ಶುಕ್ರವಾರ, ಮಾರ್ಚ್ 31, 2023
32 °C
ಪಟ್ಲ ಫೌಂಡೇಷನ್ ಕಾರ್ಯಕ್ಕೆ ಶ್ಲಾಘನೆ

ನಲಿಕೆ ಕಲಾವಿದರಿಗೆ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ದೈವದ ಕೆಲಸ ಮಾಡುವವರು, ಪಾತ್ರಿಗಳನ್ನು ಯಾವಾಗಲೂ ಪೂಜ್ಯ ಭಾವನೆಯಿಂದ ನೋಡಲಾಗುತ್ತದೆ. ಅವರು ಕಷ್ಟ ಎಂದು ಹೇಳಿಕೊಳ್ಳುವ ಮೊದಲೇ ನಾವು ಅವರನ್ನು ಗುರುತಿಸಿ ಬೇಕಾದ ಸೌಲಭ್ಯವನ್ನು ಒದಗಿಸಲು ಮುಂದಾಗಬೇಕು’ ಎಂದು ಮಂಗಳೂರು ಕಮಿಷನರೇಟ್‌ನ ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮನವಿಗೆ ಸ್ಪಂದಿಸಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಕಾಡೆಮಿಯ ತುಳು ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಲಿಕೆ ಹಾಗೂ ಇತರ ಕಲಾವಿದರ ಕುಟುಂಬಗಳಿಗೆ ಆಹಾರ ಸಾಮಗ್ರಿಯ ಕಿಟ್ ವಿತರಿಸಿ ಅವರು ಮಾತನಾಡಿದರು.

ತುಳು ನಾಡು, ತುಳು ಭಾಷೆ, ಸಂಸ್ಕೃತಿ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವೃತ್ತಿಯಲ್ಲಿ ಆಯಾ ಪ್ರದೇಶದಲ್ಲಿ ಇರುವ ಉತ್ತಮ ಮೌಲ್ಯಯುತ ಸಂಸ್ಕಾರ, ಆಚಾರ ವಿಚಾರ ಕಲಿಯಲು ಆಸಕ್ತಿ ವಹಿಸಿದ್ದೇನೆ’ ಎಂದು ನುಡಿದರು.

ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ‘ಕಳೆದ ವರ್ಷ ಹಾಗೂ ಈ ವರ್ಷ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅರ್ಹರಿಗೆ ದಿನಸಿ ಕಿಟ್ ವಿತರಣೆ ಮಾಡಲಾಗಿದೆ. ಪಟ್ಲ ಫೌಂಡೇಷನ್ ಟ್ರಸ್ಟ್ ವತಿಯಿಂದ ಕಲಾವಿದರಿಗೆ ನೆರವು ನೀಡುವ ಕಾರ್ಯ ನಡೆಸುತ್ತಿದ್ದೇವೆ’ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲಸಾರ್ ಮಾತನಾಡಿ, ‘ಸಮಾಜದಲ್ಲಿ ಸ್ವಾರ್ಥ ಚಿಂತನೆ ಹೊಂದಿರದೆ, ಇತರರಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಂಡಾಗ ಸಮಾಜ ಸದಾ ನಮ್ಮನ್ನು ನೆನಪಿಸುತ್ತದೆ. ಸಮಾಜಮುಖಿ ಚಟುವಟಿಕೆ ನಡೆಸುತ್ತಿರುವ ಫೌಂಡೇಷನ್‌ ಸತೀಶ್ ಶೆಟ್ಟಿ ಪಟ್ಲ ಹಾಗೂ ಅವರ ತಂಡ ಅಭಿನಂದನೆಗೆ ಅರ್ಹ’ ಎಂದರು.

ಪಟ್ಲ ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಉಪಾಧ್ಯಕ್ಷ ಡಾ. ಮನು ರಾವ್, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಅಕಾಡೆಮಿ ಸದಸ್ಯರಾದ ಶಶಿಧರ ಶೆಟ್ಟಿ, ಚೇತಕ್ ಪೂಜಾರಿ, ಲೀಲಾಕ್ಷ ಕರ್ಕೇರ ಭಾಗವಹಿಸಿದ್ದರು. ಅಕಾಡೆಮಿ ಸದಸ್ಯ ನಾಗೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.