ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ನೀರು ಪರೀಕ್ಷಾ ಪ್ರಯೋಗಾಲಯಕ್ಕೆ ಎನ್‌ಎಬಿಎಲ್‌ ಮಾನ್ಯತೆ

ರಾಜ್ಯದ ಮೊದಲ ಪ್ರಯೋಗಾಲಯದ ಹೆಗ್ಗಳಿಕೆ
Last Updated 31 ಜುಲೈ 2021, 13:12 IST
ಅಕ್ಷರ ಗಾತ್ರ

ಮಂಗಳೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿಯಲ್ಲಿ ಸ್ಥಾಪಿಸಲಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯವು ಎನ್‌ಎಬಿಎಲ್‌ ಮಾನ್ಯತೆ ಪಡೆದಿದ್ದು, ಈ ಮಾನ್ಯತೆ ಪಡೆದ ರಾಜ್ಯದ ಮೊದಲ ಪ್ರಯೋಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಾಜ್ಯದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡುವ ಮುನ್ನ, ನೀರಿನ ಗುಣಮಟ್ಟವನ್ನು ಪರೀಕ್ಷಿಸಿ, ಸರಬರಾಜು ಮಾಡಬೇಕಾಗಿದೆ. ಅದಕ್ಕಾಗಿ ನೀರಿನ ಪರೀಕ್ಷೆಗಳನ್ನು ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ 1998ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.

ಕುಡಿಯುವ ನೀರಿನ ಪರೀಕ್ಷಾ ಪ್ರಯೋಗಾಲಯಗಳಿಗೆ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್‌ನ ಮಾರ್ಗಸೂಚಿ ಪ್ರಕಾರ ಎನ್‌ಎಬಿಎಲ್‌ ಮಾನ್ಯತೆ ಪಡೆಯುವುದು ಕಡ್ಡಾಯ. ಈ ಮಾನ್ಯತೆ ಪಡೆಯುವುದು ಕಷ್ಟದ ಪ್ರಕ್ರಿಯೆಯಾಗಿದ್ದು, ಎನ್‌ಎಬಿಎಲ್‌ ಮಾರ್ಗಸೂಚಿಯ ಅನ್ವಯ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸಲು ಸೂಕ್ತ ಅರ್ಹತೆ ಹೊಂದಿರುವ, ನುರಿತ ಮತ್ತು ಅನುಭವವಿರುವಂತಹ ಸಿಬ್ಬಂದಿ, ನಿರ್ದಿಷ್ಟ ಉಪಕರಣ, ಮೂಲಸೌಕರ್ಯಗಳು ಮತ್ತು ಪ್ರಯೋಗಾಲಯ ನಿರ್ವಹಣೆಗೆ ತಕ್ಕಂತೆ ಪ್ರಯೋಗಾಲಯದ ಕಟ್ಟಡ ಅವಶ್ಯಕವಾಗಿದೆ.

ನಾಲ್ಕು ಹಂತಗಳಲ್ಲಿ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗಿದ್ದು, ಗುಣಮಟ್ಟದ ಕೈಪಿಡಿ, ನಿರ್ವಹಣಾ ವ್ಯವಸ್ಥೆಯ ಕಾರ್ಯವಿಧಾನಗಳು, ಭಾರತೀಯ ಮಾನದಂಡಗಳ ಪ್ರಕಾರ ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನದ ಕೈಪಿಡಿ ಮತ್ತು ದಾಖಲಾತಿಗಳನ್ನು ಸಿದ್ಧಪಡಿಸಬೇಕಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲಾ ಪ್ರಯೋಗಾಲಯದ ಆಂತರಿಕ ಪರಿಶೋಧನೆಯನ್ನು ಕೈಗೊಂಡು, ಏಪ್ರಿಲ್‌ 28 ರಂದು ಒಟ್ಟು 16 ರಾಸಾಯನಿಕ ನಿಯತಾಂಕಗಳ ಗುಣಮಟ್ಟದ ಪರೀಕ್ಷೆ ನಡೆಸಲು ಎನ್‌ಎಬಿಎಲ್‌ಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.

ಜೂನ್‌ 2 ರಂದು ಜಿಲ್ಲಾ ಪ್ರಯೋಗಾಲಯಕ್ಕೆ ಎನ್‌ಎಬಿಎಲ್‌ನ ಆರ್.ಕೆ. ಸೋಲಂಕಿ ನೇತೃತ್ವದಲ್ಲಿ, ತಾಂತ್ರಿಕ ಮೌಲ್ಯಮಾಪಕ ಸ್ಯಾಮ್ಯುಯಲ್ ಪ್ರಸನ್ನ ಭೇಟಿ ನೀಡಿದ್ದು, ಮೌಲ್ಯಮಾಪನ ನಡೆಸಿದ್ದರು.

ಪ್ರಯೋಗಾಲಯದಲ್ಲಿ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಂಡಿರುವ ಕಾರ್ಯವಿಧಾನಗಳ ದಾಖಲಾತಿಗಳ, ನೀರಿನ ಗುಣಮಟ್ಟದ ಪರೀಕ್ಷಾ ವರದಿಗಳ ಪರಿಶೀಲನೆ, ಪ್ರಯೋಗಾಲಯಗಳಲ್ಲಿ ನಿರ್ವಹಿಸಿರುವ ದಾಖಲಾತಿಗಳ ಆಧಾರದ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಪ್ರಯೋಗಾಲಯವು ಎನ್‌ಎಬಿಎಲ್‌ ಮಾನ್ಯತೆ ಪಡೆಯಲು ಅರ್ಹತೆ ಹೊಂದಿರುವುದಾಗಿ ಎನ್‌ಎಬಿಎಲ್‌ ಮಂಡಳಿಗೆ ಪರಿಶೋಧಕರು ಶಿಫಾರಸು ಮಾಡಿದ್ದರು. ಈ ಶಿಫಾರಸಿನ ಆಧಾರದ ಮೇಲೆ ಎನ್‌ಎಬಿಎಲ್‌ನಿಂದ ದಕ್ಷಿಣ ಕನ್ನಡ ಜಿಲ್ಲಾ ನೀರು ಪರೀಕ್ಷಾ ಪ್ರಯೋಗಾಲಯಕ್ಕೆ ಮಾನ್ಯತೆ ನೀಡಲಾಗಿದೆ.

ಜಲಜೀವನ್ ಮಿಷನ್‌ ಮಾರ್ಗಸೂಚಿಯಂತೆ ಎನ್‌ಎಬಿಎಲ್‌ ಮಾನ್ಯತೆ ಪಡೆಯುವುದು ಕಡ್ಡಾಯ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮಾನ್ಯತೆ ಪಡೆದ ಮೊದಲ ಪ್ರಯೋಗಾಲಯ ನಮ್ಮದಾಗಿದೆ.
ಡಾ.ಕುಮಾರ್‌
ದ.ಕ. ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT