ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: ಒಂದು ವಾರ ಲಾಕ್‌ಡೌನ್‌

ಗುರುವಾರದಿಂದ ನಿರ್ಬಂಧ ಜಾರಿಗೆ ಜಿಲ್ಲಾಡಳಿತ ನಿರ್ಧಾರ
Last Updated 13 ಜುಲೈ 2020, 18:04 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವ ಕಾರಣ ಇದೇ 16ರಿಂದ (ಗುರುವಾರ) ಒಂದು ವಾರ ಕಾಲ ಲಾಕ್‌ಡೌನ್‌ ಜಾರಿಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನಡೆಸಿದ ವಿಡಿಯೊ ಸಂವಾದದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಪಾಲ್ಗೊಂಡಿದ್ದರು. ಬಳಿಕ ಮತ್ತೊಂದು ಸುತ್ತಿನ ಚರ್ಚೆ ನಡೆಸಿ, ಲಾಕ್‌ಡೌನ್‌ ಜಾರಿಗೊಳಿಸುವ ನಿರ್ಧಾರ ಕೈಗೊಂಡರು.

ವಿಡಿಯೊ ಹೇಳಿಕೆ ಮೂಲಕ ನಿರ್ಧಾರ ಪ್ರಕಟಿಸಿದ ಉಸ್ತುವಾರಿ ಸಚಿವರು, ‘ಕೋವಿಡ್‌ ಸೋಂಕು ನಿಯಂತ್ರಿಸಲು ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸಬೇಕೆಂಬ ಅಭಿಪ್ರಾಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ವ್ಯಕ್ತವಾಗಿದೆ. ಈ ಕಾರಣದಿಂದ ಇದೇ 16ರಿಂದ ಒಂದು ವಾರ ಲಾಕ್‌ಡೌನ್‌ ಜಾರಿಗೊಳಿಸಲಾಗುವುದು’ ಎಂದು ತಿಳಿಸಿದರು.

ಅಗತ್ಯ ವಸ್ತುಗಳ ಖರೀದಿಗೆ ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ದಿನಸಿ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳನ್ನು ಖರೀದಿಸಿ, ದಾಸ್ತಾನು ಮಾಡಿಕೊಳ್ಳಬೇಕು. ಸಂಪೂರ್ಣ ಲಾಕ್‌ಡೌನ್‌ ಜಾರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಚರ್ಚಿಸಿ ಅಗತ್ಯವಿದ್ದಲ್ಲಿ ಸ್ಥಳೀಯವಾಗಿ ಲಾಕ್‌ಡೌನ್‌ ಜಾರಿಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ವಿಡಿಯೊ ಸಂವಾದದ ಬಳಿಕ ಸೂಚನೆ ನೀಡಿದ್ದರು. ಅದರಂತೆ ಸಭೆ ನಡೆಸಿದ ಸಚಿವರು, ಸಂಸದರು ಮತ್ತು ಜಿಲ್ಲಾಧಿಕಾರಿ ಏಳು ದಿನಗಳ ಲಾಕ್‌ಡೌನ್‌ ಜಾರಿಗೆ ನಿರ್ಧರಿಸಿದರು.

ಒಂದು ಹಂತದಲ್ಲಿ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಪ್ರಸರಣ ತುಸು ನಿಯಂತ್ರಣಕ್ಕೆ ಬಂದಿತ್ತು. ಕೆಲವು ದಿನಗಳಿಂದ ಮತ್ತೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರಗತಿಯ ಏರಿಕೆ ಕಂಡುಬರುತ್ತಿದೆ. ಸಂಪರ್ಕ ಪತ್ತೆಯಾಗದ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಈ ಎಲ್ಲ ಅಂಶಗಳನ್ನು ಆಧರಿಸಿ ಲಾಕ್‌ಡೌನ್‌ ಜಾರಿಗೆ ನಿರ್ಧರಿಸಲಾಗಿದೆ.

ಖರೀದಿಗೆ ಮುಗಿಬಿದ್ದ ಜನ

ಬೆಂಗಳೂರು ನಗರದಲ್ಲಿ ಮಂಗಳವಾರದಿಂದಲೇ ಲಾಕ್‌ಡೌನ್‌ ಜಾರಿಯಾಗುತ್ತಿದೆ. ಸೋಮವಾರ ಮುಖ್ಯಮಂತ್ರಿಯವರು 12 ಜಿಲ್ಲೆಗಳ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಜೊತೆ ವಿಡಿಯೊ ಸಂವಾದ ಕೈಗೊಂಡಿದ್ದರು. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಂಗಳವಾರದಿಂದಲೇ ಲಾಕ್‌ಡೌನ್‌ ಜಾರಿಯಾಗಬಹುದು ಎಂಬ ಆತಂಕ ಜನರಲ್ಲಿ ಮನೆಮಾಡಿತ್ತು. ಪರಿಣಾಮವಾಗಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೂ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.

ದಿನಸಿ ಅಂಗಡಿಗಳು, ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆಗಳು, ಮೀನು, ಮಾಂಸದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು. ಮದ್ಯದಂಗಡಿಗಳಲ್ಲಿ ಬೆಳಿಗ್ಗೆಯಿಂದಲೇ ಹೆಚ್ಚಿನ ಗ್ರಾಹಕರು ಇದ್ದರು. ಗುರುವಾರದಿಂದ ಲಾಕ್‌ಡೌನ್‌ ಜಾರಿಯ ಘೋಷಣೆ ಹೊರಬಿದ್ದ ಬಳಿಕ ಮತ್ತೊಮ್ಮೆ ಜನರು ಮದ್ಯ ಖರೀದಿಗೆ ಮುಗಿಬಿದ್ದಿದ್ದರು.

ಇಂದು ಮಾರ್ಗಸೂಚಿ ಪ್ರಕಟ

ಏಳು ದಿನಗಳ ಲಾಕ್‌ಡೌನ್‌ ಜಾರಿಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೋಮವಾರ ರಾತ್ರಿ ಮಾರ್ಗಸೂಚಿಗಳನ್ನು ಅಂತಿಮಗೊಳಿಸಿದೆ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರು ಈ ಸಂಬಂಧ ಮಂಗಳವಾರ ಅಧಿಕೃತ ಆದೇಶ ಹೊರಡಿಸಲಿದ್ದಾರೆ.

ಏಳು ದಿನಗಳ ನಿರ್ಬಂಧದ ಅವಧಿಯಲ್ಲಿ ದಿನಸಿ, ಹಾಲು, ಹಣ್ಣು, ತರಕಾರಿ, ಮೀನು, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ನಿತ್ಯವೂ ಕೆಲ ಸಮಯ ಕಾಲಾವಕಾಶ ನೀಡುವ ಸಾಧ್ಯತೆ ಇದೆ. ಎಂಆರ್‌ಪಿ ದರದ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೂ ಅವಕಾಶ ನೀಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT