ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಫೋನ್‌ ಇನ್ ಕಾರ್ಯಕ್ರಮ: ಸಕಾರಾತ್ಮಕ ಯೋಚನೆ ಯಶಸ್ಸಿಗೆ ಮುನ್ನಡಿ

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿದ ಅಧಿಕಾರಿಗಳು
Published 13 ಮಾರ್ಚ್ 2024, 5:58 IST
Last Updated 13 ಮಾರ್ಚ್ 2024, 5:58 IST
ಅಕ್ಷರ ಗಾತ್ರ

ಮಂಗಳೂರು: ‘ಪರೀಕ್ಷೆಯೆಂಬುದು ಯುದ್ಧವಲ್ಲ, ನಿರ್ಭೀತಿಯಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಆತ್ಮವಿಶ್ವಾಸದಿಂದ ಉತ್ತರಗಳನ್ನು ಬರೆಯಿರಿ. ಉತ್ತಮ ಅಂಕ ಗಳಿಸುವ ಸಕಾರಾತ್ಮಕ ಭಾವನೆ ನಿಮ್ಮ ಮನಸ್ಸಿನಲ್ಲಿ ದೃಢವಾಗಿರಲಿ...’

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಲ್ಲಿ ಹೀಗೆ ಉತ್ಸಾಹ ತುಂಬಿದವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಉಪನಿರ್ದೇಶಕ ವೆಂಕಟೇಶ ಎಸ್. ಪಟಗಾರ್.

‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಫೋನ್ –ಇನ್ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕರೆ ಮಾಡಿದ ವಿದ್ಯಾರ್ಥಿಗಳ ಸಂದೇಹಗಳನ್ನು ಅವರು ನಿವಾರಿಸಿದರು.

‘ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ. ನಕಾರಾತ್ಮಕ ಯೋಚನೆಗಳನ್ನು ಬದಿಗೆ ತಳ್ಳಿ, ಸಕಾರಾತ್ಮಕವಾಗಿ ಯೋಚಿಸಿ. ಆಗ ನಿಮ್ಮ ಮಿದುಳು ಶಾಂತವಾಗಿ, ಹೆಚ್ಚೆಚ್ಚು ವಿಚಾರಗಳನ್ನು ಮನನ ಮಾಡಿಕೊಳ್ಳುತ್ತದೆ. ಈಗಾಗಲೇ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪೂರ್ವಭಾವಿ ಪರೀಕ್ಷೆಗಳನ್ನು ಬರೆದ ನಿಮಗೆ ಪರೀಕ್ಷೆ ಎದುರಿಸುವ ಕಲೆ ಕರಗತವಾಗಿದೆ. ಅಂತಿಮ ಪ‍ರೀಕ್ಷೆಯ ಬಗ್ಗೆ ಆತಂಕ ಬೇಡ. ಸುಲಭ ಪ್ರಶ್ನೆಗಳು ಬರುತ್ತವೆ. ಸರಳವಾಗಿ ಉತ್ತರಿಸಿ. ಸರಿಯಾದ ಉತ್ತರಗಳಿಗೆ ಮೌಲ್ಯಮಾಪಕರು ಪೂರ್ಣ ಅಂಕ ನೀಡುತ್ತಾರೆ’ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

‘ಪೂರ್ವಭಾವಿ ಪರೀಕ್ಷೆಯಲ್ಲಿ ಆಗಿರುವ ತಪ್ಪುಗಳನ್ನು ತಿದ್ದುಕೊಂಡರೆ ಅಂತಿಮ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಬಹುದು. ಸಾಮಾನ್ಯವಾಗಿ ಪೂರ್ವಭಾವಿ ಪ್ರಶ್ನೆಪತ್ರಿಕೆ ಮಾದರಿಯಲ್ಲೇ ಅಂತಿಮ ಪರೀಕ್ಷೆ ಪ್ರಶ್ನೆಗಳು ಇರುತ್ತವೆ. ಅನುಮಾನಗಳು ಇದ್ದರೆ ನಿಮ್ಮ ಶಾಲೆಯ ವಿಷಯ ಶಿಕ್ಷಕರನ್ನು ಭೇಟಿ ಮಾಡಿ, ಅದನ್ನು ಬಗೆಹರಿಸಿಕೊಳ್ಳಿ. ಶಿಕ್ಷಕರು ನೀಡಿರುವ ನೋಟ್ಸ್‌ಗಳ ಜೊತೆಗೆ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳು ಓದಬೇಕು. ಇದರಿಂದ ಪಾಠದ ಒಳಗಿನ ಪ್ರಶ್ನೆಗಳು ಬಂದಾಗ ಉತ್ತರಗಳು ಮಿಂಚಿನಂತೆ ಹೊಳೆಯುತ್ತವೆ’ ಎಂದು ತಿಳಿವಳಿಕೆ  ನೀಡಿದರು.

ಕೊಠಡಿ ಮೇಲ್ವಿಚಾರಕರು: ನಕಲುರಹಿತ ಪರೀಕ್ಷೆ ನಡೆಸುವ ಆಶಯದೊಂದಿಗೆ ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪ್ರಾಥಮಿಕ ಶಾಲೆಗಳ ಪೂರ್ಣಾವಧಿ ಶಿಕ್ಷಕರನ್ನು ಮೇಲ್ವಿಚಾರಕರಾಗಿ ನಿಯೋಜಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಒಟ್ಟು 1,489 ಶಿಕ್ಷಕರು ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಪರೀಕ್ಷೆ ನಡೆಯುವ ಜಿಲ್ಲೆಯ ಎಲ್ಲ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಾಗಿದೆ ಎಂದು ತಿಳಿಸಿದರು.

‘ಡಿಸೆಂಬರ್ ತಿಂಗಳ ಒಳಗಾಗಿ ಪಠ್ಯಕ್ರಮವನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗಿದೆ. ಬಹುತೇಕ ಎಲ್ಲ ಶಾಲೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಒಂದು ತಾಸು ಹೆಚ್ಚುವರಿ ತರಗತಿಗಳು ನಡೆಯುತ್ತಿವೆ. ಕಳೆದ ವರ್ಷದ ಪರೀಕ್ಷಾ ಫಲಿತಾಂಶ ವಿಶ್ಲೇಷಿಸಿ, ಕಡಿಮೆ ಅಂಕ ಪಡೆದಿರುವ ಶಾಲೆಗಳ ಬಗ್ಗೆ ವಿಶೇಷ ಗಮನಹರಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳ ಜೊತೆ ಸೇರಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆ ಬಗ್ಗೆ ಕೋಚಿಂಗ್ ನೀಡಲಾಗಿದೆ’ ಎಂದು ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ವೆಂಕಟೇಶ ನಾಯಕ್ ಹೇಳಿದರು.

ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ, ಗಣಿತ ವಿಜ್ಞಾನ ವಿಷಯಗಳ ತಜ್ಞ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರ ಪ್ರಶ್ನೆಗಳಿಗೆ ಸಂಯಮದಿಂದ ಉತ್ತರಿಸಿ, ಗೊಂದಲ ಬಗೆಹರಿಸಿದರು.

( ಪ್ರಶ್ನೆ ಕೇಳಿದವರು– ಕೃತಿಕಾ, ಉಷಾ, ಸಪೂರ, ಅರ್ಪಿತಾ, ತಯ್ಯುಬ್ ಬೆಂಗ್ರೆ, ವಿಶಾಲ್ ಕೊಂಚಾಡಿ, ಶ್ರುತಿ, ಫಾತಿಮಾ ಮತ್ತಿತರರು)

ವೆಂಕಟೇಶ ಪಟಗಾರ್ ಡಿಡಿಪಿಐ
ವೆಂಕಟೇಶ ಪಟಗಾರ್ ಡಿಡಿಪಿಐ

Quote - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 88 ಪರೀಕ್ಷಾ ಕೇಂದ್ರಗಳಲ್ಲಿ 30603 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ವೆಂಕಟೇಶ ಪಟಗಾರ್ ಡಿಡಿಪಿಐ

ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿ ದಿನಾಂಕ;ವಿಷಯ ಮಾರ್ಚ್‌ 25; (ಪ್ರಥಮ ಭಾಷೆ) ಕನ್ನಡ ಇಂಗ್ಲಿಷ್‌ ತೆಲುಗು ಹಿಂದಿ ಮರಾಠಿ ತಮಿಳು ಉರ್ದು ಸಂಸ್ಕೃತ ಮಾರ್ಚ್‌ 27;ಸಮಾಜ ವಿಜ್ಞಾನ ಮಾರ್ಚ್‌ 30;ವಿಜ್ಞಾನ ರಾಜ್ಯಶಾಸ್ತ್ರ ಹಿಂದೂಸ್ತಾನಿ ಸಂಗೀತ ಕರ್ನಾಟಕ ಸಂಗೀತ ಏಪ್ರಿಲ್‌ 02;ಗಣಿತ ಸಮಾಜ ಶಾಸ್ತ್ರ ಏಪ್ರಿಲ್‌ 04;(ತೃತೀಯ ಭಾಷೆ) ಹಿಂದಿ ಕನ್ನಡ ಇಂಗ್ಲಿಷ್‌ ಅರೇಬಿಕ್‌ ಪರ್ಷಿಯನ್‌ ಉರ್ದು ಸಂಸ್ಕೃತ ತುಳು ಕೊಂಕಣಿ ಏಪ್ರಿಲ್‌ 06;(ದ್ವಿತೀಯ ಭಾಷೆ) ಇಂಗ್ಲಿಷ್‌ ಕನ್ನಡ 

ಪರೀಕ್ಷೆ ಸೂತ್ರಗಳು

* ಮುಖ್ಯ ಅಂಶಗಳಿಗೆ ಅಂಡರ್‌ಲೈನ್ ಮಾಡಲು ಮರೆಯಬೇಡಿ

* ಸ್ಪಷ್ಟ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ

* ಪರೀಕ್ಷೆ ಆರಂಭವಾಗುವ ಮೊದಲ ದಿನವೇ ಅಗತ್ಯ ಪರಿಕರಗಳನ್ನು ಸಿದ್ಧಮಾಡಿಟ್ಟುಕೊಳ್ಳಿ

* ಪಾಲಕರು ಮಕ್ಕಳ ಮೇಲೆ ವಿನಾಕಾರಣ ಒತ್ತಡ ಸೃಷ್ಟಿಸಬೇಡಿ

* ಮೊದಲನೇ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯ

* ಮೊದಲ ಪರೀಕ್ಷೆಯಲ್ಲಿ ತೊಂದರೆಯಾದರೆ ಮತ್ತೆ ಎರಡು ಅವಕಾಶಗಳು ಇವೆ

ಯೋಜಿತ ಓದು ಮುಖ್ಯ

ಸಮಾಜ ವಿಜ್ಞಾನ ವಿಷಯದಲ್ಲಿ 33 ಪಾಠಗಳಿದ್ದು ಅವುಗಳನ್ನು ಯೋಜನೆ ಪ್ರಕಾರ ಓದಿಕೊಂಡರೆ ಸುಲಭವಾಗಿ ಅಂಕ ಗಳಿಸಬಹುದು. 3 ಮತ್ತು 4 ಅಂಕ ಬರುವ ಪ್ರಶ್ನೆಗಳು ಯಾವುದೆಂದು ಮೊದಲು ತಿಳಿದುಕೊಳ್ಳಬೇಕು. ಅರ್ಥಶಾಸ್ತ್ರದಲ್ಲಿ ಅರ್ಥ ವ್ಯವಸ್ಥೆ ಮತ್ತು ಸರ್ಕಾರ ಗ್ರಾಮೀಣಾಭಿವೃದ್ಧಿ ವ್ಯವಹಾರ ಅಧ್ಯಯನದಲ್ಲಿ ಬ್ಯಾಂಕ್ ಫಾಠಗಳು ಭೂಗೋಳ ವಿಜ್ಞಾನದಲ್ಲಿ ಮಣ್ಣು ಅರಣ್ಯ ಅರಣ್ಯ ಸಂರಕ್ಷಣೆ ಭೂ ಬಳಕೆ ವಿಧಾನ ಕೃಷಿ ಋತುಗಳು ಹೀಗೆ ಪ್ರಮುಖ ವಿಷಯಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. 6ರಿಂದ 8 ಅಂಶಗಳ ಉತ್ತರ ಬರೆದರೆ ಉತ್ತಮ. ಭೂಗೋಳದಿಂದ ನಕಾಶೆಯನ್ನು ನಿರೀಕ್ಷಿಸಬಹುದು. ಸಮಾಜ ವಿಜ್ಞಾನ ಪರೀಕ್ಷೆಗೆ ಒಂದೂವರೆ ದಿನ ಮಾತ್ರ ಕಾಲಾವಕಾಶ ಇದ್ದು ಮೊದಲೇ ಓದಿ ಪ್ರಮುಖ ಅಂಶಗಳ ಅಂಡರ್‌ಲೈನ್ ಮಾಡಿಟ್ಟುಕೊಂಡರೆ ಪರೀಕ್ಷೆ ಮುನ್ನಾದಿನ ಅವನ್ನು ಓದಿ ಸಮಯ ಉಳಿಸಿಕೊಳ್ಳಬಹುದು. ಒಂದು ಅಂಕದ ಪ್ರಶ್ನೆಗೆ ಪಠ್ಯಪುಸ್ತಕವನ್ನೇ ಹೆಚ್ಚು ಅವಲಂಬಿಸಬೇಕು. –ವಿಶಾಂತ್ ಡಿಸೋಜ ಸಮಾಜ ವಿಜ್ಞಾನ ಶಿಕ್ಷಕರು ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್ ದ.ಕ

ಸ್ಮಾರ್ಟ್ ವರ್ಕ್‌ಗೆ ಆದ್ಯತೆ ಇರಲಿ

ಪ್ರಥಮ ಭಾಷೆ ಕನ್ನಡದಲ್ಲಿ ಪೂರ್ಣ ಅಂಕ ಪಡೆಯಲು ಸಾಧ್ಯವಿದೆ. ಸಂಧಿ ಸಮಾಸ ಒಂದು ವಾಕ್ಯದ ಪ್ರಶ್ನೆಗಳು ಗಾದೆ ಮಾತು ಇಂತಹವುಗಳಿಗೆ ಹೆಚ್ಚು ಒತ್ತು ನೀಡಿ. ಅಲಂಕಾರದಲ್ಲಿ ಉಪಮಾಲಂಕಾರ ರೂಪಕಾಲಂಕಾರಕ್ಕೆ ಹೆಚ್ಚು ಆದ್ಯತೆ ನೀಡಬಹುದು. ಪೂರ್ಣ ಅಂಕದ ನಿರೀಕ್ಷೆ ಇರುವವರು ಎಲ್ಲ ಅಲಂಕಾರಗಳನ್ನು ಮನದಟ್ಟು ಮಾಡಿಕೊಳ್ಳಬೇಕು. ಮನವಿ ಪತ್ರದಲ್ಲಿ ರಜೆ ಅರ್ಜಿ ಬರೆಯುವುದನ್ನು ಸರಿಯಾಗಿ ರೂಢಿಸಿಕೊಂಡರೆ ಪೂರ್ಣ ಐದು ಅಂಕ ಸಿಗುತ್ತದೆ. ಉಪಯುಕ್ತ ವಿಚಾರಗಳು ಮತ್ತು ವಿವಿಧ ಸಮಸ್ಯೆಗಳ ಬಗ್ಗೆ ಪ್ರಬಂಧ ಬರೆಯಲು ಸಿದ್ಧತೆ ಮಾಡಿಕೊಳ್ಳುವುದು ಒಳಿತು. ಪರೀಕ್ಷೆಗೆ 12 ದಿನಗಳು ಮಾತ್ರ ಬಾಕಿ ಇದ್ದು ಕಠಿಣ ಪರಿಶ್ರಮಕ್ಕಿಂತ ಸ್ಮಾರ್ಟ್‌ ವರ್ಕ್‌ ಬಗ್ಗೆ ಗಮನಕೊಡಿ.  – ಗೋಪಾಲಕೃಷ್ಣ ನೇರಳಕಟ್ಟೆ ಕನ್ನಡ ಶಿಕ್ಷಕರು ನಾರ್ಶ ಮೈದಾನ ಸರ್ಕಾರಿ ಪ್ರೌಢಶಾಲೆ ದಕ

ವಿಜ್ಞಾನ ಗುಟ್ಟು ಅನ್ವಯಿಕತೆ 

ವಿಜ್ಞಾನ ವಿಷಯದಲ್ಲಿ 38 ಪ್ರಶ್ನೆಗಳು 80 ಅಂಕಗಳು ಇರುತ್ತವೆ. ಬೇರೆ ವಿಷಯಗಳಂತೆ ವಿಜ್ಞಾನದಲ್ಲಿ ತುಂಬಾ ಬರೆಯಬೇಕಾಗಿಲ್ಲ. ಸರಿಯಾದ ವಿಷಯ ಮಂಡನೆಯಿಂದ ಪೂರ್ಣ ಅಂಕ ಗಳಿಸಬಹುದು. ವಿಜ್ಞಾನ ಪ್ರಶ್ನೆ ಪತ್ರಿಕೆ ಉತ್ತರಿಸಲು ವಿಮರ್ಶಾತ್ಮಕ ಚಿಂತನೆ ಹೆಚ್ಚು ಆಲೋಚನೆ ಅನ್ವಯಿಸುವಿಕೆ ಮತ್ತು ಅಂಕಿ– ಅಂಶ ಗ್ರಹಿಸಿದರೆ ಪೂರ್ಣ ಅಂಕ ಪಡೆಯಬಹುದು. ಭೌತ ವಿಜ್ಞಾನ ವಿಭಾಗದಲ್ಲಿ 28 ಅಂಕಗಳು ರಸಾಯನ ವಿಜ್ಞಾನದಲ್ಲಿ 25 ಹಾಗೂ ಜೀವ ವಿಜ್ಞಾನ ವಿಭಾಗದಲ್ಲಿ 27 ಅಂಕಗಳ ಪ್ರಶ್ನೆಗಳು ಇರುತ್ತವೆ. ಮಿದುಳಿನ ಚಿತ್ರ ಸೇರಿದಂತೆ ಚಿತ್ರಗಳು ಭಾಗ ಗುರುತಿಸುವಿಕೆ ಬಗ್ಗೆ ನಿಖರತೆ ಇರಲಿ. –ವೆಂಕಟರಮಣ ಆಚಾರ್ಯ  ವಿಜ್ಞಾನ ಶಿಕ್ಷಕರು ಸಜಿಪಮೂಡ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದಕ

ಅಕ್ಷರ ವ್ಯಾಕರಣ ದೋಷ ಇಲ್ಲದಂತೆ ಬರೆಯಿರಿ

ದ್ವಿತೀಯ ಭಾಷೆ ಇಂಗ್ಲಿಷ್‌ ಪ್ರಶ್ನೆ ಪತ್ರಿಕೆಯು ಕಳೆದ ವರ್ಷಕ್ಕಿಂತ ಭಿನ್ನವಾಗಿಲ್ಲ. ರಾಜ್ಯ ಮಟ್ಟದ ಮಾದರಿ ಪ್ರಶ್ನೆ ಪತ್ರಿಕೆಯಂತೆಯೇ ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇರುತ್ತದೆ. ಇಂಗ್ಲಿಷ್ ಸುಲಭದ ವಿಷಯ. ಚೆನ್ನಾಗಿ ಓದಿ ಓದಿದ್ದನ್ನು ಬರೆದು ಅಭ್ಯಾಸ ಮಾಡಿ. ಆಗ ನೆನಪಿನಲ್ಲಿರುತ್ತದೆ. ಇಲ್ಲವಾದರೆ ಅಕ್ಷರ ದೋಷ ಮತ್ತು ವ್ಯಾಕರಣ ದೋಷ ಆಗುವ ಸಾಧ್ಯತೆ ಇರುತ್ತದೆ. ಭಾಷಾ ವಿಷಯ ಆಗಿರುವ ಕಾರಣ ಇವುಗಳಿಗೆ ಅಂಕ ಕಡಿತವಾಗುತ್ತದೆ. ಹಿಂದಿನ ಐದು ವರ್ಷಗಳ ಪ್ರಶ್ನೆ ಪತ್ರಿಕೆ ಬಿಡಿಸಿದರೆ ಓದು ಸುಲಭವಾಗುತ್ತದೆ. ಚಂದ್ರಯಾನ ಮಾಲಿನ್ಯ ಮೊಬೈಲ್ ಫೋನ್ ಪರಿಣಾಮ ಇಂತಹ ವಿಷಯಗಳ ಬಗ್ಗೆ ನಿಬಂಧ ಬರುವ ಸಾಧ್ಯತೆ ಇದ್ದು ಹೆಚ್ಚು ಮನದಟ್ಟು ಮಾಡಿಕೊಳ್ಳಿ. ಯಾವುದೇ ಪ್ರಶ್ನೆಯನ್ನೂ ಬಿಡಬೇಡಿ. ಮೌಲ್ಯಮಾಪಕರಿಗೆ ಸಮಾಧಾನ ತರುವ ಉತ್ತರಗಳು ನಿಮ್ಮದಾಗಿರಲಿ. – ಜಗನ್ನಾಥ್ ಇಂಗ್ಲಿಷ್ ಶಿಕ್ಷಕರು ಗುರುವಾಯನಕೆರೆ ಸರ್ಕಾರಿ ಪ್ರೌಢಶಾಲೆ ದಕ

ಶೇ 30ರಷ್ಟು ಕಠಿಣ ಅಂಶದ ಪ್ರಶ್ನೆಗಳು

ತೃತೀಯ ಭಾಷೆ ಹಿಂದಿಯಲ್ಲಿ ಈ ಬಾರಿ ಶೇ 30ರಷ್ಟು ಕಠಿಣ ಅಂಶದ ಪ್ರಶ್ನೆಗಳು ಇರುತ್ತವೆ. ಪಠ್ಯಪುಸ್ತಕದಲ್ಲಿರುವ ಎಲ್ಲ ಪಾಠಗಳು ಪರೀಕ್ಷೆಗೆ ಅನ್ವಯವಾಗುತ್ತವೆ. ಕನಿಷ್ಠ ಎರಡು ಬಾರಿಯಾದರೂ ಇಡೀ ಪುಸ್ತಕ ಅಭ್ಯಾಸ ಮಾಡಬೇಕು. ಪಾಠದ ಒಳಗಿನಿಂದಲೂ ಪ್ರಶ್ನೆ ಬರಬಹುದು. ಬಹು ಆಯ್ಕೆಯ 8 ಪ್ರಶ್ನೆಗಳು ವ್ಯಾಕರಣಕ್ಕೆ ಸಂಬಂಧಿಸಿ ಇರುವುದರಿಂದ ವ್ಯಾಕರಣದ ಒಂಬತ್ತು ಅಂಶ ಗಮನದಲ್ಲಿಡುವುದು ಉತ್ತಮ. ಅನುವಾದವನ್ನು ಸರಿಯಾಗಿ ಮಾಡಿದಲ್ಲಿ ಪೂರ್ಣ ಮೂರು ಅಂಕ ಗಳಿಸಬಹುದು. ಪತ್ರ ಲೇಖನದಲ್ಲಿ ರಜೆ ಅರ್ಜಿ ಅಥವಾ ತಂದೆಗೆ ಪತ್ರ ಸರಿಯಾಗಿ ಕಲಿತರೆ ಪೂರ್ಣ ಐದು ಅಂಕ ಪಡೆಯಬಹುದು. ಪಾಠಕ್ಕೆ ಸಂಬಂಧಿಸಿದ ವಿಷಯ ಮೇಲೆಯೇ ಹೆಚ್ಚಾಗಿ ಒಂದು ನಿಬಂಧ ಬರುತ್ತದೆ. –ಮಹೇಶ್ ಎಂ.ಎಸ್  ಹಿಂದಿ ಶಿಕ್ಷಕರು ಮಳಲಿ ಸರ್ಕಾರಿ ಪ್ರೌಢಶಾಲೆ ದಕ

ಅಭ್ಯಾಸ ಪುಸ್ತಕದ ಕಲಿಕೆ ಇರಲಿ

ಗಣಿತ ವಿಶೇಷವಾದ ವಿಷಯ. ಉಳಿದ ವಿಷಯಗಳನ್ನು ಬಾಯಿಪಾಠ ಮಾಡಬಹುದು. ಆದರೆ ಗಣಿತದಲ್ಲಿ ಪ್ರಶ್ನೆ ಪ್ರಮೇಯ ಬಿಡಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಯ ಪರಿಕಲ್ಪನೆ ಸೂತ್ರ ಬರೆದು ಕಲಿಯಬೇಕಾಗುತ್ತದೆ. ಗಣಿತಕ್ಕೆ ಅಭ್ಯಾಸ ಪುಸ್ತಕದ ಮೂಲಕ ಕಲಿಯುವ ಪರಿಪಾಠ ಬೆಳೆಸಿಕೊಳ್ಳಿ. ಪ್ರತಿ ಪ್ರಶ್ನೆಯನ್ನು 3–4 ಬಾರಿ ಬಿಡಿಸಿ ಮನದಟ್ಟು ಮಾಡಿಕೊಳ್ಳಿ.  ಕಲಿಕೆಯಲ್ಲಿ ಹಿಂದಿರುವವರು ಸಹ ಕನಿಷ್ಠ 45 ಅಂಕ ತೆಗೆಯುವಷ್ಟು ಗಣಿತ ವಿಷಯ ಸುಲಭವಾಗಿರುತ್ತದೆ. ಈಗ ಬರೆದಿರುವ ನಾಲ್ಕು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯ ಶೇ 70ರಷ್ಟು ಪ್ರಶ್ನೆಗಳ ಮಾದರಿಯಲ್ಲೇ ಅಂತಿಮ ಪರೀಕ್ಷೆಯ ಪ್ರಶ್ನೆಗಳು ಇರುತ್ತವೆ. –ವಾಸುದೇವ್ ರಾವ್ ಗಣಿತ ಶಿಕ್ಷಕರು ಬಜಪೆ ಅನುದಾನಿತ ಹೋಲಿ ಫ್ಯಾಮಿಲಿ ಹೈಸ್ಕೂಲ್ ದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT