ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಬೇಕಾಗಿದ್ದ ಪ್ರವೀಣ್ ನೆಟ್ಟಾರು; ಮನೆ ಕಟ್ಟಬೇಕಾಗಿದ್ದ ಜಾಗದಲ್ಲೇ ಅಂತ್ಯ

Last Updated 28 ಜುಲೈ 2022, 8:38 IST
ಅಕ್ಷರ ಗಾತ್ರ

ಸುಳ್ಯ (ದಕ್ಷಿಣ ಕನ್ನಡ): ‘ನನಗೆ ಇನ್ನು ಯಾರಿದ್ದಾರೆ. ಇದ್ದ ಒಬ್ಬನೇ ಮಗನನ್ನು ಕೊಂದೇ ಬಿಟ್ಟರು. ಅವರಿಗೆ ಗಲ್ಲು ಶಿಕ್ಷೆನೇ ಆಗಬೇಕು’. ಇದು ಮೃತ ಪ್ರವೀಣ್ ನೆಟ್ಟಾರು (32) ಅವರ ತಾಯಿ ರತ್ನಾವತಿ ಅವರು ಹೇಳಿದ ಮಾತು.

ಪ್ರವೀಣ್ ಅವರು ಶೇಖರ ಪೂಜಾರಿ– ರತ್ನಾವತಿ ದಂಪತಿಯ ಪುತ್ರ. ಮೂರ್ತೆದಾರಿಕೆ ಹಾಗೂ ಕೂಲಿ ಕೆಲಸ ಮಾಡಿಕೊಂಡು ಶೇಖರ ಪೂಜಾರಿ ದಂಪತಿ ಮಕ್ಕಳನ್ನು ಬೆಳೆಸಿದ್ದರು.

ದಂಪತಿಯ ಒಬ್ಬರೇ ಗಂಡು ಕುಡಿ ಪ್ರವೀಣ್. ಅವರೇ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಅವರ ಇಬ್ಬರು ಸಹೋದರಿಯರಿಗೆ ಮದುವೆ ಆಗಿದೆ. ಪ್ರವೀಣ್ ಮೂರು ವರ್ಷಗಳ ಹಿಂದೆ ನೂತನಾ ಅವರನ್ನು ಮದುವೆ ಆಗಿದ್ದಾರೆ. ಅವರ ಪತ್ನಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕಿಯಾಗಿದ್ದಾರೆ.

ತನ್ನ ಸಂಸಾರಕ್ಕೆ ನೆಮ್ಮದಿ ಜೀವನ ನೀಡಬೇಕು ಎಂಬ ತುಡಿತದೊಂದಿಗೆ ನೆಟ್ಟಾರಿನಲ್ಲಿ ಸ್ವಲ್ಪ ಜಾಗದಲ್ಲಿ ಮನೆ ಕಟ್ಟುವ ಕನಸು ಕಂಡಿದ್ದ ಪ್ರವೀಣ್ ಅದಕ್ಕಾಗಿ ಒಂದು ಕೊಳವೆ ಬಾವಿ ಕೊರೆಯಿಸಿದ್ದರು.

‘ಮನೆ ಕಟ್ಟಲು ಜಾಗವನ್ನೂ ಸಮತಟ್ಟು ಕೂಡಾ ಮಾಡಿಟ್ಟಿದ್ದ. ಆದರೆ ಅದೇ ಜಾಗದಲ್ಲಿ ಅವನ ಅಂತ್ಯ ಸಂಸ್ಕಾರ ಮಾಡಬೇಕಾಗಿ ಬಂತಲ್ಲ‘ ಎಂದು ಪ್ರವೀಣ್ ಅವರ ಸಂಬಂಧಿಕರೊಬ್ಬರು ಕಣ್ಣೀರಿಟ್ಟರು.

ಹಂತ ಹಂತವಾಗಿ ಬೆಳೆದ ಪ್ರವೀಣ್‌: ಪ್ರವೀಣ್‌ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆಗಳೇನೂ ಇರಲಿಲ್ಲ. ಪಿಯುಸಿ ವರೆಗೆ ಶಿಕ್ಷಣ ಪಡೆದಿದ್ದ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಇದ ರಿಂದಾಗಿಯೇ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್‌ ನಂಟು ಬೆಳೆದಿತ್ತು ಎನ್ನುತ್ತಾರೆ ಅವರ ಒಡನಾಡಿಗಳು.

ಬಿಲ್ಲವರ ಸಂಘಟನೆಯಾಗಿರುವ ಯುವ ವಾಹಿನಿಯ ಸುಳ್ಯ ತಾಲ್ಲೂಕು ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ತುಳುವರ ಆರಾಧ್ಯ ದೈವಗಳಾದ ಕೋಟಿ ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಸಹಸಂಚಾಲಕರಾಗಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಸಾದ ವಿತರಣೆಯ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿನಿರ್ವಹಿಸಿದ್ದರು.

ಜೀವನ ನಿರ್ವಹಣೆಗಾಗಿ ಕೆಲವು ತಿಂಗಳ ಹಿಂದೆ ಬೆಳ್ಳಾರೆಯಲ್ಲಿ ಕೋಳಿ ಮಾಂಸ ಮಾರಾಟ ಅಂಗಡಿ ಆರಂಭಿಸಿದ್ದ ‌‌ಪ್ರವೀಣ್ ಅದರ ಜೊತೆಗೆ ಸಮಾಜಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು.

ಬಿಲ್ಲವ ಸಮುದಾಯದ ಯುವ ನಾಯಕನಾಗಿ ಮೂಡಿಬಂದಿದ್ದ ಪ್ರವೀಣ್ ಅವರ ಸಮುದಾಯ ಸೇವೆಗಳನ್ನು ಗುರುತಿಸಿ ಬಿಜೆಪಿ ಅವರಿಗೆ ಯುವಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಿಸಿತ್ತು.

‘ನಾನು ಜೊತೆಯಲ್ಲಿರುತ್ತಿದಿದ್ದರೆ ಹೀಗಾಗುತ್ತಿರಲಿಲ್ಲ’

‘ಹೆಚ್ಚಿನ ದಿನ ಸಂಜೆ ಅಂಗಡಿಯಲ್ಲಿ ನಾನು ಇರುತ್ತಿದ್ದೆ. ಎಲ್ಲಿಗೆ ಹೋಗುವುದಿದ್ದರೂ ಜೊತೆಯಾಗಿ ಹೋಗುತ್ತಿದ್ದೆವು. ಆದರೆ, ನಿನ್ನೆ ನಾನು ತಾಯಿ ಮನೆಗೆ ಹೋಗಿದ್ದೆ. ನಾನು ಇದ್ದಿದ್ದರೆ ಹೀಗಾಗುತ್ತಿರಲಿಲ್ಲ’ ಎಂದು ಪ್ರವೀಣ್ ಅವರ ಪತ್ನಿ ನೂತನಾ ಕಣ್ಣೀರಿಟ್ಟರು.

‘ಸಹಾಯ ಮಾಡುವುದು ಅವರ ಉಸಿರೇ ಆಗಿತ್ತು. ಯಾರೇ ಬಂದು ಕಷ್ಟ ಅಂತ ಹೇಳಿದರೂ ನನ್ನ ಮಾತನ್ನೂ ಕೇಳದೆ ಹೋಗಿ ಸ್ಪಂದಿಸುತ್ತಿದ್ದರು. ಅದುವೇ ಮುಳುವಾಗಿರಬೇಕು’ ಎಂದು ನೂತನಾ ಗದ್ಗದಿತರಾದರು.

‘ಎಲ್ಲರಿಗೂ ಬೇಕಾಗಿದ್ದ ವ್ಯಕ್ತಿ’

ಸೇವೆ, ಸಹಾಯ ಮಾಡುವುದು ಪ್ರವೀಣ್ ಅವರ ಹುಟ್ಟು ಗುಣ. ಸೇವೆಯಲ್ಲಿ ಎಂದೂ ಭೇದ ಮಾಡಿದವರಲ್ಲ. ಎಲ್ಲಾ ಮತ, ಜಾತಿಯವರಿಗೆ ಬೇಕಾಗಿದ್ದವರು. ಕಾನೂನು ಮತ್ತು ಮಾನವೀಯತೆ ಮೀರಿದಾಗ ಅದನ್ನು ಕಠೋರವಾಗಿ ವಿರೋಧಿಸಿಯೂ ಇದ್ದರು. ಮುಸ್ಲಿಮರ ಜೊತೆಯೂ ಸ್ನೇಹದಲ್ಲೇ ಇದ್ದರು. ತಾನು ಬಿಜೆಪಿ ನಾಯಕನಾಗಿದ್ದರೂ ಕಾಂಗ್ರೆಸ್ ಇತರ ಪಕ್ಷದರ ಜೊತೆ ಸೌರ್ಹಾದದಿಂದ ಇದ್ದರು ಎಂದು ಸ್ಮರಿಸುತ್ತಾರೆ ಸ್ಥಳೀಯರು.

ದಕ್ಷಿಣ ಕನ್ನಡ ಜಿಲ್ಲೆ ನೆಟ್ಟಾರು ಗ್ರಾಮದಲ್ಲಿ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಮೃತ ದೇಹದ ಅಂತಿಮ ಯಾತ್ರೆಯ ಮೆರವಣಿಗೆ ವೇಳೆ ರೊಚ್ಚಿಗೆದ್ದ ಹಿಂದೂ ಯುವಕರು ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರ ಕಾರಿಗೆ ಮುತ್ತಿಗೆ ಹಾಕಿ ಕಾರು ಬೀಳಿಸಲು ಯತ್ನಿಸಿದರು
ದಕ್ಷಿಣ ಕನ್ನಡ ಜಿಲ್ಲೆ ನೆಟ್ಟಾರು ಗ್ರಾಮದಲ್ಲಿ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಮೃತ ದೇಹದ ಅಂತಿಮ ಯಾತ್ರೆಯ ಮೆರವಣಿಗೆ ವೇಳೆ ರೊಚ್ಚಿಗೆದ್ದ ಹಿಂದೂ ಯುವಕರು ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರ ಕಾರಿಗೆ ಮುತ್ತಿಗೆ ಹಾಕಿ ಕಾರು ಬೀಳಿಸಲು ಯತ್ನಿಸಿದರು

ಪ್ರವೀಣ್ ನೆಟ್ಟಾರು ಹತ್ಯೆ ಖಂಡನೀಯ. ಪೊಲೀಸರು ಕೊಲೆಗಡುಕರನ್ನು ತಕ್ಷಣ ಬಂಧಿಸಿ, ಊಹಾಪೋಹಗಳಿಂದ ಶಾಂತಿ- ಸುವ್ಯವಸ್ಥೆ ಕದಡುವುದನ್ನು ತಪ್ಪಿಸಬೇಕು. ಕೊಲೆಗಡುಕರ ಜಾತಿ, ಧರ್ಮ, ಪಕ್ಷವನ್ನು ಲೆಕ್ಕಿಸದೆ ಕ್ರಮಕೈಗೊಳ್ಳಬೇಕು

- ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಗೆ ವಿದೇಶಗಳಿಂದ ಆರ್ಥಿಕ ನೆರವು ಬಂದಿರುವ ಗುಮಾನಿ ಇದೆ. ಈ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎನ್‌ಐಎ ತನಿಖೆ ಅಗತ್ಯವಿದೆ. ಮುಖ್ಯಮಂತ್ರಿ ಗಮನಕ್ಕೆ ಇದನ್ನು ತರಲಾಗುವುದು. ರಾಜ್ಯದಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು

- ಡಾ. ಕೆ. ಸುಧಾಕರ್‌, ಆರೋಗ್ಯ ಸಚಿವ

ಪ್ರವೀಣ್‌ ನೆಟ್ಟಾರು ಆದರ್ಶ ಕಾರ್ಯಕರ್ತ. ಯಾವುದೇ ದುಷ್ಕೃತ್ಯಗಳಲ್ಲಿ ಭಾಗಿಯಾದವರಲ್ಲ. ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಅವರ ಹತ್ಯೆ ಬಗ್ಗೆ ಜನರಲ್ಲಿ ಆಕ್ರೋಶ ಮಡುಗಟ್ಟಿದೆ. ಇಂತಹ ಘಟನೆ ಆದಾಗ ಕಾರ್ಯಕರ್ತರು ನನ್ನ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುವುದು ಸಹಜ

- ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ನಾವು ಮನೆಯ ಮಗನನ್ನು ಕಳೆದುಕೊಂಡ ನೋವಿನಲ್ಲಿದ್ದೇವೆ. ಪ್ರವೀಣ್‌ ಹತ್ಯೆಯನ್ನು ನೋಡಿ ಸರ್ಕಾರ ಕೈ‌ಕಟ್ಟಿ ಕುಳಿತಿಲ್ಲ. ಇದಕ್ಕೆ ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ. ಜನರ ಆಕ್ರೋಶ ನಮ್ಮ ಕಣ್ಮುಂದಿದೆ

- ವಿ.ಸುನೀಲ್‌ ಕುಮಾರ್‌, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ

ಕೋಮು ದ್ವೇಷದಿಂದ ಪ್ರವೀಣ್ ನೆಟ್ಟಾರು ಅವರಂತಹ ಕೊಲೆ ಪ್ರಕರಣಗಳಲ್ಲಿ ಅವರ ಪಾಲಕರಿಗೆ ಸಿಕ್ಕಿದ್ದು ಮಕ್ಕಳ ಶವ ಮಾತ್ರ. ಚುನಾವಣೆಗೆ ಒಂಬತ್ತು ತಿಂಗಳು ಇರುವ ಸಂದರ್ಭದಲ್ಲಿ ಮಾತ್ರ ಯಾಕೆ ರೀತಿ ಕೋಮು ಗಲಭೆಗಳು ನಡೆಯುತ್ತವೆ? ಇಂತಹ ಯಕ್ಷಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ.

- ಮಿಥುನ್ ರೈ,‌ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT