ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ನಿಪಾ: ಅ.7ರವರೆಗೂ ಕಟ್ಟೆಚ್ಚರ

Published 20 ಸೆಪ್ಟೆಂಬರ್ 2023, 16:52 IST
Last Updated 20 ಸೆಪ್ಟೆಂಬರ್ 2023, 16:52 IST
ಅಕ್ಷರ ಗಾತ್ರ

ಮಂಗಳೂರು: ಕೇರಳದಲ್ಲಿ ಆರು ಮಂದಿಯಲ್ಲಿ ನಿಪಾ ವೈರಾಣು ಸೋಂಕು ದೃಢಪಟ್ಟಿದ್ದರಿಂದ, ರಾಜ್ಯಕ್ಕೂ ಸೊಂಕು ಹರಡುವುದನ್ನು ತಡೆಯಲು ಗಡಿ ಜಿಲ್ಲೆಗಳಲ್ಲಿ ಅ.7ರ ವರೆಗೂ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ನಿಪಾ ಸೋಂಕು ಕೇರಳದಿಂದ ರಾಜ್ಯಕ್ಕೆ ವ್ಯಾಪಿಸದಂತೆ ಕ್ರಮವಹಿಸುವ ಸಲುವಾಗಿ ದಕ್ಷಿಣ ಕನ್ನಡ, ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಹಾಗೂ ಸರ್ವೇಕ್ಷಣಾಧಿಕಾರಿಗಳ ಜೊತೆ ಅವರು ಇಲ್ಲಿ ಬುಧವಾರ ಸಭೆ ನಡೆಸಿದರು.

‘ರಾಜ್ಯದಲ್ಲಿ ನಿಪಾ ಸೋಂಕಿಗೆ ಸಂಬಂಧಿಸಿದ ಒಂದು ಪ್ರಕರಣವೂ ಕಾಣಿಸಿಕೊಳ್ಳದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ನಿಪಾ ಸೋಂಕಿತರಲ್ಲಿ ಸಾವಿನ ಪ್ರಮಾಣ ಶೇ 70ರಷ್ಟಿದೆ. ಹಾಗಾಗಿ ರೋಗ ಹರಡುವುದು ತಡೆಯಲು ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ವಹಿಸಿದೆ. ಈ ರೋಗದ ಬಗ್ಗೆ ಜನ ಆತಂಕ ಬೇಡ.
ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ‘ಕೇರಳದಲ್ಲಿ ಸೆ.15ರ ಬಳಿಕ ನಿಪಾ ಸೋಂಕಿಗೆ ಸಂಬಂಧಿಸಿ ಹೊಸ ಪ್ರಕರಣ ವರದಿಯಾಗಿಲ್ಲ. ಸೋಂಕು ಹರಡುವ ಸಾಧ್ಯತೆ ಗರಿಷ್ಠ 21 ದಿನಗಳವರೆಗೆ ಇರುತ್ತದೆ. ಹಾಗಾಗಿ ಅ.7ರವರೆಗೂ ಗಡಿಗಳಲ್ಲಿ ತಪಾಸಣೆ ಹಾಗೂ ಗಡಿ ಜಿಲ್ಲೆಗಳಲ್ಲಿ ನಡೆಸುತ್ತಿರುವ ಜ್ವರ ಸಮೀಕ್ಷೆ ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಲಿದ್ದೇವೆ. ಮೈಸೂರು ಜಿಲ್ಲೆಯಲ್ಲಿ 4, ದಕ್ಷಿಣ ಕನ್ನಡದಲ್ಲಿ 12, ಕೊಡಗಿನಲ್ಲಿ 4 ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ 2 ಕಡೆ ಗಡಿಗಳಲ್ಲಿ ಕೇರಳದಿಂದ ರಾಜ್ಯಕ್ಕೆ ಬರುವವರ ದೇಹದ ಉಷ್ಣಾಂಶ ತಪಾಸಣೆ ನಡೆಸಲಾಗುತ್ತಿದೆ. ಸೋಂಕಿನ ಲಕ್ಷಣ ಕಂಡುಬಂದರೆ ಅಂತಹವರನ್ನು ಪ್ರತ್ಯೇಕಿಸಿ ಚಿಕಿತ್ಸೆ ಒದಗಿಸಲು ಕ್ರಮಕೈಗೊಳ್ಳಲಾಗಿದೆ’ ಎಂದರು.

‘ರಾಜ್ಯದಲ್ಲಿ ನಿಪಾ ಶಂಕಿತರಿಂದ ಸಂಗ್ರಹಿಸುವ ಗಂಟಲ ದ್ರವದ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ವಿಜ್ಞಾನ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿ ದೃಢಪಡಿಸಿಕೊಳ್ಳಬೇಕಿದೆ. ರಾಜ್ಯದಲ್ಲೇ ಇಂತಹ ಪ್ರಯೋಗಾಲಯ ಸ್ಥಾಪಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುತ್ತೇವೆ’ ಎಂದು ಅವರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT