ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಮತ್ತೆ ₹2.99 ಲಕ್ಷ ಹಣ ಪೊಲೀಸರ ವಶಕ್ಕೆ

ಪಂಪ್‌ವೆಲ್‌: ಪಾನಮತ್ತ ವ್ಯಕ್ತಿಗೆ ನೋಟಿನ ಕಂತೆಗಳು ಸಿಕ್ಕಿದ ಪ್ರಕರಣ
Last Updated 7 ಡಿಸೆಂಬರ್ 2022, 14:00 IST
ಅಕ್ಷರ ಗಾತ್ರ

ಮಂಗಳೂರು: ನಗರದ ಪಂಪ್‌ವೆಲ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪಾನಮತ್ತ ವ್ಯಕ್ತಿಯೊಬ್ಬರಿಗೆ ಸಿಕ್ಕಿದ ಹಣದಲ್ಲಿ, ಆತ ₹ 3 ಲಕ್ಷ ನಗದನ್ನು ಮತ್ತೊಬ್ಬ ವ್ಯಕ್ತಿಗೆ ನೀಡಿದ್ದು, ಅದರಲ್ಲಿ ₹ 2,99,500 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

‘ನಗರದ ಪಂಪ್‍ವೆಲ್ ಬಳಿ ನ.26ರಂದು ಬೆಳಿಗ್ಗೆ ಶಿವರಾಜ್ ಎಂಬವರಿಗೆ ₹ 500 ಮುಖಬೆಲೆಯ ನೋಟುಗಳಿದ್ದ ಕಟ್ಟು ಸಿಕ್ಕಿತ್ತು. ಅದರಲ್ಲಿ ಆತ ಇನ್ನೊಬ್ಬ ವ್ಯಕ್ತಿಗೆ ನೋಟಿನ ಕಂತೆಗಳನ್ನು ನೀಡಿದ್ದಾಗಿ ಹೇಳಿದ್ದ. ಶಿವರಾಜ್‌ನಿಂದ ಹಣವನ್ನು ಪಡೆದ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆತನನ್ನು ತುಕಾರಾಮ್‌ ಎಂದು ಗುರುತಿಸಲಾಗಿದೆ. ತುಕಾರಾಮ್‌ ಅವರಿಂದ ₹ 2,99,500 ವಶಪಡಿಸಿಕೊಳ್ಳಲಾಗಿದೆ. ₹ 500 ಅನ್ನು ಅವರು ಖರ್ಚು ಮಾಡಿದ್ದಾರೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಎನ್.ಶಶಿಕುಮಾರ್‌ ತಿಳಿಸಿದರು.

‘ನಾನು ಒಂದು ಕಟ್ಟಿನಿಂದ ₹ 500ರ ಒಂದು ನೋಟು ತೆಗೆದಿದ್ದೆ. ಅದರಿಂದ ಮದ್ಯ ಖರೀದಿಸಿ ಕುಡಿದು ಮಲಗಿದ್ದೆ. ನಾನು ನೋಟು ತೆಗೆದ ಕಟ್ಟು ಬಿಟ್ಟು ಬೇರೆ ಯಾವುದೇ ಹಣ ನನ್ನ ಬಳಿ ಇಲ್ಲ ಎಂದು ತುಕಾರಾಂ ತಿಳಿಸಿದ್ದಾನೆ’ ಎಂದು ಕಮಿಷನರ್ ಹೇಳಿದರು.

‘ಕಟ್ಟಿನಲ್ಲಿ ಎಷ್ಟು ಹಣ ಇತ್ತು ಎಂದು ಶಿವರಾಜ್‌ ಸ್ಪಷ್ಟವಾಗಿ ಮಾಹಿತಿ ನೀಡುತ್ತಿಲ್ಲ. ಪೊಲೀಸರು ಆತನಿಂದ ₹ 49,500 ನಗದನ್ನು ವಶಕ್ಕೆ ಪಡೆದಿದ್ದಾರೆ. ಈಗ ಶಿವರಾಜ್‌ನಿಂದ ಹಣ ಪಡೆದ ತುಕಾರಾಂನಿಂದ ₹ 2,99,500 ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಹಣದ ವಾರಸುದಾರರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಒಟ್ಟು ₹ 3,49,000 ನಗದು ಪೊಲೀಸ್ ವಶದಲ್ಲಿದೆ. ಈ ಹಣದ ವಾರಸುದಾರರು ಸೂಕ್ತ ದಾಖಲೆ ಒದಗಿಸಿದರೆ, ಅವರಿಗೆ ಅದನ್ನು ನೀಡಲು ಕ್ರಮಕೈಗೊಳ್ಳುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಕಮಿಷನರ್‌ ಉತ್ತರಿಸಿದರು.

‘ಶಿವರಾಜ್‌ಗೆ ಸಿಕ್ಕಿದ್ದ ಹಣವನ್ನು ಆತ ಮಲಗಿದ್ದ ಸಂದರ್ಭದಲ್ಲಿ ಯಾರಾದರೂ ಕೊಂಡು ಹೋಗಿದ್ದಲ್ಲಿ ಅದನ್ನು ಠಾಣೆಗೆ ಒಪ್ಪಿಸಬಹುದು. ಅವರ ಮೇಲೆ ಯಾವುದೇ ರೀತಿಯ ಪ್ರಕರಣ ದಾಖಲಿಸುವುದಿಲ್ಲ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳ ಪರಿಶೀಲನೆ ವೇಳೆ ಯಾರಾದರೂ ಶಿವರಾಜ್ ಬಳಿ ಇದ್ದ ಹಣ ಕದ್ದೊಯ್ದಿರುವುದು ದೃಢಪಟ್ಟರೆ, ಅವರ ಮೇಲೆ ಸುಲಿಗೆ, ದರೋಡೆ ಪ್ರಕರಣ ದಾಖಲಾಗುತ್ತದೆ. ಹಣ ಮರಳಿಸಿರುವ ಶಿವರಾಜ್ ಅಥವಾ ತುಕರಾಂ ವಿರುದ್ಧ ಪ್ರಕರಣ ದಾಖಲಿಸಿಲ್ಲ’ ಎಂದು ಕಮಿಷನರ್‌ ಹೇಳಿದರು.

ಹಣದ ವಾರಸುದಾರರ ಪತ್ತೆ ವಿಳಂಬವಾಗುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಮಿಷನರ್‌, ‘ಶಿವರಾಜ್‌ಗೆ ಹಣ ಸಿಕ್ಕಿದ ಕುರಿತು ಮಾಹಿತಿ ಬಂದ ದಿನವೇ ಠಾಣಾಧಿಕಾರಿಯವರು ಆತನಿಂದ ಹೇಳಿಕೆ ಪಡೆದು ಸಾರ್ವಜನಿಕ ಸ್ಥಳದಲ್ಲೇ, ಹಣವನ್ನು ಲೆಕ್ಕ ಮಾಡಿದ್ದರು. ಆತನ ಬಳಿ ₹ 49,500 ಇದ್ದಿದ್ದನ್ನು ದಾಖಲಿಸಿಕೊಂಡಿದ್ದರು. ಹಣ ತಮ್ಮದೆಂದು ಹೇಳಿಕೊಂಡು ಯಾವುದೇ ವಾರೀಸುದಾರರು ಇಲಾಖೆಯನ್ನು ಇದುವರೆಗೂ ಸಂಪರ್ಕಿಸಿಲ್ಲ. ಈ ನಡುವೆ ಕೆಲವು ಮಾಧ್ಯಮಗಳಲ್ಲಿ ಶಿವರಾಜ್‌ಗೆ ₹ 10 ಲಕ್ಷ ಹಣ ಸಿಕ್ಕಿದೆ ಎಂಬ ಸುದ್ದಿ ಪ್ರಕಟವಾಗಿದೆ. ಹಾಗಾಗಿ ಈ ಪ್ರದೇಶದ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನೂ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.

‘ಈ ಪ್ರಕರಣದಲ್ಲಿ ಪೊಲೀಸ್‌ ಸಿಬ್ಬಂದಿ ಅಥವಾ ಅಧಿಕಾರಿಯವರು ನಿರ್ಲಕ್ಷ ವಹಿಸಿದ್ದು ಕಂಡುಬಂದರೆ ಅವರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಕಮಿಷನರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT