ಪುತ್ತೂರು: ಅಕ್ಷಯ್ ಕಲ್ಲೇಗ ಹತ್ಯೆಯ ಹಿಂದೆ ಇರುವವರನ್ನು ಪತ್ತೆ ಮಾಡಿ ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಕಲಾವಿದ ಅಕ್ಷಯ್ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಅಕ್ಷಯ್ ಅವರ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಎರಡು ತಿಂಗಳಲ್ಲಿ ಪುತ್ತೂರಿನಲ್ಲಿ ಎರಡು ಹತ್ಯೆಗಳಾಗಿವೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಲ್ಲಿ, ರಾತ್ರಿ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಮಾಡಲು ಸರ್ಕಾರ ಪರೋಕ್ಷವಾಗಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಪೊಲೀಸ್ ವೈಫಲ್ಯ ಎನ್ನಲಾಗದು:
ಅಕ್ಷಯ್ ಕಲ್ಲೇಗ ಅವರ ಮನೆಗೆ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದ ಶಾಸಕ ಅಶೋಕ್‌ಕುಮಾರ್ ರೈ, ಅಕ್ಷಯ್ ಕಲ್ಲೇಗ ಕೊಲೆ ಅನಿರೀಕ್ಷಿತ. ವೈಮನಸ್ಸಿನ ಹಿನ್ನಲೆಯಲ್ಲಿ ಚಿಕ್ಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ಈ ಹತ್ಯೆ ನಡೆದಿದೆ ಎಂಬ ವಿಚಾರ ಗಮನಕ್ಕೆ ಬಂದಿದೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು. ಈ ಘಟನೆಯನ್ನು ಪೊಲೀಸ್ ವೈಫಲ್ಯ ಎನ್ನಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಪೊಲೀಸ್ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದರು.
ಕೊಲೆ ಮಾಡಿದವರು ಮೂರ್ನಾಲ್ಕು ತಿಂಗಳಲ್ಲೇ ಹೊರಬರುವ ವ್ಯವಸ್ಥೆ ಇಲ್ಲಿದೆ. ಹಾಗಾಗಿ ದೇಶದ ಕಾನೂನಿನಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂಬುವುದು ನನ್ನ ಅಭಿಪ್ರಾಯ. ರಾತ್ರಿ ಗುಂಪು ಸೇರುವಿಕೆ ಮತ್ತು ಪಾರ್ಟಿ ಮಾಡಲು ಮುಂದಿನ ದಿನಗಳಲ್ಲಿ ಕಡಿವಾಣ ಹಾಕಲಾಗುವುದು ಎಂದರು.
ಅಕ್ಷಯ್ ಕಲ್ಲೇಗ ಅವರ ಅಂತ್ಯ ಸಂಸ್ಕಾರ ಶೇವಿರೆಯಲ್ಲಿರುವ ಅವರ ಮನೆಯ ಬಳಿ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಸೇರಿದ್ದರು.
ಅಕ್ಷಯ್ ಅವರಿಗೆ ತಂದೆ, ತಾಯಿ, ಇಬ್ಬರು ಸಹೋದರರು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.