ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಗಾಯದ ಮೇಲೆ ತೈಲ ಬೆಲೆಯೇರಿಕೆ ಬರೆ: ಸಂಷ್ಟಕ್ಕೆ ಸಿಲುಕಿದ ಸಾರಿಗೆ ವಲಯ

ಮಂಗಳೂರು
Last Updated 24 ಜೂನ್ 2020, 3:52 IST
ಅಕ್ಷರ ಗಾತ್ರ

ಮಂಗಳೂರು: ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿದ್ದ ಸಾರಿಗೆ ವಲಯಯವು ತೈಲ ಬೆಲೆಯೇರಿಕೆಯಿಂದ ತೀವ್ರ ಸಂಕಷ್ಟಕ್ಕೀಡಾಗಿದೆ.

ಜಿಲ್ಲೆಯ ಸಾರಿಗೆಯಲ್ಲಿ ಬಸ್, ಮ್ಯಾಕ್ಸಿ ಕ್ಯಾಬ್‌, ಟ್ಯಾಕ್ಸಿ, ಆಟೊಗಳು ಪ್ರಮುಖವಾಗಿವೆ. ಲಾಕ್‌ಡೌನ್‌ನಲ್ಲಿ ಸ್ತಬ್ಧಗೊಂಡಿದ್ದ ಸಾರಿಗೆ ಸಂಚಾರವು ತಿಂಗಳಿಂದ ಆರಂಭಗೊಂಡಿದೆ. ಆದರೆ, ಜೂನ್‌ 1ರ ಬಳಿಕ ಲೀಟರ್‌ ಡೀಸೆಲ್‌ಗೆ ₹ 9.55 ಹಾಗೂ ಪೆಟ್ರೋಲ್‌ಗೆ ₹8.81 ಏರಿಕೆಯಾಗಿದ್ದು, ಸಾರಿಗೆಯನ್ನೇ ಜೀವನೋಪಾಯಕ್ಕೆ ನಂಬಿದ ಜಿಲ್ಲೆಯ ಲಕ್ಷಕ್ಕೂ ಅಧಿಕ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಸ್: ‘ಮಂಗಳೂರು ನಗರದಲ್ಲೇ ಸುಮಾರು 325 ಖಾಸಗಿ ಬಸ್‌ಗಳಿದ್ದು, ಜೂನ್‌ 1ರಿಂದ 160ರಷ್ಟು ರಸ್ತೆಗಿಳಿದಿವೆ. ದಿನಕ್ಕೆ ಸರಾಸರಿ 8 ಟ್ರಿಪ್ ಮಾಡುತ್ತಿದ್ದ ಪ್ರತಿ ಬಸ್‌, ಈಗ 4 ಟ್ರಿಪ್ ಪೂರೈಸುವುದೇ ಕಷ್ಟದಲ್ಲಿ. ಅದರಲ್ಲೂ ಸೀಟಿನ ಮಿತಿ ಇದೆ. ಬೆಳಿಗ್ಗೆ ಮತ್ತು ಸಂಜೆ ಹೊರತುಪಡಿಸಿ, ಉಳಿದಂತೆ ಖಾಲಿ ಓಡಿಸುತ್ತಿದ್ದೇವೆ’ ಎನ್ನುತ್ತಾರೆ ಬಸ್‌ ಮಾಲೀಕರು.

‘ಒಂದು ಬಸ್‌ಗೆ ಪ್ರತಿನಿತ್ಯ 65 ಲೀಟರ್ ನಷ್ಟು ಡೀಸೆಲ್ ಬೇಕಾಗುತ್ತದೆ. ದರ ಏರಿಕೆಯಿಂದ ದಿನಕ್ಕೆ ₹620 ನಷ್ಟ ಹೆಚ್ಚಾಗಿದೆ. ಹೀಗಾಗಿ, ಉಳಿದ ಖಾಸಗಿ ಬಸ್‌ಗಳು ರಸ್ತೆಗಿಳಿಯುವುದೇ ಅನುಮಾನ. ಸರ್ಕಾರ ತೈಲ ಬೆಲೆ ಇಳಿಕೆ ಹಾಗೂ ತೆರಿಗೆ ವಿನಾಯಿತಿ ನೀಡಿದರಷ್ಟೇ ‘ಸಾರಿಗೆ’ ಉಳಿಯಬಹುದು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ನೋವು ತೋಡಿಕೊಂಡರು.

ಟ್ಯಾಕ್ಸಿ–ಮ್ಯಾಕ್ಸಿ ಕ್ಯಾಬ್

‘ಜಿಲ್ಲೆಯಲ್ಲಿ ಸುಮಾರು ಐದು ಸಾವಿರದಷ್ಟು ಮ್ಯಾಕ್ಸಿಕ್ಯಾಬ್–ಟ್ಯಾಕ್ಸಿಗಳಿವೆ. ಲಾಕ್‌ಡೌನ್‌ ಪೂರ್ವದಲ್ಲೇ ನಮ್ಮ ಆದಾಯ ಕುಸಿದಿತ್ತು. ಲಾಕ್‌ಡೌನ್ ಸಂದರ್ಭ ಮನೆ ಸೇರಿದ್ದೆವು. ಈಗ 500ರಷ್ಟು ಟ್ಯಾಕ್ಸಿಗಳು ಮಾತ್ರ ರಸ್ತೆಗಿಳಿದಿವೆ. ಡೀಸೆಲ್ ಬೆಲೆ ಏರಿಕೆಯಿಂದ ಬಾಡಿಗೆಯೂ ಇಲ್ಲ, ಬದುಕೂ ಇಲ್ಲದಂತಾಗಿದೆ. ಇತ್ತ ಸರ್ಕಾರದ ಪರಿಹಾರವು ಶೇ 1ರಷ್ಟು ಟ್ಯಾಕ್ಸಿ ಚಾಲಕರಿಗೂ ಸಿಕ್ಕಿಲ್ಲ’ ಎಂದು ಟ್ಯಾಕ್ಸಿ ಚಾಲಕ ಮಾಲೀಕರು ಪರಿಸ್ಥಿತಿ ತೆರೆದಿಟ್ಟರು.

ಓಡಾಡದ ಆಟೊ...

ಜಿಲ್ಲೆಯಲ್ಲಿ ಸುಮಾರು 20 ಸಾವಿರ ರಿಕ್ಷಾಗಳು ಇವೆ. ನಗರದಲ್ಲೇ 7,500 ಇವೆ. ಈ ಹಿಂದೆ ದಿನಕ್ಕೆ ₹800ರಷ್ಟು ಬಾಡಿಗೆ ಸಿಗುತ್ತಿದ್ದರೆ, ಈಗ ₹ 350 ಸಿಕ್ಕರೆ ಸಂಭ್ರಮ. ಈಚಿನ ವರ್ಷಗಳಲ್ಲಿ ವಿಮಾ ದರವನ್ನೂ ಏರಿಕೆ ಮಾಡಿದ್ದಾರೆ. ಸದ್ಯ ಆಟೊಗ್ಯಾಸ್ ದರ ಏರಿಕೆಯಾಗಿಲ್ಲ. ಆದರೆ, ಗ್ರಾಮೀಣ ಭಾಗದಲ್ಲಿ ಪೆಟ್ರೋಲ್ ಹಾಕಿ ಓಡಿಸುವ ಚಾಲಕರ ಪಾಡು ಹೇಳತೀರದು. ಸರ್ಕಾರದ ಪರಿಹಾರವು ಶೇ 2ರಷ್ಟು ಚಾಲಕರಿಗೂ ಬಂದಿಲ್ಲ’ ಎನ್ನುತ್ತಾರೆ ರಿಕ್ಷಾ ಚಾಲಕರ ಮಾಲೀಕರ ಸಂಘದ ಮುಖಂಡ ಕೃಷ್ಣಪ್ಪ ಗೌಡ.

ಕೋವಿಡ್‌ ಸೇವೆ: 4 ತಿಂಗಳ ಬಾಡಿಗೆಯೇ ಬಂದಿಲ್ಲ!

‘ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಜಿಲ್ಲೆಯ 300ರಷ್ಟು ಟ್ಯಾಕ್ಸಿ ಚಾಲಕರು ಕ್ವಾರಂಟೈನ್, ಸೀಲ್‌ಡೌನ್, ಜಾಗೃತಿ, ಆಸ್ಪತ್ರೆ ಸೇರಿದಂತೆ ವಿವಿಧೆಡೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳೊಂದಿಗೆ ಹಗಲು–ರಾತ್ರಿ ಎನ್ನದೇ ಅಹರ್ನಶಿ ದುಡಿದಿದ್ದರು. ಖುದ್ದು ಡೀಸೆಲ್ ಹಾಕಿಸಿ, ರಿಪೇರಿ ಮಾಡಿಕೊಂಡು ಹೋಗಿದ್ದರು. ಆದರೆ, ಅವರ ನಾಲ್ಕು ತಿಂಗಳ ಬಾಡಿಗೆಯೇ ಇನ್ನೂ ಬಂದಿಲ್ಲ. ಅವರು ಬದುಕುವುದಾದರೂ ಹೇಗೆ?’ ಎಂದು ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕುಂಪಲ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT