ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್‌ ಇನ್‌ |ಮಂಗಳೂರು: ಎಂಡೊಪೀಡಿತರ ಹೆಚ್ಚುವರಿ ಪಾಲನಾ ಕೇಂದ್ರ ಸಿದ್ಧ

ಸರ್ಕಾರದಿಂದ ಅನುದಾನದ ನಿರೀಕ್ಷೆ; ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಡಿಎಚ್‌ಒ
Published 8 ನವೆಂಬರ್ 2023, 5:20 IST
Last Updated 8 ನವೆಂಬರ್ 2023, 5:20 IST
ಅಕ್ಷರ ಗಾತ್ರ

ಮಂಗಳೂರು: ಎಂಡೊಸಲ್ಫಾನ್ ಪೀಡಿತರ ಪಾಲನೆ– ಪೋಷಣೆಗಾಗಿ ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ ನಾಲ್ಕು ಪಾಲನಾ ಕೇಂದ್ರಗಳು (ಡೇ ಕೇರ್ ಸೆಂಟರ್‌) ಸಿದ್ಧವಾಗಿದ್ದು, ನಿರ್ವಹಣೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣ ಅವನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್‌.ಆರ್. ತಿಮ್ಮಯ್ಯ ಹೇಳಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಫೋನ್‌ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಾರ್ವಜನಿಕರು ಕರೆ ಮಾಡಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಸಾರ್ವಜನಿಕರು ಕೇಳಿದ ಪ್ರಶ್ನೆ ಮತ್ತು ಡಿಎಚ್‌ಒ ಅವರು ನೀಡಿದ ಉತ್ತರದ ಆಯ್ದ ಭಾಗ ಇಲ್ಲಿದೆ.

ಸಂಜೀವ ಕಬಕ

ಎಂಡೊಡೋಸಲ್ಪಾನ್ ದುಷ್ಪರಿಣಾಮಕ್ಕೆ ಒಳಗಾದವರ ಪಾಲನೆ ಪೋಷಣೆಗಾಗಿ ಡೇ ಕೇರ್ ಸೆಂಟರ್  ತೆರಯಲಾಗುತ್ತದೆ ಎಂದು ಹೈಕೋರ್ಟ್‌ಗೆ ಈ ಹಿಂದೆಯೇ ಭರವಸೆ ನೀಡಲಾಗಿದೆ. ಆದರೆ, ಅದು ಈವರೆಗೆ ಅನುಷ್ಠಾನವಾಗಿಲ್ಲ. ಸಮಾಜಕಲ್ಯಾಣ ಇಲಾಖೆ ಮೂಲಕ ಇವುಗಳನ್ನು ನಿರ್ವಹಿಸಲು ಸಲ್ಲಿಸಿರುವ ಪ್ರಸ್ತಾವ ಯಾವ ಹಂತದಲ್ಲಿದೆ?

* ಕೊಕ್ಕಡ, ಕೊಯಿಲ, ಉಜಿರೆಯಲ್ಲಿ ಪಾಲನಾ ಕೇಂದ್ರಗಳು ನಡೆಯುತ್ತಿವೆ. ಸರ್ಕಾರವೇ ಇವುಗಳ ನಿರ್ವಹಣೆ ಮಾಡುತ್ತಿದೆ. ಹೆಚ್ಚುವರಿಯಾಗಿ ವಿಟ್ಲ, ಪಾಣಾಜೆ, ಕಣಿಯೂರು ಮತ್ತು ಬೆಳ್ಳಾರೆ ಈ ನಾಲ್ಕು ಕಡೆಗಳಲ್ಲಿ ಕಟ್ಟಡ ನಿರ್ಮಾಣವಾಗಿ, ಅಗತ್ಯ ಎಲ್ಲ ಸೌಲಭ್ಯಗಳು ಇಲ್ಲಿವೆ. ಪ್ರತಿ ಕೇಂದ್ರದ ನಿರ್ವಹಣೆಗೆ ತಿಂಗಳಿಗೆ ₹3.16 ಲಕ್ಷ ಮೊತ್ತದಂತೆ ನಾಲ್ಕು ಕೇಂದ್ರಗಳಿಗೆ ಒಟ್ಟು ₹12.64 ಲಕ್ಷ ಅನುದಾನ ಬೇಕಾಗುತ್ತದೆ. ವರ್ಷಕ್ಕೆ ₹1.51 ಕೋಟಿ ಅನುದಾನದ ಅಗತ್ಯವಿದ್ದು, ಬಿಡುಗಡೆಗೆ ವಿನಂತಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ರವಿ ಬೆಳ್ತಂಗಡಿ

ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯ ಪಡೆಯುವುದು ಹೇಗೆ?

* ಈ ಯೋಜನೆ ಅಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 1,650 ವಿಧದ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಬಿಪಿಎಲ್ ಕಾರ್ಡ್ ಇರುವ ರೋಗಿಗಳು ಗರಿಷ್ಠ ₹5 ಲಕ್ಷದವರೆಗೆ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು. ಒಂದು ಕುಟುಂಬದಲ್ಲಿ ಐವರು ಸೌಲಭ್ಯ ಪಡೆಯಬಹುದು. ಒಂದೊಮ್ಮೆ ಕಾರ್ಡ್ ಮಾಡಿಸದಿದ್ದರೂ, ಆಧಾರ್ ಮತ್ತು ಬಿಪಿಎಲ್ ಕಾರ್ಡ್ ತೆಗೆದುಕೊಂಡು ಚಿಕಿತ್ಸೆಗೆ ಹೋದರೆ ‘ಆರೋಗ್ಯಮಿತ್ರ’ರು ಸಹಾಯ ಮಾಡುತ್ತಾರೆ. ಎಪಿಎಲ್‌ ಕಾರ್ಡ್‌ದಾರರಿಗೆ ₹1.5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಲು ಅವಕಾಶ ಇದೆ.

ಆಭಾ (ಆಯುಷ್ಮಾನ್ ಡಿಜಿಟಲ್ ಅಕೌಂಟ್) ಅನ್ನು ಎಲ್ಲರೂ ಮಾಡಿಸಿದರೆ ಉತ್ತಮ. ಪ್ರತಿ ವ್ಯಕ್ತಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಮೂಲಕ ಆ ವ್ಯಕ್ತಿಯ ಆರೋಗ್ಯ, ಹಿಂದಿನ ಚಿಕಿತ್ಸೆಯ ವಿವರಗಳನ್ನು ಇದರಲ್ಲಿ ದಾಖಲಿಸಲಾಗುತ್ತದೆ. 

ರವಿ ಮಂಗಳೂರು

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಭಾನುವಾರ ವೈದ್ಯರು ಲಭ್ಯರಾಗಬೇಕು. ಇಲ್ಲವಾದಲ್ಲಿ, ತುರ್ತು ಆರೋಗ್ಯ ಸಮಸ್ಯೆ ಇದ್ದರೆ ತೊಂದರೆಯಾಗುತ್ತದೆ.

* ವೈದ್ಯರು ವಾರಕ್ಕೆ ಒಂದು ದಿನ ರಜೆ ಪಡೆಯಬಹುದೆಂಬ ನಿಯಮ ಇದೆ. ಸಾಮಾನ್ಯವಾಗಿ ಭಾನುವಾರ ರಜೆ ದಿನ ಇರುತ್ತದೆ. ಆದರೂ, ಜನರ ಅನುಕೂಲಕ್ಕಾಗಿ ನಿಮ್ಮ ಸಲಹೆಯನ್ನು ಪರಿಗಣಿಸಿ, ವೈದ್ಯಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.

‘ನಮ್ಮ ಕ್ಲಿನಿಕ್’ಗಳ ಸಮಯ ಮರುನಿಗದಿ ಮಾಡಿ ಸರ್ಕಾರದಿಂದ ಆದೇಶ ಬಂದಿದೆ. ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗುವಂತೆ ಸಂಜೆ 4ರಿಂದ 8 ಗಂಟೆವರೆಗೆ ಇವು ತೆರೆದಿರುತ್ತವೆ. ಈ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡುತ್ತೇನೆ.

ಜೆರಾಲ್ಡ್ ಟವರ್ಸ್

ಅತ್ತಾವರ, ಕದ್ರಿ ಭಾಗದಲ್ಲಿ ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳು ಹೆಚ್ಚುತ್ತಿದ್ದು, ಸಾಂಕ್ರಾಮಿಕ ರೋಗಕ್ಕೆ ದಾರಿಯಾಗುತ್ತಿದೆ.

* ಎಲ್ಲ ಇಲಾಖೆಗಳ ಸಮನ್ವಯದಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಈ ಸಂಬಂಧ ಮಹಾನಗರ ಪಾಲಿಕೆ ಆಯುಕ್ತರ ಜೊತೆ ಚರ್ಚಿಸಿ, ದಿನಾಂಕ ನಿಗದಿಪಡಿಸಿ ಸಭೆ ನಡೆಸಲಾಗುವುದು.

ಮಾಲಿನಿ ಸುಳ್ಯ

ಎಂಡೋಸಲ್ಫಾನ್ ಪೀಡಿತ ಮಗುವಿಗೆ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅದರ ಬಿಲ್ ಮೊತ್ತ ಸರ್ಕಾರದಿಂದ ಮರುಪಾವತಿಯಾಗಿಲ್ಲ.

* ಸರ್ಕಾರ ಒಪ್ಪಂದ ಮಾಡಿಕೊಂಡಿರುವ 12 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ, ಆ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಇವುಗಳ ಹೊರತಾದ ಆಸ್ಪತ್ರೆಗಳ ಚಿಕಿತ್ಸೆ ವೆಚ್ಚ ಭರಿಸಲು ನಿಯಮದಲ್ಲಿ ಅವಕಾಶವಿಲ್ಲ.

ಜಿ.ಕೆ. ಭಟ್

 ರಸ್ತೆ ಬದಿ ಆಹಾರದ ಗುಣಮಟ್ಟದ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ?

* ಈ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ.

ಜುನೇದ್ ಮತ್ತು ಸೆಲಿಟಸ್

ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ನರ್ಸ್‌, ಆಶಾ ಕಾರ್ಯಕರ್ತೆಯರ ಕೊರತೆ ಇದೆ. ಕಾಯಂ ವೈದ್ಯರನ್ನು ಒದಗಿಸಿ.

* ಗ್ರಾಮೀಣ ಪ್ರದೇಶದ ಕೆಲವು ಕಡೆಗಳಲ್ಲಿ ವೈದ್ಯರ ಕೊರತೆ ಇದೆ. ಸರ್ಕಾರ ಕಾಯಂ ವೈದ್ಯರ ನೇಮಕಾತಿ ಮಾಡುವ ತನಕ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು, ವೈದ್ಯರ ಕೊರತೆ ನೀಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸದ್ಯದಲ್ಲಿ ಕೊಯಿಲ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸುತ್ತೇನೆ.

‌ಅಬೆಲ್ ಡಿಸೋಜ

ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯ ವಿದ್ಯಾರ್ಥಿಗಳು ರೋಗಿಗಳ ತಪಾಸಣೆ ಮಾಡುತ್ತಾರೆ. ಇದು ಅನೇಕರಿಗೆ ಇಷ್ಟವಾಗುವುದಿಲ್ಲ.

* ಹೆಸರಾಂತ ವೈದ್ಯರೆಲ್ಲ ಇದೇ ಮಾದರಿಯಲ್ಲಿ ಕಲಿತು ಬಂದವರು. ರೋಗಿಗಳು, ಕಾಯಿಲೆ ಬಗ್ಗೆ ತಿಳಿದುಕೊಳ್ಳಲು ವೈದ್ಯ ವಿದ್ಯಾರ್ಥಿಗಳು ತಪಾಸಣೆ ಮಾಡಬೇಕಾಗುತ್ತದೆ. ಆದರೂ, ನಿಮ್ಮ ಸಲಹೆ ಪರಿಶೀಲಿಸಲಾಗುವುದು.

ವಿಕ್ರಾಂತ್ ಕೊಂಚಾಡಿ

ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ.

* ಪಿಎಚ್‌ಸಿಗಳಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ, ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಿದ್ದಕ್ಕೆ ಧನ್ಯವಾದಗಳು.

ಪದ್ಮನಾಭ ಗೌಡ

ಸೊಳ್ಳೆಗಳ ನಿಯಂತ್ರಣಕ್ಕೆ ಔಷಧ ಸಿಂಪಡಣೆ ನಿಯಮಿತವಾಗಿ ನಡೆಯುತ್ತಿಲ್ಲ. ಎಲ್ಲ ಕಡೆಗಳಲ್ಲಿ ಅಧಿಕಾರಿಗಳೇ ಬಂದು ಪರಿಶೀಲಿಸಲು ಆಗದು. ವಾರ್ಡ್ ಸಭೆಗಳನ್ನು ಆಗಾಗ ನಡೆಸಬೇಕು ಎಂದು ಮಹಾನಗರ ಪಾಲಿಕೆಯವರಿಗೆ ಸಲಹೆ ನೀಡಬಹುದೇ?

* ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರ ಬಳಿ ಚರ್ಚಿಸುತ್ತೇನೆ.

 ಶಶಿಧರ್ ಉಜಿರೆ

ವಾರಕ್ಕೆ ಒಂದು ದಿನ ಮಾತ್ರ ಉಜಿರೆ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಲಸಿಕೆ ನೀಡುತ್ತಾರೆ. ಇದರಿಂದ ಆಸ್ಪತ್ರೆಯಲ್ಲಿ ತೀವ್ರ ಒತ್ತಡವಾಗುತ್ತದೆ. ವಾರಕ್ಕೆ ಎರಡು ದಿನ ಲಸಿಕೆ ನೀಡುವ ಪದ್ಧತಿ ಜಾರಿಗೊಳಿಸಬಹುದೇ?

* 12 ರೀತಿಯ ಮಾರಕ ರೋಗಳಿಗೆ ಲಸಿಕೆ ನೀಡಲಾಗುತ್ತದೆ. ವಾರಕ್ಕೆ ಒಂದು ದಿನದ ಬದಲಾಗಿ ಎರಡು ದಿನ ಲಸಿಕೆ ಕಾರ್ಯಕ್ರಮ ನಡೆಸಲು ಪರಿಶೀಲಿಸಲಾಗುವುದು.

 ಡಾ ಎಚ್ ಆರ್ ತಿಮ್ಮಯ್ಯ 
 ಡಾ ಎಚ್ ಆರ್ ತಿಮ್ಮಯ್ಯ 

‘3814 ಜನರಿಗೆ ಪಿಂಚಣಿ’

ಜಿಲ್ಲೆಯಲ್ಲಿ ಒಟ್ಟು 4728 ಫಲಾನುಭವಿಗಳು ಎಂಡೊಸಲ್ಫಾನ್ ಪೀಡಿತರು ಎಂದು ಗುರುತಿಸಲ್ಪಟ್ಟವರು. ಅವರಲ್ಲಿ 3814 ಜನರು ಪಿಂಚಣಿ ಪಡೆಯುತ್ತಿದ್ದಾರೆ. ಭಾಗಶಃ ಸಮಸ್ಯೆ ಇರುವ 550 ಜನರು ಸೌಲಭ್ಯ ಪಡೆಯುತ್ತಿದ್ದಾರೆ. ಆರಂಭದಿಂದ ಈವರೆಗೆ ಮೃತಪಟ್ಟವರು ಸಂಖ್ಯೆ 364ರಷ್ಟಾಗಿದೆ. ಎಂಡೊಸಲ್ಫಾನ್ ಪೀಡಿತರ ಶಾಶ್ವತ ಪರಿಹಾರ ಕೇಂದ್ರ ಸ್ಥಾಪನೆ ಸಂಬಂಧ ₹10 ಕೋಟಿ ವೆಚ್ಚದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಾಲಿ ಇರುವ ಪಾಲನಾ ಕೇಂದ್ರಗಳಲ್ಲಿ ಉಜಿರೆಯಲ್ಲಿ 40 ಮಂದಿ ಹಾಗೂ ಇನ್ನಿತರ ಎರಡು ಕಡೆಗಳಲ್ಲಿ 30 ಮಂದಿ ಇದ್ದಾರೆ ಎಂದು ಕಾರ್ಯಕ್ರಮ ಅನುಷ್ಠಾನಾಧಿಕಾರಿಯಾಗಿರುವ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್ ಹೇಳಿದರು.

‘ಗ್ರಾಮ ಮಟ್ಟದಲ್ಲಿ ಜಾಗೃತಿ’

ಕೇಂದ್ರ ಸರ್ಕಾರದ ಆಯುಷ್ಮಾನ್ ವೆಬ್‌ಸೈಟ್ ಮಾಹಿತಿ ಪ್ರಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಆರ್ಥಿಕವಾಗಿ ಹಿಂದುಳಿದವರು ತಗಡಿನ ಅಥವಾ ಬಿದಿರಿನ ಮನೆ ಇದ್ದವರಿಗೆ ಆಯುಷ್ಮಾನ್ ಕಾರ್ಡ್ ಸೌಲಭ್ಯ ಸಿಗುತ್ತದೆ. ಅದನ್ನು ತಿಳಿಸದೆ ಕಾರ್ಡ್ ಹಂಚುವವರ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಮೃತ್ ಗಂಜಿಮಠ ಎಂಬುವವರು ಪ್ರಶ್ನಿಸಿದರು. ‘ಈ ಹಿಂದೆ ಆಯುಷ್ಮಾನ್ ಕಾರ್ಡ್ ಇತ್ತು. 2018ರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಸಮ್ಮಿಲನಗೊಳಿಸಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ರೂಪಿಸಲಾಗಿದೆ. ನಿಮ್ಮ ಸಲಹೆಯಂತೆ ಕೇಂದ್ರ ಸರ್ಕಾರದ ವೆಬ್‌ಸೈಟ್ ಅನ್ನು ಗಮನಿಸುತ್ತೇನೆ. ಗ್ರಾಮ ಸಭೆ ಆರೋಗ್ಯ ಕಾರ್ಯಕರ್ತರ ಆಯುಷ್ಮಾನ್ ಕಾರ್ಡ್‌ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಡಿಎಚ್‌ಒ ಡಾ.ತಿಮ್ಮಯ್ಯ ಉತ್ತರಿಸಿದರು.

ದ.ಕ.ಜಿಲ್ಲೆಯಲ್ಲಿ ಆಯುಷ್ಮಾನ್ ಕಾರ್ಡ್ ಮಾಡಿಸಿದವರು 5.42 ಲಕ್ಷ ಆಭಾ ಕಾರ್ಡ್ ನೋಂದಣಿ ಮಾಡಿದವರು 10.54 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT