ಸಕಾರಣವಿಲ್ಲದೇ ಅರ್ಜಿ ತಿರಸ್ಕರಿಸಬೇಡಿ: ನಳಿನ್‌ಕುಮಾರ್ ಕಟೀಲ್

ಮಂಗಳೂರು: ಸರ್ಕಾರದ ಯೋಜನೆಗಳ ಅಡಿ ಸಾಲ ಮಂಜೂರಾತಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳಿಗೆ ಹಲವಾರು ಸಮಸ್ಯೆಗಳಿದ್ದು, ಅದಕ್ಕೆ ಬ್ಯಾಂಕ್‌ಗಳು ಪರಿಹಾರ ಕಂಡುಕೊಳ್ಳಬೇಕು. ಮುದ್ರಾ ಸಾಲ ಯೋಜನೆ ಸೇರಿದಂತೆ ಸಾಲದ ಅರ್ಜಿಗಳನ್ನು ಸೂಕ್ತ ಕಾರಣಗಳಿಲ್ಲದೇ ಬ್ಯಾಂಕ್‌ಗಳು ತಿರಸ್ಕರಿಸಬಾರದು ಎಂದು ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಸಲಹೆ ನೀಡಿದರು.
ನಗರದ ಪುರಭವವನದಲ್ಲಿ ಮಂಗಳವಾರ ಪಿಎಂ ಸ್ವನಿಧಿ ಸಾಲ- ಉತ್ಸವ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗುವ ಸ್ವನಿಧಿ ಯೋಜನೆಯಡಿ ಆಧಾರ್ ಕಾರ್ಡ್ ಹಾಗೂ ಸ್ಥಳೀಯಾಡಳಿತದ ಶಿಫಾರಸು ಪತ್ರವಿದ್ದಲ್ಲಿ ಸಾಲ ಒದಗಿಸಬೇಕು. ಸಾಲ ನೀಡಲು ಸಾಧ್ಯವಾಗದ ಅರ್ಜಿಗಳಿಗೆ ಸಂಬಂಧಿಸಿ ಮನವರಿಕೆ ಮಾಡುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಜನಧನ್ ಹಾಗೂ ಮುದ್ರಾ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಈ ಯೋಜನೆಗಳು ಕೊರೊನಾ ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ಬಡವರು, ಕಿರು ಉದ್ದಿಮೆದಾರರಿಗೆ ಆರ್ಥಿಕ ಚೈತನ್ಯ ತುಂಬುವಲ್ಲಿ ಸಹಕಾರಿಯಾಗಿವೆ ಎಂದರು.
ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಕೋವಿಡ್‌ನಿಂದಾಗಿ ಜೀವನ ನಡೆಸಲು ಬೀದಿಬದಿ ವ್ಯಾಪಾರಿಗಳು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕುಗ್ಗಿ ಹೋಗಿರುವ ವ್ಯಾಪಾರಿಗಳಿಗೆ ಈ ಯೋಜನೆಯು ಆಶಾದಾಯಕವಾಗಿದೆ ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ‘ಸಂಸದ ನಳಿನ್‌ಕುಮಾರ್ ಜಾತಿ, ಮತ-ಧರ್ಮ, ಪಕ್ಷ ಎಂಬ ರಾಜಕಾರಣವನ್ನು ಬಿಟ್ಟು, ಎಲ್ಲ ಫಲಾನುಭವಿಗಳಿಗೆ ಕಿರು ಸಾಲ ಯೋಜನೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ’ ಎಂದರು.
ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಅಂಗಾರ ಎಸ್., ಡಾ.ಭರತ್ ಶೆಟ್ಟಿ ವೈ., ರಾಜೇಶ್ ನಾಯ್ಕ ಯು., ಶಾಸಕ ಸಂಜೀವ ಮಠಂದೂರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಮೇಯರ್ ದಿವಾಕರ ಪಾಂಡೇಶ್ವರ, ಬ್ಯಾಂಕ್‌ಗಳ ಮಹಾ ಪ್ರಬಂಧಕರಾದ ಬಿ.ಯೋಗೀಶ್ ಆಚಾರ್ಯ, ಸುಜಯ ಯು. ಶೆಟ್ಟಿ, ಎಂ.ವಿ. ಬಾಲಸುಬ್ರಮಣ್ಯಂ, ರಾಜೇಶ್ ಗುಪ್ತ, ಗೋಕುಲ್‌ದಾಸ್ ಪೈ ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.