ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ನಗರದಲ್ಲಿ ‘ನೈಟ್‌ ಲೈಫ್‌’ಗೆ ಉತ್ತೇಜನ ಬೇಕು:ಮಂಜುನಾಥ ಭಂಡಾರಿ

ವಿಧಾನ ‍ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರತಿಪಾದನೆ
Published : 4 ಸೆಪ್ಟೆಂಬರ್ 2024, 15:56 IST
Last Updated : 4 ಸೆಪ್ಟೆಂಬರ್ 2024, 15:56 IST
ಫಾಲೋ ಮಾಡಿ
Comments

ಮಂಗಳೂರು: ‘ನಗರದಲ್ಲಿ ‘ನೈಟ್‌ ಲೈಫ್‌’ ಪರಿಕಲ್ಪನೆಯೇ ಇಲ್ಲ. ವಿದ್ಯಾರ್ಥಿಗಳು ವಿದ್ಯಾರ್ಥಿನಿಯರ ಜೊತೆ ಮಾತನಾಡುವುದಕ್ಕೂ ಅವಕಾಶ ಇಲ್ಲದ ಸ್ಥಿತಿ ಇಲ್ಲಿದೆ. ಇದರಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಉನ್ನತ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಬೇರೆ ಪ್ರದೇಶಗಳ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಇಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳ ಕಚೇರಿಗಳಲ್ಲಿ ಕೆಲಸ ನಿರ್ವಹಿಸಲು ಹಿಂಜರಿಯುವ ಸ್ಥಿತಿ ಇದೆ’ ಎಂದು ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಇಲ್ಲಿ ಬುಧವಾರ ಏರ್ಪಡಿಸಿದ್ದ ಸಂವಾದ ದಲ್ಲಿ ಅವರು ಮಾತನಾಡಿದರು.

‘ಮುಡಿಪುವಿನಲ್ಲಿ ಇನ್ಫೋಸಿಸ್‌ ಕಚೇರಿ ಇದ್ದರೂ ಅಲ್ಲಿ ಕಾರ್ಯನಿರ್ವಹಿಸಲು ಸಂಸ್ಥೆಯ ಸಿಬ್ಬಂದಿ ಸಿದ್ಧರಿಲ್ಲ.  ಐ.ಟಿ ಕಂಪನಿ ಸ್ಥಾಪಿಸಲು ವಿಪ್ರೊ ಸಂಸ್ಥೆಗೆ ನಗರದಲ್ಲಿ ಜಾಗ ಒದಗಿಸಲಾಗಿದೆ. ಆದರೆ ಇಲ್ಲಿ ಕಾರ್ಯನಿರ್ವಹಿಸಲು ಉದ್ಯೋಗಿಗಳು ಆಸಕ್ತಿ ವಹಿಸುತ್ತಿಲ್ಲ ಎಂಬ ಕಾರಣಕ್ಕೆ ಅವರು ಇನ್ನೂ ಇಲ್ಲಿ ಕಚೇರಿಯನ್ನು ಆರಂಭಿಸಿಲ್ಲ. ಇಲ್ಲಿ ರಾತ್ರಿ 9ರ ಬಳಿಕ ಐಸ್‌ಕ್ರೀಂ ಪಾರ್ಲರ್‌ಗಳೂ ಬಾಗಿಲು ಮುಚ್ಚುತ್ತವೆ. ನೈಟ್‌ ಲೈಫ್‌ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ಈ ಕಾರಣದಿಂದಾಗಿಯೇ ಉನ್ನತ ಶಿಕ್ಷಣ ಸಂಸ್ಥೆಗಳ ದಾಖಲಾತಿಯೂ ಕಡಿಮೆ ಆಗುತ್ತಿದೆ’ ಎಂದರು.

’ನೈಟ್ ಲೈಫ್‌ ಎಂದರೆ ಕೇವಲ ಪಬ್‌, ಬಾರ್‌ ಅಷ್ಟೇ ಅಲ್ಲ. ಅದಕ್ಕೆ ಹೊರತಾಗಿಯೂ ಅನೇಕ ಚಟುವಟಿಕೆಗಳಿಗೆ ಅವಕಾಶವಿದೆ. ರಾತ್ರಿ ವೇಳೆ ಕಾರ್ಯಾಚರಿಸುವ ಫುಡ್‌ ಸ್ಟ್ರೀಟ್‌ಗಳನ್ನು ಹಲವರು ಇಷ್ಟಪಡುತ್ತಾರೆ’ ಎಂದರು.

‘ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶವಿದ್ದರೂ ಬಳಕೆಯಾಗುತ್ತಿಲ್ಲ. ಕಂಬಳ ಮತ್ತಿತರ ಚಟುವಟಿಕೆಗಳ ಮೂಲಕ ಇಲ್ಲಿನ ಸಂಸ್ಕೃತಿಯನ್ನು ಹೊರಗಿನವರಿಗೆ ಪರಿಚಯಿಸುವ ಕೆಲಸ ಆಗಬೇಕಿದೆ. ಪಿಲಿಕುಳ ಉತ್ಸವ, ಮಂಗಳೂರು ಮ್ಯಾರಥಾನ್‌ನಂತಹ ಕಾರ್ಯಕ್ರಮಗಳಿಗೆ ಮತ್ತೆ ಕಾಯಕಲ್ಪ ನೀಡಲು ಸರ್ಕಾರ ಕ್ರಮ ವಹಿಸಲಿದೆ’ ಎಂದರು.

‘ದ.ಕ ಜಿಲ್ಲೆಯಲ್ಲಿ ಪುತ್ತೂರಿನಲ್ಲಿ, ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು‘ ಎಂದರು. 

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ರೈ, ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಭಾಗವಹಿಸಿದ್ದರು.

‘ದ.ಕ: ಪ್ರವಾಸೋದ್ಯಮ ಅಭಿವೃದ್ಧಿಗಿರುವ ಅವಕಾಶ ಬಳಕೆಯಾಗುತ್ತಿಲ್ಲ’ ‘ಇಲ್ಲಿನ ಸಂಸ್ಕೃತಿಯನ್ನು ಹೊರಗಿನವರಿಗೆ ಪರಿಚಯಿಸುವ ಕೆಲವಾಗಬೇಕಿದೆ’

‘ಜಪಾನ್‌ ಕೊರಿಯಾ ಜೊತೆ ಅವಳಿ ನಗರ ಅಭಿವೃದ್ಧಿ’

‘ಜಪಾನ್‌ ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ಇಲ್ಲಿನ ಅನೇಕರು ಉದ್ಯೋಗದಲ್ಲಿದ್ದಾರೆ. ಇಲ್ಲಿನ ಎಂಜಿನಿಯರ್‌ಗಳಿಗೆ ಅಲ್ಲಿ ಉದ್ಯೋಗಾವಕಾಶಗಳು ಹೆಚ್ಚು ಇವೆ. ನಮ್ಮ ನಗರದಷ್ಟೇ ಜನಸಂಖ್ಯೆ ಹೊಂದಿರುವ ಅಲ್ಲಿನ  ನಗರಗಳನ್ನು ಗುರುತಿಸಿ ‘ಅವಳಿ ನಗರ’ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ  ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ.  ಸಾಂಸ್ಕೃತಿಕ ವಿನಿಮಯ ಆಡಳಿತ ಮತ್ತು ಅಭಿವೃದ್ಧಿಯ ಉತ್ತಮ ಪರಿಕಲ್ಪನೆಗಳನ್ನು ಹಂಚಿಕೊಳ್ಳಲು ಇದು ನೆರವಾಗಲಿದೆ’ ಎಂದು ಮಂಜುನಾಥ ಭಂಡಾರಿ ತಿಳಿಸಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT