ವಿದ್ಯುತ್ ಹರಿದು ಕಾರ್ಮಿಕನ ಸ್ಥಿತಿ ಗಂಭೀರ

ಸೋಮವಾರ, ಏಪ್ರಿಲ್ 22, 2019
33 °C
ಮೆಸ್ಕಾಂ ನಿರ್ಲಕ್ಷ್ಯ ಆರೋಪ- ಆಕ್ರೋಶ

ವಿದ್ಯುತ್ ಹರಿದು ಕಾರ್ಮಿಕನ ಸ್ಥಿತಿ ಗಂಭೀರ

Published:
Updated:
Prajavani

ಪುತ್ತೂರು: ತಂತಿ ಜೋಡಣೆಯ ವೇಳೆ ವಿದ್ಯುತ್ ಹರಿದ ಪರಿಣಾಮವಾಗಿ ಕಂಬದ ಮೇಲೆ ಕೆಲಸದಲ್ಲಿ ನಿರತವಾಗಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ನಗರದ ಹೊರವಲಯದಲ್ಲಿ ಗುರುವಾರ ನಡೆದಿದೆ.

ಒಬ್ಬ ಕಾರ್ಮಿಕ ಕಂಬದಿಂದ ನೆಲಕ್ಕೆ ಜಿಗಿದು ಅಪಾಯದಿಂದ ಪಾರಾಗಿದ್ದಾನೆ. ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

ಪಶ್ಚಿಮ ಬಂಗಾಳದ ಕೊಲ್ಕತ್ತ ನಿವಾಸಿ ಮಾಣಿಕ್ಯ್ (24) ಗಂಭೀರ ಗಾಯಗೊಂಡ ಕಾರ್ಮಿಕ. ತೀವ್ರವಾಗಿ ಗಾಯಗೊಂಡಿರುವ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪುತ್ತೂರು ನಗರದಲ್ಲಿ ವಿದ್ಯುತ್ ಹಳೆ ತಂತಿಗಳನ್ನು ತೆರವುಗೊಳಿಸಿ ಹೊಸ ತಂತಿ ಜೋಡಿಸುವ ಕಾರ್ಯ ನಡೆಯುತ್ತಿದ್ದು, ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಬೆಂಗಳೂರಿನ ಅರವಿಂದ ಎಲೆಕ್ಟ್ರಿಕಲ್ಸ್ ಸಂಸ್ಥೆಯ 60 ಮಂದಿ ಕಾರ್ಮಿಕರು ಕೆಲಸದಲ್ಲಿ ನಿರತವಾಗಿದ್ದರು.

ವಿದ್ಯುತ್ ಸ್ಪರ್ಶಿಸಿದ ಕಾರ್ಮಿಕ ಮಾಣಿಕ್ಯ್ ಅವರು ವಿದ್ಯುತ್ ಕಂಬದಲ್ಲಿ ತಲೆಕೆಳಗಾಗಿ ನೇತಾಡುವ ಸ್ಥಿತಿಯಲ್ಲಿ ಸಿಕ್ಕು ಹಾಕಿಕೊಂಡಿದ್ದರು. ಅವರನ್ನು ಕ್ರೇನ್‌ ಮೂಲಕ ಕೆಳಗೆ ಇಳಿಸಲಾಯಿತು. ತೀವ್ರವಾದ ಸುಟ್ಟಗಾಯ ಆಗಿವೆ. ಈ ಸಂದರ್ಭದಲ್ಲಿ ಕಂಬದಲ್ಲಿದ್ದ ಇನ್ನೊಬ್ಬ ಕಾರ್ಮಿಕ ನೆಲಕ್ಕೆ ಜಿಗಿದು ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿದ್ಯುತ್ ದುರಸ್ತಿ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಪುತ್ತೂರಿನಲ್ಲಿ ನಡೆಯುತ್ತಿರುವುದು ಇದು ಮೂರನೇ ಘಟನೆ.  ಈ ಹಿಂದೆ ಕೂಡಾ ಇಂತಹ ಘಟನೆ ನಡೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಬ್ಬ ಕಾರ್ಮಿಕ ಮೃತಪಟ್ಟಿದ್ದರು. ಅಲ್ಲದೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುತ್ತಿಗೆದಾರ ಅನಿಲ್‌ ಹಾಗೂ ಮೆಸ್ಕಾಂ ಎಂಜಿನಿಯರ್‌ ವಿರುದ್ಧ ದೂರು ದಾಖಲು ಮಾಡಲಾಗಿದೆ. 

ಪುತ್ತೂರಿನ ಕೂರ್ನಡ್ಕ ಜಂಕ್ಷನ್ ವ್ಯಾಪ್ತಿಯಲ್ಲಿ ವಿದ್ಯುತ್ ಸಂಚಾರ ಸ್ಥಗಿತಗೊಳಿಸಿ ಕಾಮಗಾರಿ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದವರ ಪೈಕಿ ಕೆಲಸ ಇಲ್ಲದ ಒಬ್ಬ ಕಾರ್ಮಿಕರನ್ನು ಕಾಮಗಾರಿ ನಿರ್ವಹಣೆ ಮೇಲ್ವಿಚಾರಕರು ಮೆಸ್ಕಾಂ ಗಮನಕ್ಕೆ ತಾರದೆ ಕಳುಹಿಸಿಕೊಟ್ಟಿದ್ದರು. ದರ್ಬೆಯಲ್ಲಿನ ಎಚ್ಟಿ ಲೈನ್‌ನಲ್ಲಿ ವಿದ್ಯುತ್ ಸಂಚಾರ ಸ್ಥಗಿತಗೊಳಿಸದೆ, ಅರ್ತ್‌ ಆಫ್ ಮಾಡದೆ ವಿದ್ಯುತ್ ಪಸರಿಸುತ್ತಿದ್ದ ಕಂಬವೇರಿದ ಕಾರಣದಿಂದಾಗಿಯೇ ಈ ಘಟನೆ ನಡೆದಿದೆ. ಇದು ಇಲಾಖೆ ನಿರ್ಲಕ್ಷ್ಯದಿಂದಲ್ಲ ಎಂದು ಮೆಸ್ಕಾಂ ಇಲಾಖೆ ಅಧಿಕಾರಿ ರಾಮಚಂದ್ರ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !