ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯಿಂದಾಗಿ ನಾರಾಯಣ ಗುರು ವೃತ್ತ ವಿಖ್ಯಾತ

ಪ್ರಧಾನಿಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅಭಿನಂದನೆ
Published 17 ಏಪ್ರಿಲ್ 2024, 4:51 IST
Last Updated 17 ಏಪ್ರಿಲ್ 2024, 4:51 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರಧಾನಿ ನರೇಂದ್ರ ಮೋದಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗುರುಗಳಿಗೆ ಗೌರವ ಸಲ್ಲಿಸಿದ್ದಾರೆ. ಇದರಿಂದಾಗಿ ದೇಶದಾದ್ಯಂತ ಜನರು ನಾರಾಯಣಗುರು ವೃತ್ತವನ್ನು ನೋಡುವಂತಾಗಿದೆ’ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.‌

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಒಳ್ಳೆಯ ನಿರ್ಧಾರ ಕೈಗೊಂಡ ಪ್ರಧಾನಿ ಅವರಿಗೆ ಅಭಿನಂದನೆ. ರೋಡ್ ಶೋನಲ್ಲಿ ಇಲ್ಲಿನ ಯುವಜನರು, ಮಹಿಳೆಯರು, ಮಕ್ಕಳು ಕುಟುಂಬ ಸಮೇತ ಭಾಗವಹಿಸಿ ಪ್ರಧಾನಿಗೆ ಗೌರವ ಸಲ್ಲಿಸಿದ್ದಾರೆ. ಅನೇಕ ಸಂಘಟನೆಗಳು ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೋಡ್‌ ಶೋ ಜೊತೆ ಜೋಡಿಸಿದ್ದು, ಅವರಿಗೂ ಕೃತಜ್ಞತೆ’ ಎಂದರು.

‘ನಾರಾಯಣಗುರುಗಳ ಪ್ರತಿಮೆಗೆ ಪ್ರಧಾನಿ ಮಾಲಾರ್ಪಣೆ ಮಾಡಿದ್ದು ಚುನಾವಣಾ ಗಿಮಿಕ್’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಮಾಡಿದ ಟೀಕೆಗೆ ಪ್ರತಿಕ್ರಯಿಸಿದ ಅವರು, ‘ಪ್ರಧಾನಿಯವರ ಕಾರ್ಯಕ್ರಮಕ್ಕೂ ಮುನ್ನವೇ  ಕಾಂಗ್ರೆಸ್‌ನವರು ಮುಖ್ಯಮಂತ್ರಿಯವರನ್ನು ಕರೆಸಿ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿಸಬಹುದಿತ್ತು. ಮಾಲಾರ್ಪಣೆ ಮಾಡಿದ್ದನ್ನು ಪ್ರಶ್ನೆ ಮಾಡಬಾರದು.  ಜಗತ್ತಿನ ಶ್ರೇಷ್ಠ ಮಾನವತಾವಾದಿಗೆ ಗೌರವ ಕೊಡುವ ವಿಚಾರದಲ್ಲಿ ಯಾರೂ ಮತ್ಸರಪಡಬಾರದು’ ಎಂದರು.

ನಾರಾಯಣ ಗುರು ವೃತ್ತ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ‘ಬಿರುವೆರ್ ಕುಡ್ಲ’ ಸಂಘಟನೆಯ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕಾರ್ಯಕ್ರಮಕ್ಕೆ ಎರಡು ಮೂರು ದಿನಗಳಲ್ಲಿ ತಯಾರಿ ನಡೆಸಿದ್ದರಿಂದ  ಸ್ವಾಭಾವಿಕವಾಗಿ ಸಣ್ಣಪುಟ್ಟ ವ್ಯತ್ಯಾಸಗಳಾಗಿವೆ. ಯಾರಿಗಾದರೂ ಅಸಮಾಧಾನ ಆಗಿದ್ದರೆ ಸರಿಪಡಿಸುತ್ತೇವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರವಿ ಶಂಕರ್‌ ಮಿಜಾರ್, ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ಸಂಜಯ ಪ್ರಭು, ಜಗದೀಶ ಶೇಣವ ಭಾಗವಹಿಸಿದ್ದರು.

‘ಮೇಯರ್‌ಗೆ ಸಿಗದ ಅವಕಾಶ– ನನಗೂ ನೋವಾಗಿದೆ’ ‘ಪ್ರಧಾನಿ ನಗರಕ್ಕೆ ಬರುವಾಗ ಎದುರುಗೊಳ್ಳಲು ಮೇಯರ್‌ಗೆ ಅವಕಾಶ ಸಿಗದಿರುವುದು ನನಗೂ ನೋವಾಗಿದೆ. ಇದು ತಾಂತ್ರಿಕ ಕಾರಣದಿಂದಾಗಿ ಆದ ವ್ಯತ್ಯಾಸ. ಹೀಗೆ ಆಗಬಾರದಿತ್ತು’ ಎಂದು ಸತೀಶ್ ಕುಂಪಲ ಹೇಳಿದರು. ‘ಪ್ರಧಾನಿ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ಸಿಗದಿದ್ದರೆ ಜಿಲ್ಲಾ ಘಟಕದ ಅಧ್ಯಕ್ಷನಾದ ನಾನೂ ಹೊರಗೆ ನಿಲ್ಲಬೇಕಾಗುತ್ತದೆ’ ಎಂದರು.

- ಪ್ರಚಾರಕ್ಕೆ ವಿಜಯೇಂದ್ರ ಅಣ್ಣಾಮಲೈ  ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ‌ ಇದೇ 21 ರಂದು ಬಂಟ್ವಾಳ ಹಾಗೂ ಬೆಳ್ತಂಗಡಿಯಲ್ಲಿ ಹಾಗೂ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ‌22 ರಂದು ಸುಳ್ಯ ಹಾಗೂ ಇನ್ನೊಂದು ಕಡೆ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ’ ಎಂದು ಸತೀಶ್‌ ಕುಂಪಲ ತಿಳಿಸಿದರು. ‘ಮಹಿಳಾ ಮೋರ್ಚಾ ಪರಿಶಿಷ್ಟ ಜಾತಿ ಮೋರ್ಚಾ  ಹಿಂದುಳಿದ ವರ್ಗಗಳ ಮೋರ್ಚಾ‌ ವತಿಯಿಂದಲೂ ಪ್ರಚಾರ ಸಭೆಗಳನ್ನು ನಡೆಸಲಿದ್ದೇವೆ. ಇದೇ 19 ರಂದು ವಕೀಲರ ಸಭೆಯನ್ನು ಹಮ್ಮಿಕೊಂಡಿದ್ದು ಪಕ್ಷದ ಮುಖಂಡ ಗೌರವ್ ಭಾಟಿಯಾ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT