ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು |ಹಲಸು ಹಬ್ಬ; ಖಾದ್ಯಲೋಕ ಅನಾವರಣ

Published 3 ಜೂನ್ 2023, 13:47 IST
Last Updated 3 ಜೂನ್ 2023, 13:47 IST
ಅಕ್ಷರ ಗಾತ್ರ

ಮಂಗಳೂರು: ತೆರೆದಿಟ್ಟ ಕೆಂಪು, ಹಳದಿ ಬಣ್ಣದ ಸೊಳೆಗಳನ್ನು ತಿನ್ನಲು ಹಲಸು ಪ್ರಿಯರು ಮುಗಿ ಬೀಳುತ್ತಿದ್ದರೆ ಇಡೀ ಹಣ್ಣನ್ನು ಹೆಗಲ ಮೇಲೆ ಇರಿಸಿಕೊಂಡು ಹೋಗುವ ನೋಟ ಸಾಮಾನ್ಯವಾಗಿತ್ತು. ಹಲಸಿನ ಖಾದ್ಯಗಳನ್ನು ಸವಿಯುತ್ತ ಖುಷಿಪಟ್ಟವರು ಸಾವಯವ ಕೃಷಿಯ ಲೋಕದಲ್ಲಿ ವಿಹರಿಸಿದರು.

ನಗರದ ಸಾವಯವ ಕೃಷಿಕ–ಗ್ರಾಹಕ ಬಳಗ ಶರವು ದೇವಸ್ಥಾನದ ಬಳಿಯ‌ ಬಾಳಂಭಟ್ ಹಾಲ್‌ನಲ್ಲಿ ಆಯೋಜಿಸಿರುವ 6ನೇ ವರ್ಷದ ಹಲಸು ಹಬ್ಬದಲ್ಲಿ ಹಲಸಿನ ವೈವಿಧ್ಯಮಯ ಜಗತ್ತು ಅನಾವರಣಗೊಂಡಿದೆ.

ಹಲಸಿನ ಕಾಯಿ ಮತ್ತು ಗಿಡಗಳನ್ನು ಇಟ್ಟಿರುವ ಪ್ರವೇಶದ್ವಾರವನ್ನು ದಾಟಿ ಮುಂದೆ ಹೋದರೆ ರುದ್ರಾಕ್ಷಿ, ಚಂದ್ರ ಹಲಸು, ಬಕ್ಕೆ ಹಲಸು, ಬಂಗಾರದ ಬಣ್ಣದ ಹಲಸು ಮುಂತಾದ ತಳಿಗಳ ಹಣ್ಣುಗಳು ಕೈಬೀಸಿ ಕರೆಯುತ್ತವೆ. ಹಲಸಿನ ಐಸ್ ಕ್ರೀಂ, ಚಿಪ್ಸ್, ಹಪ್ಪಳ, ಮಿಲ್ಕ್ ಶೇಕ್, ಮಾಂಬಳ ಇತ್ಯಾದಿ ಇರುವ ಮೇಳದಲ್ಲಿ ಹೋಳಿಗೆಯ ಪ್ರಾತ್ಯಕ್ಷಿಕೆಯೂ ಇದೆ. ಹಲ್ವ, ಪಾಯಸ ಸೇರಿದಂತೆ ವೈವಿಧ್ಯಮಯ ಖಾದ್ಯಗಳು ಇಲ್ಲಿದ್ದು ಬೀಜದ ವಡೆ, ಉಪ್ಪಿನ ಸೊಳೆ (ಉಪ್ಪಡ್ ಪಚ್ಚಿಲ್) ಮುಂತಾದವೂ ಇವೆ.

ಸಾವಯವ ಕೃಷಿ ಪದ್ಧತಿಯಲ್ಲಿ ತಯಾರಿಸಿದ ತರಕಾರಿ, ಹಣ್ಣುಗಳ ಬೀಜ, ಜೇನುತುಪ್ಪ, ಗೊಬ್ಬರ, ಪ್ರಕೃತಿದತ್ತ ಉತ್ಪನ್ನಗಳಿಂದ ತಯಾರಿಸಿದ ಸೋಪ್, ಹೂವಿನ ಕುಂಡಗಳು, ಸಾಂಪ್ರದಾಯಿಕ ಶೈಲಿಯ ಸೌಟು ಮುಂತಾದವುಗಳು ಕೂಡ ಇವೆ. ಕೈತೋಟ ನಿರ್ಮಿಸಲು ಬಯಸುವವರಿಗೆ ಬೇಕಾದ ಸಲಕರಣೆಗಳು ಸೇರಿದಂತೆ ಅಗತ್ಯ ವಸ್ತುಗಳು, ಮಾಹಿತಿ ಪುಸ್ತಕಗಳು ಕೂಡ ಇವೆ.

10 ವರ್ಷ ಪೂರೈಸಿರುವ ಸಾವಯವ ಕೃಷಿಕ–ಗ್ರಾಹಕ ಬಳಗದ ಆರನೇ ಹಲಸಿನ ಮೇಳ ಇದು. ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಪರಿಚಯಿಸುತ್ತಿರುವುದು ಈ ಬಾರಿಯ ವೈಶಿಷ್ಟ್ಯ. ರಾಜ್ಯದ ವಿವಿಧ ಕಡೆಗಳಿಂದ ವ್ಯಾಪಾರಿಗಳು ಇಲ್ಲಿಗೆ ಬಂದಿದ್ದು ಗುಲ್ಬರ್ಗ ಮತ್ತು ಧಾರವಾಡದಿಂದ ಬಂದವರೂ ಇದ್ದಾರೆ ಎಂದು ಬಳಗದ ಸಂಘಟನಾ ಕಾರ್ಯದರ್ಶಿ ಕೆ.ರತ್ನಾಕರ ಕುಳಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇಂದು ಸಾವಯವ ಸಂತೆಯೂ ಇದೆ

ಎರಡು ದಿನಗಳ ಹಲಸು ಹಬ್ಬ ಭಾನುವಾರ ಸಂಜೆ 7 ಗಂಟೆಗೆ ಮುಕ್ತಾಯಗೊಳ್ಳಲಿದೆ. ಪ್ರತಿ ಭಾನುವಾರ ಹಂಪನಕಟ್ಟೆಯ ರಸ್ತೆ ಬದಿಯಲ್ಲಿ ನಡೆಯುವ ಸಾವಯವ ಸಂತೆಯಲ್ಲಿ ಪಾಲ್ಗೊಳ್ಳುವ ರೈತರು ಈ ವಾರ ಹಲಸು ಮೇಳದಲ್ಲಿ ವ್ಯಾಪಾರ ನಡೆಸಲಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ಸಾವಯವ ಸಂತೆ ತೆರೆದಿರುತ್ತದೆ ಎಂದು ರತ್ನಾಕರ ಕುಳಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT