ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಭಾವುಕ ವಾತಾವರಣದಲ್ಲಿ ಹುತಾತ್ಮರ ಸ್ಮರಣೆ

ಪೊಲೀಸ್ ಸಿಬ್ಬಂದಿಯ ಸೌಲಭ್ಯಗಳು ಹೆಚ್ಚಬೇಕು; ಭದ್ರತೆಗೆ ಒತ್ತು ನಿಡಬೇಕು: ನ್ಯಾ.ಜೋಶಿ
Published 21 ಅಕ್ಟೋಬರ್ 2023, 13:04 IST
Last Updated 21 ಅಕ್ಟೋಬರ್ 2023, 13:04 IST
ಅಕ್ಷರ ಗಾತ್ರ

ಮಂಗಳೂರು: ಕುಶಾಲ ತೋಪುಗಳ ಸದ್ದು ಕಟ್ಟಡಗಳ ಗೋಡೆಗಳಿಂದ ಮಾರ್ದನಿಸಿತು. ಬ್ಯಾಂಡ್ ಮೇಳದವರ ಮೂಲಕ ಕೇಳಿಬಂದ ‘ಅಬೈಡ್ ವಿದ್ ಮಿ’ ಗೀತೆಯ ಭಾವ ಎಲ್ಲರ ಮನವನ್ನು ಕಾಡಿತು. ಸ್ಮಾರಕದ ಎದುರು ಇರಿಸಿದ ಪುಷ್ಪಗುಚ್ಛಗಳು ನೆನಪುಗಳ ಅಲೆಯನ್ನು ಎಬ್ಬಿಸಿದವು...

ನಗರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನದ ಅಂಗವಾಗಿ ಶನಿವಾರ ಬೆಳಿಗ್ಗೆ ನಡೆದ ‘ಸ್ಮರಣೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಜೀವ ಮತ್ತು ಆಸ್ತಿ, ರಾಜ್ಯ–ದೇಶದ ರಕ್ಷಣೆಗಾಗಿ ಪ್ರಾಣ ತೊರೆದ ಯೋಧರು ಮತ್ತು ಪೊಲೀಸ್ ಸಿಬ್ಬಂದಿಗೆ ಭಾವಪೂರ್ಣ ಗೌರವ ಸಲ್ಲಿಸಲಾಯಿತು.

ಹುತಾತ್ಮರ ಸ್ಮಾರಕದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ. ಜೋಶಿ ಅವರು ಮುಖ್ಯ ಅತಿಥಿಯಾಗಿದ್ದ ಕಾರ್ಯಕ್ರಮದಲ್ಲಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಚಂದ್ರಗುಪ್ತ, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮುಂತಾದವರು ಭಾಗವಹಿಸಿದ್ದರು.

ಸಿಬ್ಬಂದಿಯ ಪಹರೆಯ ನಡುವಿನ ಹುತಾತ್ಮ ಸ್ಮಾರಕದ ಮುಂದೆ ಪುಷ್ಪಗುಚ್ಛವನ್ನು ಇರಿಸಿದಾಗ ಪುಟಾಣಿಗಳು ಸೇರಿದಂತೆ ಎಲ್ಲರ ಕಣ್ಣಾಲಿಗಳು ಒದ್ದೆಯಾದವು. ಕುಶಾಲ ತೋಪು ಹಾರಿಸಿದ ನಂತರ ಮೌನ ಆಚರಣೆಯ ಸಂದರ್ಭದಲ್ಲೂ ಸೇರಿದ್ದ ಎಲ್ಲರೂ ಭಾವುಕರಾದರು.

ನುಡಿ ನಮನ ಸಲ್ಲಿಸಿದ ನ್ಯಾಯಾಧೀಶ ರವೀಂದ್ರ ಜೋಶಿ ‘ಸಮಾಜದಲ್ಲಿ ಎಲ್ಲದಕ್ಕೂ ಪೊಲೀಸರು ಮತ್ತು ಸೈನಿಕರು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಪೊಲೀಸರಿಗೆ ಕರ್ತವ್ಯ ನಿರ್ವಹಣೆಯ ಒತ್ತಡದಿಂದ ಕುಟುಂಬದ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪೊಲೀಸರಿಗೆ ಏನೇ ಸೌಲಭ್ಯಗಳು ಇದ್ದರೂ ಕಡಿಮೆಯೇ. ಈ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚು ಅನುಕೂಲಗಳು ಆಗಬೇಕು ಎಂದು ಆಶಿಸಿದರು.

‘ಪೊಲೀಸರು ಮತ್ತು ಯೋಧರ ಪ್ರಾಣ ತ್ಯಾಗ ಆಗುವುದನ್ನು ತಡೆಯಬೇಕು. ಅದಕ್ಕೆ ಇನ್ನಷ್ಟು ಕ್ರಮಗಳು ಆಗಬೇಕು. ಎಲ್ಲದರ ಹೊರತಾಗಿಯೂ ಸಮಾಜಕ್ಕಾಗಿ ಹುತಾತ್ಮರಾಗುವವರ ಬಗ್ಗೆ ಹೆಮ್ಮೆ ಪಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ಹುತಾತ್ಮರಾದವರು

ಸಿಪಿಐ ರವಿ ಉಕ್ಕುಂದ, ಎಎಸ್‌ಐ ಶಬ್ಬೀರ್ ಹುಸೇನ್‌, ಸುಭಾಷ್ ಮಡಿವಾಳ, ಜೈ ಶ್ರೀನಿವಾಸ್‌, ನಾಗರಾಜು ಎಂ., ಹೆಡ್‌ ಕಾನ್‌ಸ್ಟೆಬಲ್ ವೆಂಕಟೇಶ್, ಮಯೂರ್ ಚೌಹಾಣ್‌, ಕರೆಪ್ಪ, ಸಿದ್ಧೇಶ್ವರ ಎನ್‌., ಸಿಕಂದರ್ ನಾಟಿಕಾರ್‌, ಸುರೇಶ್ ಎನ್‌, ರಮೇಶ್ ಮಲ್ಲಪ್ಪ ಬೊಂಬ್ರಿ, ಶರಣಬಸಪ್ಪ, ಮಹೇಶ್, ನಿಂಗಪ್ಪ, ಬಿ.ಎನ್‌.ಗುಡ್ಡದ.

ಎಸ್‌ಪಿ ಸಿ.ಬಿ.ರಿಷ್ಯಂತ್ ಕರಾವಳಿ ಕಾವಲು ಪಡೆಯ ಕಮಾಂಡರ್ ಪಿ.ಕೆ ಮಿಶ್ರಾ ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್ ಅಗರವಾಲ್ ನ್ಯಾಯಾಧೀಶ ರವೀಂದ್ರ ಎಂ.ಜೋಶಿ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಹಾಗು ಸಿಸಿಎಫ್ ಕರಿಕಾಳನ್ ಗೌರವ ವಂದನೆ ಸ್ವೀಕರಿಸಿದರು

ಎಸ್‌ಪಿ ಸಿ.ಬಿ.ರಿಷ್ಯಂತ್ ಕರಾವಳಿ ಕಾವಲು ಪಡೆಯ ಕಮಾಂಡರ್ ಪಿ.ಕೆ ಮಿಶ್ರಾ ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್ ಅಗರವಾಲ್ ನ್ಯಾಯಾಧೀಶ ರವೀಂದ್ರ ಎಂ.ಜೋಶಿ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಹಾಗು ಸಿಸಿಎಫ್ ಕರಿಕಾಳನ್ ಗೌರವ ವಂದನೆ ಸ್ವೀಕರಿಸಿದರು

–ಪ್ರಜಾವಾಣಿ ಚಿತ್ರ

ಹುತಾತ್ಮರ ದಿನಾಚರಣೆಯ‌ಲ್ಲಿ ಭಾಗವಹಿಸಿದ್ದ ಮಕ್ಕಳನ್ನು ಸಿಬ್ಬಂದಿಯೊಬ್ಬರು ಮಾತನಾಡಿಸಿದರು

ಹುತಾತ್ಮರ ದಿನಾಚರಣೆಯ‌ಲ್ಲಿ ಭಾಗವಹಿಸಿದ್ದ ಮಕ್ಕಳನ್ನು ಸಿಬ್ಬಂದಿಯೊಬ್ಬರು ಮಾತನಾಡಿಸಿದರು

–ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT