ, ಸದಸ್ಯರಾದ ಮಹಮ್ಮದ್ ನಂದರಬೆಟ್ಟು , ಹರಿಪ್ರಸಾದ್, ಶಶಿಕಲಾ, ವಿದ್ಯಾವತಿ, ದೇವಕಿ, ಲೋಲಾಕ್ಷ ಶೆಟ್ಟಿ, ಜಗದೀಶ ಕುಂದರ್, ಝೀನತ್ ಪಿರೋಜ್, ಜಯರಾಮ ನಾಯ್ಕ, ಗಾಯತ್ರಿ ಪ್ರಕಾಶ್ ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೊ, ರಜಾಕ್, ಉಮಾವತಿ ಮತ್ತಿತರರು ಇದ್ದರು.

ಪುರಸಭೆ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ಶರೀಫ್ ಮತ್ತು ಸದಸ್ಯ ಹಸೈನಾರ್ ಸಭೆಯಲ್ಲಿ ಜೊತೆಯಾಗಿ ಭಾಗವಹಿಸಿ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT